
ದೆಹಲಿ: ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಉತ್ಪಾದನೆಗೆ ವಿಧಿಸಿದ್ದ ಮಿತಿಯಲ್ಲಿ ಸುಪ್ರೀಂಕೋರ್ಟ್ ಒಂದಿಷ್ಟು ರಿಯಾಯ್ತಿ ನೀಡಿದೆ. ಕಬ್ಬಿಣ ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಿಗೇ ಷೇರುಪೇಟೆಯಲ್ಲಿ ಲೋಹ ವಲಯದ (Metal Sector) ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಹೂಡಿದಾರರ ಗಮನ ಸೆಳೆದಿವೆ. ಬೆಳಿಗ್ಗೆ 11.35ರ ಹೊತ್ತಿಗೆ ಟಾಟಾ ಸ್ಟೀಲ್ ₹ 108.70 ( ಶೇ 2.31 ಏರಿಕೆ), ಜೆಎಸ್ಡಬ್ಲ್ಯು ಸ್ಟೀಲ್ ₹ 663.95ರ (ಶೇ 2.35 ಏರಿಕೆ) ದರದಲ್ಲಿ ವಹಿವಾಟು ನಡೆಸುತ್ತಿದ್ದವು.
ಬಳ್ಳಾರಿ ಜಿಲ್ಲೆಯಲ್ಲಿ 28 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಗೆ ವಿಧಿಸಿದ್ದ ಮಿತಿಯನ್ನು ಸುಪ್ರೀಂಕೋರ್ಟ್ ಇದೀಗ 35 ದಶಲಕ್ಷ ಮೆಟ್ರಿಕ್ ಟನ್ಗೆ ಹೆಚ್ಚಿಸಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಮೊದಲು 7 ದಶಲಕ್ಷ ಟನ್ ಅದಿರು ಉತ್ಪಾದನೆಗೆ ಅವಕಾಶವಿತ್ತು. ಇದೀಗ ಈ ಮಿತಿಯನ್ನು 15 ದಶಲಕ್ಷ ಟನ್ಗೆ ಹೆಚ್ಚಿಸಲಾಗಿದೆ ಎಂದು ‘ಮನಿಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.
‘ಅದಿರು ಉತ್ಪಾದನೆಯ ಜೊತೆಗೆ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯು ಜೊತೆಜೊತೆಗೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂರೂ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರು ರಫ್ತು ಮಾಡಲು ಇದ್ದ ನಿರ್ಬಂಧವನ್ನು ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ತೆರವು ಮಾಡಿತ್ತು. ಇ-ಹರಾಜಿನ ಬದಲು ನೇರ ಮಾರಾಟದ ಮೂಲಕ ಅದಿರು ಮಾರಾಟಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಅದಿರು ಉತ್ಪಾದನೆ ಮತ್ತು ರಫ್ತಿಗೆ ಸುಪ್ರೀಂಕೋರ್ಟ್ 2011ರಲ್ಲಿ ನಿರ್ಬಂಧ ವಿಧಿಸಿತ್ತು. ಪರಿಸರ ಸಂರಕ್ಷಣೆಗಾಗಿ ಅದಿರು ಉತ್ಪಾದನೆಗೆ ನಿರ್ಬಂಧ ಅಗತ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
Published On - 11:56 am, Fri, 26 August 22