ನವದೆಹಲಿ: ಭಾರತದ ಷೇರು ಮಾರುಕಟ್ಟೆ ಉಚ್ಛ್ರಾಯ ಸ್ಥಿತಿ ತಲುಪಿದೆ. ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳು (Sensex and Nifty Index) ಗರಿಷ್ಠ ಮಟ್ಟಕ್ಕೆ ಏರಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ ಕಳೆದ 3 ದಿನಗಳಿಂದ 1,800 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಮೊನ್ನೆ ಸೆನ್ಸೆಕ್ಸ್ ಮೊದಲ ಬಾರಿಗೆ 64,000 ಅಂಕಗಳ ಗಡಿ ದಾಟಿ ಹೋಗಿತ್ತು. ಇದೀಗ 65,000 ಅಂಕಗಳ ಗಡಿ ಸಮೀಪ ಲಗ್ಗೆ ಹಾಕುತ್ತಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ50 ಸೂಚ್ಯಂಕ ಮೊದಲ ಬಾರಿಗೆ 19,000 ಅಂಕಗಳ ಗಡಿ ದಾಟಿ 19,201.70 ಅಂಕಗಳಲ್ಲಿದೆ. ಇವೆರಡೂ ಸೂಚ್ಯಂಕಗಳಿಗೆ ಇದು ಈವರೆಗಿನ ಗರಿಷ್ಠ ಎತ್ತರವಾಗಿದೆ.
ಸೆನ್ಸೆಕ್ಸ್ ಎಂಬುದು ಸೆನ್ಸಿಟಿವ್ ಇಂಡೆಕ್ಸ್ ಪದಗಳ ಲಘು ರೂಪ. ಬಿಎಸ್ಇ ಷೇರುವಿನಿಮಯ ಕೇಂದ್ರದಲ್ಲಿ ಲಿಸ್ಟ್ ಆಗಿರುವ ಷೇರುಗಳ ಪೈಕಿ ಆಯ್ದ 30 ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳನ್ನು ಸೆನ್ಸೆಕ್ಸ್ ಸೂಚ್ಯಂಕಕ್ಕೆ ಸೇರಿಸಲಾಗುತ್ತದೆ. 30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ ಒಟ್ಟಾರೆ ಬಿಎಸ್ಇ ಷೇರುಪೇಟೆಯ ಸ್ಥಿತಿಗೆ ಕನ್ನಡಿ ಹಿಡಿಯುವ ರೀತಿಯಲ್ಲಿ ಪಟ್ಟಿ ಇರುತ್ತದೆ. ಬೇರೆ ಬೇರೆ ವಲಯಗಳಿಗೆ ಪ್ರತ್ಯೇಕವಾದ ಸೂಚ್ಯಂಕಗಳು ಇರುತ್ತವೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿಯಲ್ಲೂ ಇದೇ ರೀತಿಯಲ್ಲಿ ಪ್ರಮುಖ ಸೂಚ್ಯಂಕ ಹಾಗೂ ವಲಯವಾರು ಪ್ರತ್ಯೇಕ ಸೂಚ್ಯಂಕಗಳು ಇರುತ್ತವೆ.
ಇದನ್ನೂ ಓದಿ: Multibagger Stock: ಮಿಂಚಿನಂತೆ ಏರುತ್ತಿರುವ ಡಿದೇವ್ ಪ್ಲಾಸ್ಟಿಕ್ಸ್ ಷೇರು; 1 ವರ್ಷದಲ್ಲಿ 4 ಪಟ್ಟು ಬೆಳೆದಿದೆ ಮಲ್ಟಿಬ್ಯಾಗರ್
ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ ಅಥವಾ ಮಾರುಕಟ್ಟೆ ಬಂಡವಾಳವನ್ನು ಷೇರುಸಂಪತ್ತು ಎಂದು ಕರೆಯಬಹುದು. ಆ ಕಂಪನಿಯ ಷೇರುಗಳು ಹಾಗೂ ಅದರ ಬೆಲೆಯ ಮೊತ್ತವೇ ಷೇರುಸಂಪತ್ತು. ಒಂದು ಕಂಪನಿ 1 ಕೋಟಿಯಷ್ಟು ಷೇರುಗಳನ್ನು ಹೊಂದಿದ್ದು, ಪ್ರತೀ ಷೇರಿನ ಬೆಲೆ 100 ರೂ ಆಗಿದ್ದರೆ, ಆ ಕಂಪನಿಯ ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು 100 ಕೋಟಿ ಆಗುತ್ತದೆ.
ಆದರೆ, ಒಂದು ಕಂಪನಿಯಲ್ಲಿ ಇರುವ ಎಲ್ಲಾ ಷೇರುಗಳೂ ಸಾರ್ವಜನಿಕರಿಗೆ ಲಭ್ಯ ಇರುವುದಿಲ್ಲ. ಕಂಪನಿಯ ಮಾಲೀಕರು ಸೇರಿದಂತೆ ಪ್ರೊಮೋಟರ್ಗಳು ಇಂತಿಷ್ಟು ಪ್ರಮಾಣದ ಷೇರುಗಳನ್ನು ಹೊಂದಿದ್ದು, ಅವುಗಳು ಮಾರುಕಟ್ಟೆಯಲ್ಲಿ ವಹಿವಾಟು ಕಾಣುವುದಿಲ್ಲ. ಸಾರ್ವಜನಿಕರಿಗೆ ಲಭ್ಯ ಇರುವ ಷೇರುಗಳಷ್ಟೇ ಪೇಟೆಯಲ್ಲಿ ಬಿಕರಿಯಾಗುವುದು. ಟ್ರೇಡಿಂಗ್ಗೆ ಸಾರ್ವಜನಿಕವಾಗಿ ಲಭ್ಯ ಇರುವ ಷೇರುಗಳ ಪ್ರಮಾಣದ ಮೇಲೆ ಫ್ರೀ ಫ್ಲೋಟ್ ಫ್ಯಾಕ್ಟರ್ ಗಣಿಸಲಾಗುತ್ತದೆ.
ಹೀಗೆ ಒಂದು ಕಂಪನಿಯ ಫ್ರೀ ಫ್ಲೋಟ್ ಮಾರ್ಟೆಕ್ ಕ್ಯಾಪ್ ನಿರ್ಧಾರವಾದ ಬಳಿಕ ಅದರ ಆಧಾರದ ಮೇಲೆ ಸೆನ್ಸೆಕ್ಸ್ ಮೌಲ್ಯ ನಿರ್ಧಾರವಾಗುತ್ತದೆ.
ಇದನ್ನೂ ಓದಿ: Original Documents: ಬ್ಯಾಂಕ್ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು
ಸೆನ್ಸೆಕ್ಸ್ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಫ್ರೀ ಫ್ಲೋಟಿಂಗ್ ಷೇರುಸಂಪತ್ತು ಮೊತ್ತವನ್ನು ಎ ಎಂದು ಪರಿಗಣಿಸೋಣ. ಬೇಸ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನು ಬಿ ಎಂದು ಪರಿಗಣಿಸಬಹುದು. ಬೇಸ್ ಪೀರಿಯಡ್ ಇಂಡೆಕ್ಸ್ ಮೌಲ್ಯವನ್ನು ಸಿ ಎನ್ನಬಹುದು.
ಇದರಲ್ಲಿ ಬೇಸ್ ವರ್ಷ 1978-79. ಅದರ ಬೇಸ್ ವ್ಯಾಲ್ಯೂ 100 ಇಂಡೆಕ್ಸ್ ಅಂಕಗಳು.
ಈಗ ಸೆನ್ಸೆಕ್ಸ್ ಮೌಲ್ಯ ಎಷ್ಟೆಂದು ನಿರ್ಧರಿಸಲು ಈ ಮುಂದಿನ ಸೂತ್ರ ಅನುಸರಿಸಲಾಗುತ್ತದೆ.
ಸೆನ್ಸೆಕ್ಸ್ ಮೌಲ್ಯ = ಎ/ಬಿ X 100
ಇಲ್ಲಿ ಎ ಎಂಬುದು ಫ್ರೀ ಫ್ಲೋಟಿಂಗ್ ಮಾರ್ಕೆಟ್ ಕ್ಯಾಪ್ ಆದರೆ, ಬಿ ಎಂಬುದು ಬೇಸ್ ವರ್ಷವಾದ 1978-79ರಲ್ಲಿ ಇದ್ದ ಷೇರು ಸಂಪತ್ತು ಮೊತ್ತವಾಗುತ್ತದೆ. ಈ ಸೂತ್ರದ ಪ್ರಕಾರ ಸೆನ್ಸೆಕ್ಸ್ ಅಂಕಗಳು ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ