ಮತ್ತೆ 60 ಸಾವಿರ ಪಾಯಿಂಟ್ಸ್​ ದಾಟಿದ ಸೆನ್ಸೆಕ್ಸ್; 13 ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 20 ಲಕ್ಷ ಕೋಟಿ ರೂ. ಹೆಚ್ಚಳ

ಮತ್ತೆ 60 ಸಾವಿರ ಪಾಯಿಂಟ್ಸ್​ ದಾಟಿದ ಸೆನ್ಸೆಕ್ಸ್; 13 ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 20 ಲಕ್ಷ ಕೋಟಿ ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತೆ 60 ಸಾವಿರ ಪಾಯಿಂಟ್ಸ್ ದಾಟಿದೆ. ಕಳೆದ 13 ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 20 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ.

TV9kannada Web Team

| Edited By: Srinivas Mata

Jan 05, 2022 | 7:24 PM

ಡಿಸೆಂಬರ್ 20ನೇ ತಾರೀಕಿನ ಕನಿಷ್ಠ ಮಟ್ಟದಿಂದ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಹತ್ತಿರ ಹತ್ತಿರ ಶೇ 9ರಷ್ಟು ಏರಿಕೆ ಕಂಡಿದೆ. ನಿಫ್ಟಿ- 50 ಸೂಚ್ಯಂಕವು 18 ಸಾವಿರ ಪಾಯಿಂಟ್ಸ್ ಕಡೆಗೆ ಸಾಗಿದೆ. ಮತ್ತು ಬಿಎಸ್​ಇ ಸೆನ್ಸೆಕ್ಸ್ 2021ರ ನವೆಂಬರ್ ನಂತರ ಮೊದಲ ಬಾರಿಗೆ 60,000 ಪಾಯಿಂಟ್ಸ್ ದಾಟಿ, ವಹಿವಾಟು ನಡೆಸಿದೆ. ಇತ್ತೀಚೆಗೆ ಮಾರುಕಟ್ಟೆ ಕುಸಿತ ಕಂಡ ಮೇಲೆ ತೀಕ್ಷ್ಣವಾಗಿ ಕುಸಿತ ಕಂಡ ನಂತರ ಕಳೆದ 13 ಟ್ರೇಡಿಂಗ್ ಸೆಷನ್​ಗಳಲ್ಲಿ ಹೂಡಿಕೆದಾರರಿಗೆ ಭಾರೀ ಸಂಪತ್ತು ಸೃಷ್ಟಿ ಮಾಡಿದೆ. ಆರಂಭದಲ್ಲಿ ಏರಿಕೆಯು ನಿರ್ದಿಷ್ಟ ವಲಯಕ್ಕೆ ಸೀಮಿತ ಆಗಿತ್ತು. ಆ ನಂತರ ಎಲ್ಲ ವಲಯಗಳು ಈ ಏರಿಕೆಯಲ್ಲಿ ಭಾಗಿ ಆದವು. ಅದಕ್ಕೆ ಕಾರಣ ಏನೆಂದರೆ, 2020ರ ರೀತಿಯಲ್ಲಿ ಯಾವುದೇ ಪ್ರಮುಖ ನಿರ್ಬಂಧ ಹೇರುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಈ ಬೆಳವಣಿಗೆ ಆಗಿದೆ. ಈ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು 20 ಲಕ್ಷ ಕೋಟಿ ರೂಪಾಯಿ ಹೆಚ್ಚಳ ಆಗಿದೆ. ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯವು ಡಿಸೆಂಬರ್ 20ರಂದು 252.57 ಕೋಟಿ ರೂಪಾಯಿ ಇದ್ದದ್ದು ಜನವರಿ 5ನೇ ತಾರೀಕಿಗೆ 272.4 ಕೋಟಿಗೆ ಏರಿಕೆ ಆಗಿದೆ.

ಪ್ರಬಲವಾದ ಬ್ಯಾಂಕ್​ ಸಾಲದ ಬೆಳವಣಿಗೆ, ಹಣಕಾಸು ವರ್ಷ 2022ರ ಮೂರನೇ ತ್ರೈಮಾಸಿಕದಲ್ಲಿ ಆರೋಗ್ಯಕರ ಗಳಿಕೆ ಪ್ರಗತಿಯ ನಿರೀಕ್ಷೆ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆ ಹಾಗೂ CY21 ನಾಲ್ಕನೇ ತ್ರೈಮಾಸಿಕದಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ನಿವ್ವಳ ಮಾರಾಟದ ನಂತರ ವಿದೇಶೀ ಸಾಂಸ್ಥಿಕ ಹೂಡಿಕೆದಾರರ (FII) ನಿರಂತರ ಖರೀದಿ ಕಾರಣಕ್ಕೆ ಮಾರುಕಟ್ಟೆ ಭಾವನೆಗಳು ಚೇತರಿಸಿಕೊಳ್ಳುವುದಕ್ಕೆ ಸಹಾಯ ಮಾಡಿದೆ. ಜಾಗತಿಕ ಮಾರುಕಟ್ಟೆಯನ್ನು ಸನ್ನಿವೇಶವನ್ನು ಆಧರಿಸಿ ದೇಶೀ ಮಾರುಕಟ್ಟೆ ಅನುಸರಿಸುತ್ತಿದೆ, ಮಿಶ್ರ ಫಲಿತಾಂಶದ ಸೂಚನೆಯನ್ನು ನೀಡುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದರ ಜತೆಗೆ ಕಂಪೆನಿಗಳ ಗಳಿಕೆಯ ಫಲಿತಾಂಶ ಕೂಡ ಸಮೀಪದಲ್ಲಿದ್ದು, ಟ್ರೆಂಡ್ ಸಕಾರಾತ್ಮಕವಾಗಿ ಇರುವ ನಿರೀಕ್ಷೆ ಇದೆ. ಬ್ಯಾಂಕಿಂಗ್ ಪ್ರಮುಖ ಷೇರುಗಳನ್ನು ಹೊರತುಪಡಿಸಿ, ಇತರ ವಲಯವಾರು ಹೆವಿವೇಯ್ಟ್​ಗಳಲ್ಲಿ ಖರೀದಿ ಕಂಡುಬಂದು, ಸೂಚ್ಯಂಕಗಳು ಮೇಲೇರಲು ಸಹಾಯ ಮಾಡಿವೆ ಎನ್ನುತ್ತಾರೆ

ಅಕ್ಟೋಬರ್ 19, 2021ರಲ್ಲಿ ದಾಖಲೆಯನ್ನು ಮುಟ್ಟಿದ ಮೇಲೆ ಷೇರುಗಳು ಭಾರೀ ಏರಿಳಿಕೆ ಕಂಡಿವೆ. ಮೌಲ್ಯಮಾಪನದ ಆತಂಕದ ನಡುವೆ “ಕರಡಿ ಹಿಡಿತ”ಕ್ಕೆ ಸಿಲುಕಿದೆ. ಸೂಚ್ಯಂಕವು ದಾಖಲೆ ಮಟ್ಟದಿಂದ ಶೇ 11ರಷ್ಟು ಕುಸಿತ ಕಂಡು, ಹೂಡಿಕೆದಾರರ ಸಂಪತ್ತು 22 ಲಕ್ಷ ಕೋಟಿ ರೂಪಾಯಿ ಹೆಚ್ಚು ಕೊಚ್ಚಿಹೋಗಿತ್ತು. ನಿಫ್ಟಿ ಮಿಡ್​ಕ್ಯಾಪ್ 100 ಮತ್ತು ಸ್ಮಾಲ್​ಕ್ಯಾಪ್ 100 ಸೂಚ್ಯಂಕಗಳು ಶೇ 7 ಮತ್ತು ಶೇ 10ರಷ್ಟು ಕ್ರಮವಾಗಿ ಹೆಚ್ಚಳವಾಗಿವೆ. ಮಾಹಿತಿ ತಂತ್ರಜ್ಞಾನ, ವಾಹನ, ಹಣಕಾಸು ಸೇವೆಗಳು, ಇನ್​ಫ್ರಾ ಮತ್ತು ರಿಯಾಲ್ಟಿ ಶೇ 7ರಿಂದ 10ರಷ್ಟು ಗಳಿಕೆ ಕಂಡಿವೆ.

ಜನವರಿ 5ನೇ ತಾರೀಕಿನ ಬುಧವಾರದಂದು ಬಿಎಸ್​ಇ ಸೆನ್ಸೆಕ್ಸ್ 367.22 ಪಾಯಿಂಟ್ಸ್ ಅಥವಾ ಶೇ 0.61ರಷ್ಟು ಏರಿಕೆಯಾಗಿ, 60,223.15 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿದರೆ, ನಿಫ್ಟಿ 50 ಸೂಚ್ಯಂಕವು 120.00 ಪಾಯಿಂಟ್ಸ್ ಅಥವಾ ಶೇ 0.67ರಷ್ಟು ಮೇಲೇರಿ, 17,925.25 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಮಾಡಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಬಜಾಜ್ ಫಿನ್​ಸರ್ವ್ ಶೇ 4.98 ಬಜಾಜ್ ಫೈನಾನ್ಸ್ ಶೇ 4.46 ಕೊಟಕ್ ಮಹೀಂದ್ರಾ ಶೇ 3.75 ಜೆಎಸ್​ಡಬ್ಲ್ಯು ಸ್ಟೀಲ್ ಶೇ 3.59 ಗ್ರಾಸಿಮ್ ಶೇ 3.25

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟೆಕ್ ಮಹೀಂದ್ರಾ ಶೇ -2.92 ಇನ್ಫೋಸಿಸ್ ಶೇ -2.87 ಎಚ್​ಸಿಎಲ್​ ಟೆಕ್ ಶೇ -1.70 ಡಿವೀಸ್ ಲ್ಯಾಬ್ಸ್ ಶೇ -1.37 ವಿಪ್ರೋ ಶೇ -1.11

ಇದನ್ನೂ ಓದಿ: Multibagger IPO: ಈ ಡಿಫೆನ್ಸ್ ಷೇರಿನ ಮೇಲಿನ ಹೂಡಿಕೆಯಿಂದ ಮೂರು ತಿಂಗಳಲ್ಲಿ ಶೇ 325ರಷ್ಟು ಲಾಭ

Follow us on

Related Stories

Most Read Stories

Click on your DTH Provider to Add TV9 Kannada