ನವದೆಹಲಿ, ಮೇ 23: ಭಾರತದ ಷೇರುಮಾರುಕಟ್ಟೆ (stock market) ಇಂದು ಹೊಸ ಎತ್ತರ ಕಂಡಿದೆ. ಅದರ ಪ್ರಮುಖ ಸೂಚ್ಯಂಕಗಳು (share index) ದಾಖಲೆ ಬರೆದಿವೆ. ಎನ್ಎಸ್ಇಯ ನಿಫ್ಟಿ (Nifty50) ಮತ್ತು ಬಿಎಸ್ಇಯ ಸೆನ್ಸೆಕ್ಸ್ (Sensex30) ಸೂಚ್ಯಂಕ ಹಿಂದಿನ ದಾಖಲೆ ಮೀರಿ ಹೆಚ್ಚಾಗಿವೆ. ಐವತ್ತು ಸ್ಟಾಕ್ಗಳಿರುವ ನಿಫ್ಟಿ50 ಸೂಚ್ಯಂಕ 370 ಅಂಕ ಹೆಚ್ಚಿಸಿಕೊಂಡು 22,967.65 ಮಟ್ಟ ಮುಟ್ಟಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್30 ಸೂಚ್ಯಂಕ ಗುರುವಾರ ದಿನಾಂತ್ಯದಲ್ಲಿ 75,418.04 ಅಂಕಗಳ ಮಟ್ಟ ಮುಟ್ಟಿದೆ. ನಿಫ್ಟಿ ಶೇ. 1.64ರಷ್ಟು ಅಂಕ ಹೆಚ್ಚಿಸಿಕೊಂಡರೆ, ಸೆನ್ಸೆಕ್ಸ್ ಏರಿಕೆ ಶೇ. 1.61ರಷ್ಟಿತ್ತು. ನಿಫ್ಟಿಯಲ್ಲಿದ್ದ 50 ಷೇರುಗಳಲ್ಲಿ 44 ಷೇರುಗಳು ಪಾಸಿಟಿವ್ ಆಗಿದ್ದವು. ಸೆನ್ಸೆಕ್ಸ್ನ 30 ಷೇರುಗಳಲ್ಲಿ 27 ಪಾಸಿಟಿವ್ ಇತ್ತು.
ಇವತ್ತು ನಿಫ್ಟಿ ಒಂದು ಹಂತದಲ್ಲಿ 30,000 ಅಂಕಗಳ ಮೈಲಿಗಲ್ಲಿಗೆ ಬಹಳ ಸಮೀಪ ಹೋಗಿತ್ತು. ಅಂತಿಮವಾಗಿ 22,967.65 ಅಂಕಗಳ ಮಟ್ಟಕ್ಕೆ ನಿಂತಿದೆ. ಸೆನ್ಸೆಕ್ಸ್ ಕೂಡ ಹೆಚ್ಚೂಕಡಿಮೆ 75,500 ಅಂಕಗಳ ಮಟ್ಟಕ್ಕೆ ಹೋಗಿ ತುಸು ಕೆಳಗಿಳಿಯಿತು.
ಚುನಾವಣೆ ಬಳಿಕ ರಾಜಕೀಯ ಸ್ಥಿರತೆ ಬರಬಹುದು ಎನ್ನುವ ವಿಶ್ವಾಸ ಮಾರುಕಟ್ಟೆಗೆ ಬಂದಂತಿದೆ. ಹೀಗಾಗಿ, ದೂರಗಾಮಿ ಬೆಳವಣಿಗೆ ದೃಷ್ಟಿಯಿಂದ ಹೂಡಿಕೆದಾರರು ಗುಣಮಟ್ಟದ ಷೇರುಗಳತ್ತ ಗಮನ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು
ಆರ್ಬಿಐ ಸರ್ಕಾರಕ್ಕೆ ನೀಡುವ ಡಿವಿಡೆಂಡ್ ಅನ್ನು ಈ ಬಾರಿ ಸಖತ್ ಹೆಚ್ಚಿಸಿದೆ. 2023-24ರ ವರ್ಷದ ಲಾಭಾಂಶವಾಗಿ 2.11 ಲಕ್ಷ ಕೋಟಿ ರೂ ಅನ್ನು ಕೊಡುವುದಾಗಿ ಆರ್ಬಿಐ ಘೋಷಿಸಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹಣದ ಹರಿವು ಸಿಕ್ಕಂತಾಗಿದೆ. ಬಂಡವಾಳ ವೆಚ್ಚ ಹೆಚ್ಚಲಿದೆ. ಉದ್ದಿಮೆಗಳಿಗೆ ಇದು ಸಕಾರಾತ್ಮಕ ಸುದ್ದಿ. ಇದು ಮಾರುಕಟ್ಟೆಯನ್ನು ಹರ್ಷಗೊಳಿಸಿದೆ.
ಸರ್ಕಾರದ 10 ವರ್ಷದ ಬಾಂಡ್ ರಿಟರ್ನ್ ಅಥವಾ ಯೀಲ್ಡ್ ಬಹಳಷ್ಟು ಕುಸಿತ ಕಂಡಿದೆ. ಇದರಿಂದ ಬ್ಯಾಂಕಿಂಗ್ ವಲಯದ ಸಂಸ್ಥೆಗಳಿಗೆ ಅನುಕೂಲವಾಗಿದೆ. ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ಸೆನ್ಸೆಕ್ಸ್, ನಿಫ್ಟಿಯಲ್ಲಿ ಲಿಸ್ಟ್ ಆಗಿರುವ ಹೆಚ್ಚಿನ ಬ್ಯಾಂಕ್ ಸ್ಟಾಕ್ಗಳು ಒಳ್ಳೆಯ ಏರಿಕೆ ಪಡೆದಿವೆ. ಇದು ಆಯಾ ಸೂಚ್ಯಂಕಗಳ ಏರಿಕೆಗೂ ಕಾರಣವಾಗಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಲು ಬೇಕು ಡೀಮ್ಯಾಟ್ ಖಾತೆ? ಈ ಅಕೌಂಟ್ ತೆರೆಯುವ ಮುನ್ನ ಕೆಲ ಅಂಶಗಳು ತಿಳಿದಿರಲಿ
ಭಾರತದ ಮಾರುಕಟ್ಟೆಯಿಂದ ವಿದೇಶೀ ಹೂಡಿಕೆದಾರರು (FII) ಬಂಡವಾಳ ಹಿಂತೆಗೆದುಕೊಂಡರೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು (DII) ಹಣ ತುಂಬಿದ್ದಾರೆ. ಈ ತಿಂಗಳು ಮೇ 1ರಿಂದ 22ರವರೆಗೆ ಎಫ್ಐಐಗಳು ಹಿಂಪಡೆದ ಹೂಡಿಕೆ ಮೊತ್ತ 38,186 ಕೋಟಿ ರೂ ಆಗಿದೆ. ಇದೇ ಅವಧಿಯಲ್ಲಿ ಡಿಐಐಗಳಿಂದ ಹೂಡಿಕೆಯಾದ ಹಣ 38,331 ಕೋಟಿ ರೂ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ