
ನವದೆಹಲಿ, ಫೆಬ್ರವರಿ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿಧಿಸಿದ ಸುಂಕಗಳನ್ನು ರದ್ದುಗೊಳಿಸುವ ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮಗಳನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. “ನಿನ್ನೆ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಗಮನಿಸಿದ್ದೇವೆ. ಅಧ್ಯಕ್ಷ ಟ್ರಂಪ್ ಆ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯುಎಸ್ ಸರ್ಕಾರ ಈಗಾಗಲೇ ಕೆಲವು ಕ್ರಮಗಳನ್ನು ಪ್ರಕಟಿಸಿದೆ. ಈ ಎಲ್ಲಾ ಬೆಳವಣಿಗೆಗಳ ಪರಿಣಾಮಗಳಿ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ” ಎಂದು ವಾಣಿಜ್ಯ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ನಡೆದ ಬೆಳವಣಿಗೆಗಳ ನಂತರ ಭಾರತದಿಂದ ಬಂದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ. ರಷ್ಯಾದೊಂದಿಗಿನ ಕಚ್ಚಾ ತೈಲ ವ್ಯಾಪಾರದಿಂದಾಗಿ ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಆರಂಭಿಕ ಸುಂಕವನ್ನು ಶೇ. 50ಕ್ಕೆ ಏರಿಸಿತ್ತು. ಇತ್ತೀಚೆಗೆ ಟ್ರಂಪ್ ಸರ್ಕಾರದೊಂದಿಗಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿತ್ತು.
ಇದನ್ನೂ ಓದಿ: ಮನಬಂದಂತೆ ಸುಂಕ ಹೇರಿದ ಟ್ರಂಪ್ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್
ಆದರೆ, ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಇಂಧನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಮತ್ತು ಅಮೇರಿಕನ್ ಇಂಧನ ಉತ್ಪನ್ನಗಳ ಖರೀದಿಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಟ್ರಂಪ್ ಹೇಳಿದ ನಂತರ ರಷ್ಯಾದ ತೈಲ ಆಮದುಗಳಿಗೆ ಸಂಬಂಧಿಸಿದ ಹೆಚ್ಚುವರಿ ಶೇ. 25ರಷ್ಟು ಸುಂಕಗಳನ್ನು ಹಿಂತೆಗೆದುಕೊಳ್ಳಲಾಯಿತು.
ಡೊನಾಲ್ಡ್ ಟ್ರಂಪ್ ಕ್ಯಾಬಿನೆಟ್ ಒಪ್ಪಿಗೆಯಿಲ್ಲದೆ ಸುಂಕದ ಬಗ್ಗೆ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಟ್ರಂಪ್ ಹೇರಿದ ಸುಂಕಗಳ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಇಂದು ಜಾಗತಿಕವಾಗಿ ಹೊಸ ಸುಂಕವನ್ನು ಘೋಷಿಸಿದ್ದಾರೆ. ಆ ಪ್ರಕಾರ, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತಕ್ಕೆ ವಿಧಿಸಲಾದ ಸುಂಕ ಇದೀಗ ಶೇ. 18ರಿಂದ ಶೇ. 10ಕ್ಕೆ ಇಳಿಕೆಯಾಗಿದೆ. ಫೆಬ್ರವರಿ 24ರಿಂದ ಈ ಆದೇಶ ಜಾರಿಗೆ ಬರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ