ಕಳಾನಿಧಿ ಮಾರನ್, ಕೆಎಎಲ್ ಏರ್ವೇಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್; 1,300 ಕೋಟಿ ರೂ ಕತ್ತಿಯಿಂದ ಪಾರಾದ ಸ್ಪೈಸ್ಜೆಟ್
Delhi High Court reject Kalanidhi Maran's claim for Rs. 1,300 crore from SpiceJet: ಸ್ಪೈಸ್ಜೆಟ್ನಿಂದ 1,300 ಕೋಟಿ ರೂ ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿ ಸನ್ನೆಟ್ವರ್ಕ್ನ ಕಳಾನಿದಿ ಮಾರನ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. 2015ರಲ್ಲಿ ತಮ್ಮೆಲ್ಲಾ ಷೇರುಗಳನ್ನು ಸ್ಪೈಸ್ಜೆಟ್ ಸಂಸ್ಥಾಪಕ ಅಜಯ್ ಸಿಂಗ್ಗೆ ವರ್ಗಾಯಿಸಿದ್ದು, ಒಪ್ಪಂದದಂತೆ ತಮಗೆ ಕರ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲಾಗಿಲ್ಲ ಎಂಬುದು ಮಾರನ್ ಅವರ ಆರೋಪ.

ನವದೆಹಲಿ, ಮೇ 26: ಸ್ಪೈಸ್ಜೆಟ್ನಿಂದ (SpiceJet) ತಮಗಾಗಿರುವ ಹಾನಿಗೆ ಪರಿಹಾರವಾಗಿ 1,300 ಕೋಟಿ ರೂ ದೊರಕಿಸಿಕೊಡಬೇಕೆಂದು ಉದ್ಯಮಿ ಕಳಾನಿದಿ ಮಾರನ್ (Kalanidhi Maran) ಮತ್ತು ಕೆಎಎಲ್ ಏರ್ವೇಸ್ (KAL Airways) ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೂ ತಿರಸ್ಕರಿಸಿದೆ. ಮೇ 23ರಂದು ಈ ತೀರ್ಪು ಬಂದಿದೆ ಎನ್ನಲಾಗಿದ್ದು, ಈ ಸಂಗತಿಯನ್ನು ಸ್ಪೈಸ್ಜೆಟ್ ಏರ್ಲೈನ್ಸ್ ಸಂಸ್ಥೆ ಇಂದು ಸೋಮವಾರ ತನ್ನ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಸ್ಪೈಸ್ಜೆಟ್ನ ಷೇರುಬೆಲೆ ಇಂದು ಏರುತ್ತಿದೆ.
‘ಮೂವರು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿ ಬಹಳ ಪರಿಶೀಲನೆ ನಡೆಸಿ ತಿರಸ್ಕರಿಸಿತ್ತು. ಅದಾದ ಬಳಿಕ ಕೆಎಎಲ್ ಏರ್ವೇಸ್ ಮತ್ತು ಕಳಾನಿದಿ ಮಾರನ್ ಅವರು ದೆಹಲಿ ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಿದ್ದರು. ಆ ಕೋರ್ಟ್ನಲ್ಲೂ ತಿರಸ್ಕೃತವಾಗಿದೆ’ ಎಂದು ರೆಗ್ಯುಲೇಟರಿ ಫೈಲಿಂಗ್ನಲ್ಲಿ ಸ್ಪೈಸ್ಜೆಟ್ ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಜಪಾನ್ ಹಿಂದಿಕ್ಕಿದ್ದೇವೆಂದು ತೃಪ್ತರಾಗದಿರಿ… ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
ಸ್ಪೈಸ್ಜೆಟ್ ಮತ್ತು ಕಳಾನಿಧಿ ಮಾರನ್ ನಡುವಿನ ವಿವಾದವೇನು?
ಕೆಎಎಲ್ ಏರ್ವೇಸ್ ಎಂಬುದು ಸನ್ ನೆಟ್ವರ್ಕ್ನ ಮುಖ್ಯಸ್ಥ ಕಳಾನಿದಿ ಮಾರನ್ ಅವರ ಹೂಡಿಕೆ ಸಂಸ್ಥೆ. ಸ್ಪೈಸ್ಜೆಟ್ ಜೊತೆಗಿನ ಇವರ ಸಂಬಂಧ ದಶಕಗಳದ್ದು. ಕೆಎಎಲ್ ಏರ್ವೇಸ್ ಮತ್ತು ಕಳಾನಿದಿ ಮಾರನ್ ಅವರು ಸ್ಪೈಸ್ಜೆಟ್ನಲ್ಲಿ ಶೇ. 37.7ರಷ್ಟಿದ್ದ ತಮ್ಮ ಷೇರುಪಾಲನ್ನು 2010ರಲ್ಲಿ ಶೇ. 58.46ಕ್ಕೆ ಹೆಚ್ಚಿಸಿಕೊಂಡಿದ್ದರು.
2015ರ ಫೆಬ್ರುವರಿಯಲ್ಲಿ ತಮ್ಮ ಅಷ್ಟೂ ಷೇರುಗಳನ್ನು ಸ್ಪೈಸ್ಜೆಟ್ ಸಹ-ಸಂಸ್ಥಾಪಕ ಅಜಯ್ ಸಿಂಗ್ ಅವರಿಗೆ ಮರಳಿಸಿದ್ದರು.
ಒಪ್ಪಂದದ ಪ್ರಕಾರ ಕ್ವನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಷೇರುಗಳನ್ನು ನೀಡಲು ಸ್ಪೈಸ್ಜೆಟ್ಗೆ ತಾವು 679 ಕೋಟಿ ರೂ ಪಾವತಿಸಿದ್ದೆವು. ಆದರೆ, ತಮಗೆ ಈ ವಾರಂಟ್ ಮತ್ತು ಪ್ರಿಫರೆನ್ಸ್ ಷೇರು ನೀಡಲಾಗಿಲ್ಲ ಎಂದು ಮಾರನ್ ಆರೋಪ ಮಾಡಿ, 2018ರಲ್ಲಿ ಸ್ಪೈಸ್ಜೆಟ್ ವಿರುದ್ಧ ನ್ಯಾಯಮಂಡಳಿ ಮೆಟ್ಟಿಲೇರಿ 1,323 ಕೋಟಿ ರೂ ಹಾನಿ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ
ಆದರೆ, ಮೂವರು ನಿವೃತ್ತ ಸುಪ್ರೀಂ ನ್ಯಾಯಮೂರ್ತಿಗಳಿದ್ದ ನ್ಯಾಯಮಂಡಳಿಯು ಮಾರನ್ ಅರ್ಜಿಯನ್ನು ಭಾಗಶಃ ತಿರಸ್ಕರಿಸಿತು. 1,323 ಕೋಟಿ ಪರಿಹಾರ ಒದಗಿಸುವ ಮನವಿಯನ್ನು ತಿರಸ್ಕರಿಸಿತು. ಆದರೆ, 579 ಕೋಟಿ ರೂ ಹಣವನ್ನು ಬಡ್ಡಿಸಮೇತವಾಗಿ ಮಾರನ್ ಅವರಿಗೆ ನೀಡಬೇಕೆಂದು ಸ್ಪೈಸ್ಜೆಟ್ಗೆ ಸೂಚಿಸಿತು.
ಕೆಎಎಲ್ ಏರ್ವೇಸ್ ಮತ್ತು ಮಾರನ್ ಅವರು ದೆಹಲಿ ಹೈಕೋರ್ಟ್ನ ಏಕಸದಸ್ಯ ಪೀಠಕ್ಕೆ ಮೇಲ್ಮನವಿ ಮಾಡಿದರು. ಅದೂ ಕೂಡ ಟ್ರಿಬ್ಯುನಲ್ ತೀರ್ಪನ್ನು ಎತ್ತಿಹಿಡಿಯಿತು. ಈಗ ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠ ಕೂಡ 2025ರ ಮೇ 2ರಂದು ಇದೇ ತೀರ್ಪು ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








