
ನವದೆಹಲಿ, ಜುಲೈ 25: ಭಾರತದ ಷೇರು ಮಾರುಕಟ್ಟೆ (stock market) ನಿನ್ನೆಯಿಂದ ನಿರಂತರವಾಗಿ ಕುಸಿಯುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಎರಡೂ ಪ್ರಧಾನ ಸೂಚ್ಯಂಕಗಳು ನಷ್ಟ ಕಾಣುತ್ತಿವೆ. ಇಂದು ಶುಕ್ರವಾರ ಸೆನ್ಸೆಕ್ಸ್ 721 ಅಂಕಗಳಷ್ಟು ಕುಸಿದು 81,463.09 ಅಂಕಗಳೊಂದಿಗೆ ದಿನಾಂತ್ಯಗೊಳಿಸಿತ್ತು. ಇವತ್ತು ಒಂದು ಹಂತದಲ್ಲಿ 81,397 ಅಂಕಗಳ ಮಟ್ಟಕ್ಕೆ ಇಳಿದಿತ್ತು. ಇನ್ನೊಂದೆಡೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 225 ಅಂಕಗಳ ನಷ್ಟ ಕಂಡು 24,837 ಮಟ್ಟಕ್ಕೆ ಇಳಿದಿತ್ತು.
ಈ ಎರಡೂ ಷೇರು ವಿನಿಮಯ ಕೇಂದ್ರಗಳಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸ್ಟಾಕುಗಳ ಮೌಲ್ಯ ಶೇ. 2ರಷ್ಟು ಕುಸಿದಿತ್ತು. ನಿನ್ನೆ ಮತ್ತು ಇವತ್ತಿನ ನಷ್ಟ ಪರಿಗಣಿಸಿದರೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡು ದಿನದಲ್ಲಿ ಶೇ. 1.5ರಷ್ಟು ಕುಸಿದಿವೆ. ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟವಾಗಿದೆ.
ಭಾರತ ಮತ್ತು ಬ್ರಿಟನ್ ನಡುವೆ ಟ್ರೇಡ್ ಡೀಲ್ಗೆ ಸಹಿ ಬಿದ್ದರೆ ಮಾರುಕಟ್ಟೆ ಗರಿಗೆದರುತ್ತದೆ ಎಂಬ ಸಹಜ ಎಣಿಕೆ ತಪ್ಪಾಗಿದೆ. ಭಾರತದ ಷೇರು ಮಾರುಕಟ್ಟೆ ಕಾರಣ ಇಲ್ಲದೇ ಕುಸಿಯುತ್ತಿದೆಯಾ? ಏನಿರಬಹುದು ಸಂಭಾವ್ಯ ಕಾರಣ?
ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಬ್ರಿಟನ್ ಜೊತೆ ಭಾರತ ಟ್ರೇಡ್ ಡೀಲ್ ಜ್ಯಾಕ್ಪಾಟ್ ಹೊಡೆದರೂ ಅಮೆರಿಕದ ಜೊತೆ ಡೀಲ್ ಕುದುರಿಸಲು ಆಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಏಷ್ಯಾದ ಕೆಲ ದೇಶಗಳು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಭಾರತಕ್ಕೆ ಮಾರುಕಟ್ಟೆ ಪ್ರತಿಸ್ಪರ್ಧಿಗಳಾದ ಫಿಲಿಪ್ಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ ದೇಶಗಳೂ ಸೇರಿವೆ. ಭಾರತಕ್ಕೆ ಒಪ್ಪಂದ ಅಂತಿಮಗೊಳಿಸಲು ವಿಳಂಬವಾಗಿರುವುದು ಅನಿಶ್ಚಿತ ಸ್ಥಿತಿ ಎಂಬಂತೆ ಮಾರುಕಟ್ಟೆಗೆ ಭಾಸವಾಗಿರಬಹುದು.
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಮಾರುವ ಧಾವಂತದಲ್ಲಿದ್ದಾರೆ. ಜುಲೈ ತಿಂಗಳಲ್ಲಿ 28,528 ಕೋಟಿ ರೂ ಷೇರುಗಳನ್ನು ಮಾರಿದ್ದಾರೆ. ಕಳೆದ ನಾಲ್ಕು ದಿನಗಳಲ್ಲೇ 11,572 ಕೋಟಿ ಷೇರುಗಳನ್ನು ಎಫ್ಪಿಐಗಳು ಮಾರಿವೆ. ಇದು ಮಾರುಕಟ್ಟೆ ಕುಸಿಯಲು ಒಂದು ಕಾರಣವಾಗಿರಬಹುದು.
ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಭಾರತೀಯ ಕಂಪನಿಗಳ ಹಣಕಾಸು ವರದಿಗಳು ಪ್ರಕಟವಾಗಿವೆ. ಐಟಿ ಮತ್ತು ಹಣಕಾಸು ಸೆಕ್ಟರ್ಗಳಲ್ಲಿ ಕಂಪನಿಗಳ ಗಳಿಕೆ ತುಸು ನಿರಾಸೆ ಮೂಡಿಸಿವೆ. ಇದು ಹೂಡಿಕೆದಾರ ಉತ್ಸಾಹವನ್ನು ಕುಂದಿಸಿರಬಹುದು.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿಯಬಹುದು: ರಾಬರ್ಟ್ ಕಿಯೋಸಾಕಿ ಭವಿಷ್ಯ
ನಿಫ್ಟಿ50 ಸೂಚ್ಯಂಕವು 25,000 ಅಂಕಗಳ ಮಟ್ಟಕ್ಕಿಂತ ಕೆಳಗೆ ಬಂದಿದೆ. ನಿಫ್ಟಿಗೆ ಇದು ಸಪೋರ್ಟಿಂಗ್ ಲೆವೆಲ್ ಎನಿಸಿತ್ತು. ಈ ಮಟ್ಟಕ್ಕಿಂತ ಕೆಳಗೆ ಇಳಿದಿದೆ. 24,837 ಮಟ್ಟದಲ್ಲಿದೆ. ತಜ್ಞರ ಪ್ರಕಾರ, ನಿಫ್ಟಿ 25,340 ಅಂಕಗಳನ್ನ ಮಟ್ಟಕ್ಕಿಂತ ಮೇಲೆ ಹೋಗಲು ಯಶಸ್ವಿಯಾಗುವವರೆಗೂ ಇದೇ ರೀತಿ ಮಂದ ವಾತಾವರಣ ನೆಲಸಿರುತ್ತದೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ