ನವದೆಹಲಿ, ಮಾರ್ಚ್ 24: ಸತತ ಐದು ತಿಂಗಳು ನಷ್ಟ ಕಂಡಿದ್ದ ಭಾರತದ ಷೇರು ಮಾರುಕಟ್ಟೆ (stock market) ಈಗ ರಬ್ಬರ್ ಬ್ಯಾಂಡ್ ರೀತಿ ಪುಟಿದೆದ್ದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳು ಇಂದು ಸೋಮವಾರ ಸಖತ್ ಏರಿಕೆ ಕಂಡಿವೆ. ಬಿಎಸ್ಇ ಸೆನ್ಸೆಕ್ಸ್ ಸಾವಿರಕ್ಕೂ ಅಧಿಕ ಅಂಕಗಳನ್ನು ಗಳಿಸಿದೆ. ನಿಫ್ಟಿ50 ಸೂಚ್ಯಂಕ 300ಕ್ಕೂ ಅಧಿಕ ಅಂಕಗಳನ್ನು ಪಡೆಯಿತು. ಈ ವರ್ಷ (ಜನವರಿಯಿಂದ ಈಚೆ) ಕಂಡಿದ್ದ ನಷ್ಟವೆಲ್ಲವೂ ಈಗ ಭರ್ತಿಯಾಗಿದೆ. ಸತತ ಆರನೇ ಸೆಷನ್ ಮಾರುಕಟ್ಟೆ ಹಸಿರುಬಣ್ಣದಲ್ಲಿ ಅಂತ್ಯಗೊಂಡಿದೆ. ಈ ಗೂಳಿ ಓಟದಲ್ಲಿ ಮಾರುಕಟ್ಟೆ 30 ಲಕ್ಷ ಕೋಟಿ ರೂ ಗಳಿಸಿಬಿಟ್ಟಿದೆ.
ನಿಫ್ಟಿ50 ಇಂಡೆಕ್ಸ್ ಗಳಿಕೆ ಈ ವರ್ಷದಿಂದೀಚೆಗೆ ಮೊದಲ ಬಾರಿಗೆ ಕೆಂಪು ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಅಂದರೆ, ನಷ್ಟದಿಂದ ಲಾಭದ ಹಳಿಗೆ ಬಂದಿದೆ. ಬಿಎಸ್ಇ ಸೆನ್ಸೆಕ್ಸ್ ಈಗಲೂ ಕೂಡ ಕೆಂಪು ಬಣ್ಣದಲ್ಲೇ ಇದೆಯಾದರೂ ಇವತ್ತಿನ ರೀತಿಯಲ್ಲೇ ನಾಳೆಯೂ ಬುಲ್ ರನ್ ಆಗಿಹೋದರೆ ಅದೂ ಕೂಡ ಪಾಸಿಟಿವ್ ಆಗಿ ತಿರುಗುತ್ತದೆ. ಕುತೂಹಲ ಎಂದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 10ರಷ್ಟು ಮಾತ್ರವೇ ಕೆಳಗಿರುವುದು. ಈ ತಿಂಗಳೊಳಗೆ ಈ ಸೂಚ್ಯಂಕಗಳು ಹೊಸ ದಾಖಲೆ ಬರೆಯುವ ಸಂಭವ ಹೆಚ್ಚಿದೆ.
ಷೇರು ಮಾರುಕಟ್ಟೆಯ ಬುಲ್ ರನ್ನಲ್ಲಿ ಬಹುತೇಕ ಎಲ್ಲಾ ವಲಯಗಳ ಸ್ಟಾಕ್ಗಳು ಹಸಿರುಬಣ್ಣದಲ್ಲಿವೆ. ಆದರೆ, ಬ್ಯಾಂಕ್ ಮತ್ತು ಐಟಿ ವಲಯಗಳು ಹೆಚ್ಚು ಬೇಡಿಕೆ ಪಡೆದಿವೆ. ಎಲ್ಲಾ ವಲಯದ ಉತ್ತಮ ಸ್ಟಾಕ್ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದರಿಂದ ಹೂಡಿಕೆದಾರರಿಗೆ ಸುಗ್ಗಿಯಾದಂತಾಗಿದೆ.
ಇದನ್ನೂ ಓದಿ: 2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?
ಆರೇಳು ತಿಂಗಳಿಂದ ಭಾರತದಿಂದ ಗುಳೆಹೋಗಿದ್ದ ವಿದೇಶೀ ಹೂಡಿಕೆಗಳು ಹಂತ ಹಂತವಾಗಿ ಮರಳಿ ಬರುತ್ತಿವೆ. ಇದರ ಜೊತೆಗೆ ಭಾರತದ ಹೂಡಿಕೆಗಳೂ ಕೂಡ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ಆಗುತ್ತಿದೆ.
ಕಳೆದ ಐದು ತಿಂಗಳಲ್ಲಿ ಆಗಿದ್ದು ಮಾರ್ಕೆಟ್ ಕರೆಕ್ಷನ್ ಅಷ್ಟೆಯೇ ಹೊರತು ಮಾರುಕಟ್ಟೆ ಕುಸಿತವಲ್ಲ ಎಂದು ಹೂಡಿಕೆದಾರ ರಮೇಶ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ. ಷೇರು ಮಾರುಕಟ್ಟೆ ಕುಸಿತದ ಹಂತದಲ್ಲಿ ಎಲ್ಲಾ ಷೇರುಗಳೂ ಇಳಿಕೆಯ ಸುಳಿಗೆ ಸಿಕ್ಕಿಬಿಡುತ್ತವೆ. ಆದರೆ, ಕೆಲ ಷೇರುಗಳು ತಮ್ಮ ಬೇಡಿಕೆ ಉಳಿಸಿಕೊಂಡು ಬೆಳೆಯುತ್ತಿದ್ದವು. ಇಂಥದ್ದನ್ನು ಮಾರುಕಟ್ಟೆ ಕುಸಿತದಲ್ಲಿ ಕಾಣಲಾಗುವುದಿಲ್ಲ. ಮಾರ್ಕೆಟ್ ಕರೆಕ್ಷನ್ ಆಗಿರುವುದಕ್ಕೆ ಇದು ಸಾಕ್ಷಿ ಎಂದು ರಮೇಶ್ ದಮಾನಿ ತಮ್ಮ ವಾದಕ್ಕೆ ಸಮರ್ಥನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಟ್ವಿಟ್ಟರ್ ಲೋಗೋ ಹರಾಜು, 30 ಲಕ್ಷ ರೂಗೆ ಮಾರಾಟ; ಈ ಲೋಗೋ ಹಿಂದಿದೆ ಸಣ್ಣ ಸ್ವಾರಸ್ಯಕರ ಕಥೆ
ವಿಐಎಕ್ಸ್ ಭಯ
ಎನ್ಎಸ್ಇನಲ್ಲಿ ಭಯವನ್ನು ಅಳೆಯುವ ವಿಐಎಕ್ಸ್ ಇಂಡೆಕ್ಸ್ ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮತ್ತೆ ಕುಸಿಯುವ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಕೆಲವರು ವಿಶ್ಲೇಷಿಸುತ್ತಿರುವುದುಂಟು. ಮಾರುಕಟ್ಟೆಯಿಂದ ಹೊರಹೋಗಲು ಕಾಯುತ್ತಿದ್ದವರು ಸರಿಯಾದ ಸಂದರ್ಭಕ್ಕೆ ಕಾಯುತ್ತಿರಬಹುದು. ಇದರಿಂದ ಮತ್ತೊಂದು ಸಣ್ಣ ಸುತ್ತಿನ ಮಾರ್ಕೆಟ್ ಕರೆಕ್ಷನ್ ಆಗಬಹುದು ಎನ್ನುವುದು ಕೆಲವರ ಎಣಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ