Stock Market Closing Bell: ಸೆನ್ಸೆಕ್ಸ್ 740 ಪಾಯಿಂಟ್ಸ್, ನಿಫ್ಟಿ 173 ಪಾಯಿಂಟ್ಸ್ ಏರಿಕೆ

ಮಾರ್ಚ್ 30, 2022ರ ಬುಧವಾರದಂದು ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏರಿಕೆಯನ್ನು ದಾಖಲಿಸಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Stock Market Closing Bell: ಸೆನ್ಸೆಕ್ಸ್ 740 ಪಾಯಿಂಟ್ಸ್, ನಿಫ್ಟಿ 173 ಪಾಯಿಂಟ್ಸ್ ಏರಿಕೆ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Mar 30, 2022 | 7:12 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಾರ್ಚ್​ 30ನೇ ತಾರೀಕಿನ ಬುಧವಾರ ಸತತ ಮೂರನೇ ಸೆಷನ್ ಏರಿಕೆ ಕಂಡಿದೆ. ಆ ಮೂಲಕ ಆರು ವಾರಗಳ ಗರಿಷ್ಠ ಎತ್ತರವನ್ನು ಮುಟ್ಟಿದೆ. ರಷ್ಯಾ-ಉಕ್ರೇನ್ ಮಧ್ಯದ ಮಾತುಕತೆಯಲ್ಲಿನ ಪ್ರಗತಿ ಹಾಗೂ ವಾಹನ, ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್ ಮತ್ತು ರಿಯಾಲ್ಟಿ ವಲಯದಲ್ಲಿನ ಏರಿಕೆ ಕಾರಣಕ್ಕೆ ಇಂಥದ್ದೊಂದು ಬೆಳವಣಿವೆ ಆಗಿದೆ. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 740.34 ಅಥವಾ ಶೇ 1.28ರಷ್ಟು ಮೇಲೇರಿ 58,683.99 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿದರೆ, ನಿಫ್ಟಿ 173 ಪಾಯಿಂಟ್ಸ್ ಅಥವಾ ಶೇ 1ರಷ್ಟು ಗಳಿಕೆ ಕಂಡು, 17,498.30 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಆಯಿತು. “ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡುಬಂತು. ಆದರೆ ರಷ್ಯಾ ಮತ್ತು ಉಕ್ರೇನ್ ಮಧ್ಯದ ಮಾತುಕತೆಯ ಭರವಸೆ ಯುದ್ಧದ ಉದ್ವಿಗ್ನತೆ ಕಡಿಮೆ ಮಾಡಿದೆ. ಅದರಿಂದಾಗಿ ದೇಶೀ ಮಾರುಕಟ್ಟೆ ವಿಶ್ವಾಸದಿಂದ ವ್ಯವಹಾರ ಮಾಡಲು ಸಹಾಯ ಆಗಿದೆ,” ಎಂದು ಜಿಯೋಜಿತ್ ಫೈನಾನ್ಷಿಯಲ್ ರೀಸರ್ಚ್​ ಮುಖ್ಯಸ್ಥರಾದ ವಿನೋದ್​ ನಾಯರ್ ಹೇಳಿದ್ದಾರೆ.

ಕಚ್ಚಾ ತೈಲ ಬೆಲೆ ಮತ್ತು ಇತರ ಪದಾರ್ಥಗಳ ಬೆಲೆಯಲ್ಲಿನ ಇಳಿಕೆ ಕೂಡ ಮಾರುಕಟ್ಟೆಯನ್ನು ಬೆಂಬಲಿಸಿದೆ. ಬಿಎಸ್​ಇ ವಾಹನ, ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ತಲಾ ಶೇ 1ರಷ್ಟು ಏರಿಕೆ ಕಂಡಿದೆ. ಲೋಹದ ಸೂಚ್ಯಂಕ ಹತ್ತಿರಹತ್ತಿರ ಶೇ 3ರಷ್ಟು ಇಳಿದರೆ, ವಿದ್ಯುತ್ ಶೇ 0.4ರಷ್ಟು ಹಾಗೂ ತೈಲ ಮತ್ತು ಅನಿಲ ಶೇ 0.8ರಷ್ಟು ಕುಸಿತ ಕಂಡಿವೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಬಜಾಜ್ ಫಿನ್​ಸರ್ವ್ ಶೇ 3.80
ಎಚ್​ಡಿಎಫ್​ಸಿ ಲೈಫ್ ಶೇ 3.69
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ 3.05
ಬಜಾಜ್ ಫೈನಾನ್ಸ್ ಶೇ 3.02
ಹೀರೋ ಮೋಟೋಕಾರ್ಪ್ ಶೇ 2.76

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಒಎನ್​ಜಿಸಿ ಶೇ -5.26
ಹಿಂಡಾಲ್ಕೋ ಶೇ -4.99
ಜೆಎಸ್​ಡಬ್ಲ್ಯು ಸ್ಟೀಲ್ ಶೇ -4.82
ಐಟಿಸಿ ಶೇ -2.12
ಟಾಟಾ ಸ್ಟೀಲ್ ಶೇ -1.99

ಇದನ್ನೂ ಓದಿ: Paytm: ಪೇಟಿಎಂಗೆ ಗ್ರಾಹಕರು ಸಿಕ್ಕಿರುವುದು ಕ್ಯಾಶ್​ಬ್ಯಾಕ್​ಗಳಿಂದಲೇ ಹೊರತು ಸೇವೆಯಿಂದಲ್ಲ ಎಂದ ಹಿರಿಯ ಬ್ಯಾಂಕರ್