ಇಸ್ರೇಲ್-ಇರಾನ್ ಯುದ್ಧಭೀತಿ; ಭಾರತದ ಷೇರುಪೇಟೆಗೆ ಆರಂಭಿಕ ಪೆಟ್ಟು; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂ ನಷ್ಟ

|

Updated on: Apr 15, 2024 | 11:22 AM

Indian stock market shaked in morning: ಇಸ್ರೇಲ್ ಮತ್ತು ಇರಾನ್ ಮಧ್ಯೆ ಯುದ್ಧ ಸಂಭವ ಇರುವ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಪೂರ್ಣ ರಕ್ಷಣಾತ್ಮಕ ಆಟ ನಡೆಯುತ್ತಿದೆ. ಮಾರುಕಟ್ಟೆ ಆರಂಭವಾಗಿ ಕೇವಲ 30 ನಿಮಿಷದೊಳಗೆ ಹೂಡಿಕೆದಾರರ 5 ಲಕ್ಷ ಕೋಟಿ ರೂ ಹಣ ನಷ್ಟವಾಗಿದೆ. ಯುದ್ಧ ಭೀತಿಯ ಜೊತೆಗೆ, ಭಾರತ ಮಾರಿಷಸ್ ತೆರಿಗೆ ಒಪ್ಪಂದ, ಅಮೆರಿಕದ ಹಣದುಬ್ಬರ ದರದ ಅಂಶಗಳೂ ಕೂಡ ಷೇರು ಮಾರುಕಟ್ಟೆ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ. ಈ ಮಧ್ಯೆ ಪೂರ್ಣಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇಲ್ಲ ಎಂದು ಸುಳಿವು ನೀಡುವ ಅಂಶಗಳೂ ವ್ಯಕ್ತವಾಗಿವೆ.

ಇಸ್ರೇಲ್-ಇರಾನ್ ಯುದ್ಧಭೀತಿ; ಭಾರತದ ಷೇರುಪೇಟೆಗೆ ಆರಂಭಿಕ ಪೆಟ್ಟು; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂ ನಷ್ಟ
ಷೇರು ಮಾರುಕಟ್ಟೆ
Follow us on

ನವದೆಹಲಿ, ಏಪ್ರಿಲ್ 15: ಇರಾನ್ ಮತ್ತು ಇಸ್ರೇಲ್ ಮಧ್ಯೆ ಯಾವಾಗ ಬೇಕಾದರೂ ಪೂರ್ಣಪ್ರಮಾಣದಲ್ಲಿ ಯುದ್ಧ (Iran Israel conflict) ಹೊತ್ತಿಕೊಳ್ಳಬಹುದು. ಇಡೀ ಮಧ್ಯಪ್ರಾಚ್ಯ ಹೊತ್ತಿ ಉರಿಯಬಹುದು ಎನ್ನುವಂತಹ ವಾತಾವರಣ ಇದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತದ ಷೇರು ಮಾರುಕಟ್ಟೆ (stock market) ನಲುಗಿ ಹೋಗಿದೆ. ಸೋಮವಾರ ಮಾರುಕಟ್ಟೆಯ ವಿವಿಧ ಸೂಚ್ಯಂಕಗಳು ಕುಸಿತ ಕಂಡಿವೆ. ಬಿಎಸ್​ಇ ಮತ್ತು ಎನ್​ಎಸ್​ಇಯ ಬಹುತೇಕ ಎಲ್ಲಾ ಸೂಚ್ಯಂಕಗಳು ಸೋಮವಾರ ಬೆಳಗಿನ ವಹಿವಾಟಿನಲ್ಲಿ ಕುಸಿದಿವೆ. ಷೇರು ಮಾರುಕಟ್ಟೆ ಆರಂಭಗೊಂಡ ಕೇವಲ 15ರಿಂದ 30 ನಿಮಿಷದಲ್ಲಿ ಬಿಎಸ್​ಇ ಸೆನ್ಸೆಕ್ಸ್ 888 ಅಂಕಗಳಷ್ಟು ಕುಸಿತ ಕಂಡಿದೆ. ನಿಫ್ಟಿ50 ಸೂಚ್ಯಂಕದಲ್ಲಿ 160 ಅಂಕಗಳಷ್ಟು ಕಡಿಮೆ ಆಗಿದೆ. ಹೂಡಿಕೆದಾರರು ಈ ಅವಧಿಯಲ್ಲಿ 5 ಲಕ್ಷ ಕೋಟಿ ರೂ ಬಂಡವಾಳ ನಷ್ಟ ಮಾಡಿಕೊಂಡಿದ್ದಾರೆ.

ಬೆಳಗ್ಗೆ 10 ಗಂಟೆಯ ಬಳಿಕ ಷೇರು ಮಾರುಕಟ್ಟೆ ಸೂಚ್ಯಂಕಗಳು ಒಂದಷ್ಟು ಚೇತರಿಕೆ ಕಾಣತೊಡಗಿದ್ದವು. ಬೆಳಗ್ಗೆ 11 ಗಂಟೆಯಲ್ಲಿ ನಿಫ್ಟಿ50 ಸೂಚ್ಯಂಕ ಶೇ. 0.43ರಷ್ಟು ಬಿದ್ದಿತ್ತು. ಬಿಎಸ್​ಇ ಸೆನ್ಸೆಕ್ಸ್30 ಸೂಚ್ಯಂಕ ಕುಸಿತ ಪ್ರಮಾಣ ಶೇ. 0.53ಕ್ಕೆ ತಗ್ಗಿದೆ. ಆರಂಭದಲ್ಲಿ 888 ಅಂಕಗಳನ್ನು ಕಳೆದುಕೊಂಡಿದ್ದ ಸೆನ್ಸೆಕ್ಸ್ 11 ಗಂಟೆಯ ವೇಳೆಗೆ 500 ಅಂಕಗಳನ್ನು ಗಳಿಸಿದಂತಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧಭೀತಿ: ಭಾರತ ಹಾಗೂ ಜಾಗತಿಕ ಆರ್ಥಿಕತೆ ಮೇಲೇನು ಪರಿಣಾಮ?

ಷೇರುಪೇಟೆ ಮೇಲೆ ಋಣಾತ್ಮಕ ಪರಿಣಾಮ ಬೀರಿರುವ ಅಂಶಗಳಿವು…

  1. ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ
  2. ಭಾರತ ಮತ್ತು ಮಾರಿಷಸ್ ತೆರಿಗೆ ಒಪ್ಪಂದ
  3. ಅಮೆರಿಕದ ಹಣದುಬ್ಬರ ನಿರೀಕ್ಷೆಗಿಂತ ಮೇಲಿರುವುದು

ಷೇರುಪೇಟೆಗೆ ಸಕಾರಾತ್ಮಕವಾಗಿರುವ ಅಂಶಗಳಿವು…

  1. ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೆಚ್ಚು ವ್ಯತ್ಯಯ ಆಗಿಲ್ಲದಿರುವುದು
  2. ಇರಾನ್ ಮೇಲೆ ಇಸ್ರೇಲ್ ಮರುದಾಳಿ ನಡೆಸಿದರೆ ಅಮೆರಿಕ ಬೆಂಬಲ ನೀಡುವುದಿಲ್ಲ ಎಂದು ಜೋ ಬೈಡನ್ ನೀಡಿರುವ ಹೇಳಿಕೆ.

ಇದನ್ನೂಓದಿ: ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್​ಫ್ಲೇಶನ್ ಡಾಟಾ

ತೈಲ ಮಾರುಕಟ್ಟೆಯಲ್ಲಿ ಅಲುಗಾಟ ಆಗಿಲ್ಲದಿರುವುದು, ಇಸ್ರೇಲ್- ಇರಾನ್ ಯುದ್ಧ ಸಾಧ್ಯತೆ ಕಡಿಮೆ ಎಂಬುದನ್ನು ಸೂಚಿಸುತ್ತದೆ. ಹಾಗೆಯೇ, ಅಮೆರಿಕದ ಬೆಂಬಲ ಇರುವುದಿಲ್ಲ ಎನ್ನುವುದು ಖಾತ್ರಿಯಾದರೆ ಇಸ್ರೇಲ್ ಪ್ರತಿದಾಳಿ ನಡೆಸುವ ಸಾಧ್ಯತೆ ಕಡಿಮೆ ಇರುತ್ತದೆ.

ಇವತ್ತು ಮಧ್ಯಾಹ್ನದ ವೇಳೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯಾವುದೇ ಅತಿರೇಕ ಸಂಭವಿಸದೇ ಇದ್ದರೆ ಭಾರತದ ಷೇರು ಮಾರುಕಟ್ಟೆ ಹಸಿರು ಬಣ್ಣದೊಂದಿಗೆ ಅಂತ್ಯ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ