ECLGS: ಎಂಎಸ್ಎಂಇಗಳಿಗೆ ತುರ್ತು ಸಾಲದ ಯೋಜನೆ 2023ರ ಮಾರ್ಚ್ ತನಕ ವಿಸ್ತರಿಸಿದ ಕೇಂದ್ರ ಸರ್ಕಾರ
ಎಂಎಸ್ಎಂಇಗಳಿಗೆ ತುರ್ತು ಕ್ರೆಡಿಟ್ ಸಾಲ ಯೋಜನೆಯನ್ನು 2023ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಲಾಗಿದೆ.
ಕೊವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚುವರಿ ಸಾಲವನ್ನು ಪಡೆಯಲು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಹಾಯ ಮಾಡಿದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು 2023ರ ಮಾರ್ಚ್ವರೆಗೆ ವಿಸ್ತರಿಸಲಾಗಿದೆ ಮತ್ತು ಅದರ ಖಾತ್ರಿ ಕವರ್ ಅನ್ನು 50,000 ಕೋಟಿ ರೂಪಾಯಿಗಳಿಂದ 5 ಲಕ್ಷಕ್ಕೆ ಕೋಟಿ ರೂಪಾಯಿಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಬುಧವಾರ (ಮಾರ್ಚ್ 30, 2022) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ 2023ರ ಮಾರ್ಚ್ವರೆಗೆ ಇಸಿಎಲ್‌ಜಿಎಸ್ ವಿಸ್ತರಣೆಯನ್ನು ಘೋಷಿಸಿದ್ದರು ಮತ್ತು ಹೆಚ್ಚುವರಿ ಮೊತ್ತವನ್ನು ಆತಿಥ್ಯ ಹಾಗೂ ಸಂಬಂಧಿತ ವಲಯಗಳಿಗೆ ಕೊವಿಡ್ ಬಿಕ್ಕಟ್ಟಿನ ನಂತರದ ಹೊಡೆತದಿಂದ ಹೊರಬರುವುದಕ್ಕೆ ಪ್ರತ್ಯೇಕವಾಗಿ ಮೀಸಲಿಡಲಾಗುವುದು ಎಂದು ಹೇಳಿದ್ದರು.
ECLGS 3.0ಗಾಗಿ ಹೊಸ ಕಾರ್ಯಾಚರಣೆ ಮಾರ್ಗಸೂಚಿಗಳ ಭಾಗವಾಗಿ, ಮಾರ್ಚ್ 31, 2021ರ ನಂತರ ಮತ್ತು ಜನವರಿ 31, 2022ರವರೆಗೆ ಸಾಲ ಪಡೆದಿರುವ ಆತಿಥ್ಯ, ಪ್ರಯಾಣ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳಿಂದ ಹೊಸ ಸಾಲಗಾರರೂ ECLGS 3.0 ಅಡಿಯಲ್ಲಿ ತುರ್ತು ಸಾಲ ಸೌಲಭ್ಯಗಳು ಪಡೆಯಲು ಈಗ ಅರ್ಹರಾಗಿರುತ್ತಾರೆ. ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕೋ ಕೂಡ ECLGSನ ಮೂರನೇ ಆವೃತ್ತಿಯ ಅಡಿಯಲ್ಲಿ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಿದೆ. ವಿಸ್ತೃತ ECLGS ಯೋಜನೆಯ ಭಾಗವಾಗಿ ಕಂಪೆನಿಗಳು ಸಾಲ ಪಡೆಯಲು ಉಲ್ಲೇಖ ದಿನಾಂಕವಾಗಿ ಜನವರಿ 31, 2022 ಅನ್ನು ಸರ್ಕಾರ ನಿಗದಿಪಡಿಸಿದೆ.
ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮದಲ್ಲಿನ ಕಂpಎನಿಗಳು ಈಗ ECLGS 1.0 ಮತ್ತು ECLGS 2.0ರ ಭಾಗವಾಗಿ ಅವರ ಸಾಲದ ಶೇ 40ಕ್ಕೆ ವಿರುದ್ಧವಾಗಿ ತಮ್ಮ ಅತ್ಯಧಿಕ ನಿಧಿ ಆಧಾರಿತ ಸಾಲ ಬಾಕಿಯ ಶೇ 50ರಷ್ಟು ಸಾಲವನ್ನು ಪಡೆಯಬಹುದು ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮದ ಒಂದು MSMEಯಿಂದ ಗರಿಷ್ಠ ಸಾಲದ ಮಿತಿ ಇನ್ನೂ 200 ಕೋಟಿ ರೂಪಾಯಿ ಮಾತ್ರ ಇದೆ. ಅದೇ ರೀತಿ, ನಾಗರಿಕ ವಿಮಾನಯಾನ ಉದ್ಯಮದಲ್ಲಿನ ಕಂಪೆನಿಗಳು ಈಗ ECLGS ಯೋಜನೆಯ ಹಿಂದಿನ ಆವೃತ್ತಿಗಳ ಭಾಗವಾಗಿ ತಮ್ಮ ಸಾಲದ ಬಾಕಿಯ ಶೇ 40ಕ್ಕೆ ವಿರುದ್ಧವಾಗಿ ತಮ್ಮ ಅತ್ಯಧಿಕ ನಿಧಿ ಆಧಾರಿತ ಸಾಲ ಬಾಕಿಯ ಶೇ 50ರಷ್ಟು ಸಾಲವನ್ನು ಪಡೆಯಬಹುದು.
ವಿಮಾನಯಾನ ಉದ್ಯಮದಿಂದ ಒಂದು ಎಂಎಸ್‌ಎಂಇಯಿಂದ ಗರಿಷ್ಠ ಸಾಲ ಪಡೆಯುವ ಮಿತಿಯನ್ನು ಹಿಂದಿನ ರೂ. 200 ಕೋಟಿಯಿಂದ ರೂ. 400 ಕೋಟಿಗೆ ಹೆಚ್ಚಿಸಲಾಗಿದೆ. ECLGS ಅಡಿಯಲ್ಲಿ ಕೊವಿಡ್ ನಿರ್ಬಂಧಗಳಿಂದ ಉಂಟಾಗುವ ಲಿಕ್ವಿಡಿಟಿ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡುವುದಕ್ಕೆ ಹೆಚ್ಚುವರಿ ಆಧಾರವನ್ನು ಕೇಳದೆಯೇ ಬ್ಯಾಂಕ್ಗಳು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಹೆಚ್ಚುವರಿ ಸಾಲಗಳನ್ನು ಒದಗಿಸುತ್ತವೆ. ಈ ಸಾಲಗಳು ಕ್ರೆಡಿಟ್ ನಷ್ಟದ ವಿರುದ್ಧ ಸರ್ಕಾರದಿಂದ ಸಂಪೂರ್ಣವಾಗಿ ಖಾತ್ರಿಪಡಿಸುತ್ತದೆ. ಮಾರ್ಚ್ 25, 2022ರಂತೆ ECLGS ಅಡಿಯಲ್ಲಿ ಮಂಜೂರಾದ ಸಾಲಗಳು 3.19 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಮತ್ತು ನೀಡಲಾದ ಸುಮಾರು ಶೇ 95ರಷ್ಟು ಗ್ಯಾರಂಟಿಗಳು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮಂಜೂರಾದ ಸಾಲಗಳಿಗೆ ಆಗಿದೆ.
ಇದನ್ನೂ ಓದಿ: Business Loan: ಅನ್ಸೆಕ್ಯೂರ್ಡ್ ಉದ್ಯಮ ಸಾಲ ಪಡೆಯುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳಿವು