Developed India: ಭಾರತ ಮುಂದುವರಿದ ದೇಶವಾಗಲು 4 ಐ ಸೂತ್ರ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
Nirmala Sitharaman 4Is: 2047ರಷ್ಟರಲ್ಲಿ ಭಾರತ ಮುಂದುವರಿದ ದೇಶವಾಗಬೇಕೆನ್ನುವ ಗುರಿ ಈಡೇರಲು ಸರ್ಕಾರ ನಾಲ್ಕು ಐಗಳತ್ತ ಗಮನ ಹರಿಸುತ್ತದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ, ಜುಲೈ 30: ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಜಾಗತಿಕ ಸ್ಟಾರ್ ಆಗಿದೆ. ಇನ್ನು ಸ್ವಾತಂತ್ರ್ಯ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ಹೇಗಿರಲಿದೆ? ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2047ರಷ್ಟರಲ್ಲಿ ಭಾರತ ಮುಂದುವರಿದ ದೇಶವಾಗಬಹುದು ಎಂದು ಶನಿವಾರ (ಜುಲೈ 29) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದುವರಿದ ದೇಶವಾಗುವ ಕನಸು ನನಸಾಗಬೇಕಾದರೆ ಸರ್ಕಾರ ನಾಲ್ಕು ಅಂಶಗಳತ್ತ ಗಮನ ಹರಿಸಬೇಕು ಎಂದಿರುವ ಹಣಕಾಸು ಸಚಿವೆ, ಇನ್ಫ್ರಾಸ್ಟ್ರಕ್ಚರ್, ಇನ್ವೆಸ್ಟ್ಮೆಂಟ್, ಇನೋವೇಶನ್ ಮತ್ತು ಇನ್ಕ್ಲೂಸಿವ್ನೆಸ್ ಅನ್ನು ಹೆಸರಿಸಿದ್ದಾರೆ.
2047ರಷ್ಟರಲ್ಲಿ ಭಾರತ ಮುಂದುವರಿದ ದೇಶವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಟ್ಟಿರುವ ಗುರಿ ತಲುಪಲು ದೇಶಕ್ಕೆ ಸಾಮರ್ಥ್ಯ ಇದೆ ಎಂದ ನಿರ್ಮಲಾ ಸೀತಾರಾಮನ್, ಸರ್ಕಾರದಿಂದ ಕೈಗೊಳ್ಳಲಾದ ಹೂಡಿಕೆದಾರ ಸ್ನೇಹಿ ಸುಧಾರಣಾ ಕ್ರಮಗಳ ಜೊತೆಗೆ ದೇಶದ ಯುವಜನರ ಶಕ್ತಿಗೆ ಕೌಶಲ್ಯ ಒದಗಿಸುವ ಕ್ರಮಗಳು ಈ ನಿಟ್ಟಿನಲ್ಲಿ ಸಹಕಾರಿ ಆಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Modi Ki Guarantee: ವಿಶ್ವದ ಮೂರು ಅತಿದೊಡ್ಡ ಆರ್ಥಿಕತೆಗಳಲ್ಲೊಂದಾಗಲಿದೆ ಭಾರತ; ಇದು ಮೋದಿ ಗ್ಯಾರಂಟಿ ಎಂದ ಪ್ರಧಾನಿ
‘ಭಾರತ ನಾಲ್ಕು ವಿಚಾರಗಳತ್ತ ಗಮನ ಕೊಟ್ಟಿದೆ. ಇನ್ಫ್ರಾಸ್ಟ್ರಕ್ಚರ್ ಅಥವಾ ಸೌಕರ್ಯ ವ್ಯವಸ್ಥೆಗೆ ಶಕ್ತಿ ತುಂಬುತ್ತಿದ್ದೇವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಇನ್ಫ್ರಾಸ್ಟ್ರಕ್ಚರ್ ಮೇಲಿನ ಹೂಡಿಕೆ ಬಹಳ ಹೆಚ್ಚಿಸಿದ್ದೇವೆ. 2023-24ರಲ್ಲಿ ಇದು 10 ಲಕ್ಷಕೋಟಿ ರುಪಾಯಿ ತಲುಪಲಿದೆ. ಇನ್ಫ್ರಾಸ್ಟ್ರಕ್ಚರ್ ಎಂದರೆ ರಸ್ತೆ, ಏರ್ಪೋರ್ಟ್, ಸೇತುವೆ ಇತ್ಯಾದಿ ಭೌತಿಕ ವಸ್ತುಗಳು ಮಾತ್ರವಲ್ಲ, ಡಿಜಿಟಲ್ ಸೌಕರ್ಯ ರಚನೆಯೂ ಒಳಗೊಂಡಿರುತ್ತದೆ.
‘ಇನ್ವೆಸ್ಟ್ಮೆಂಟ್ (ಹೂಡಿಕೆ) ಎರಡನೇ ಸಂಗತಿ. ಸಾರ್ವಜನಿಕ ಮತ್ತು ಖಾಸಗಿ ಎರಡೂ ವಲಯಗಳಿಂದ ಹೂಡಿಕೆಗಳನ್ನು ಪಡೆಯುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಎರಡು ಐಗಳ ಬಗ್ಗೆ ವಿವರ ನೀಡಿದ್ದಾರೆ.
ಇದನ್ನೂ ಓದಿ: Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು
ಮೂರನೇ ಐ ಎನಿಸಿದ ಇನೋವೇಶನ್, ಅಥವಾ ನಾವೀನ್ಯತೆ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಬಾಹ್ಯಾಕಾಶ, ಪರಮಾಣು ಶಕ್ತಿಯನ್ನು ಒಳಗೊಂಡಿರುವ ಹಲವು ಕ್ಷೇತ್ರಗಳನ್ನು ಸರ್ಕಾರ ತೆರೆದಿದೆ ಎಂದು ಹೇಳಿದ್ದಾರೆ.
ಇನ್ನು ನಾಲ್ಕನೇ ಐ ಆದ ಇನ್ಕ್ಲೂಸಿವ್ನೆಸ್ ಅಥವಾ ಒಳಗೊಳ್ಳುವಿಕೆ ಬಗ್ಗೆ ವಿವರ ನೀಡಿದ ಅವರು, ಯಾವುದೇ ಹೂಡಿಕೆ ಅಥವಾ ಸುಧಾರಣೆಗಳು ದೇಶದ ಪ್ರತಿಯೊಬ್ಬ ಜನಸಾಮಾನ್ಯನಿಗೂ ತಲುಪಲಾಗುವತ್ತ ಗಮನ ಕೊಟ್ಟು, 25 ವರ್ಷದಲ್ಲಿ ಅಭಿವೃದ್ಧಿ ದೇಶ ಆಗುವ ಗುರಿ ತಲುಪುತ್ತೇವೆ ಎಂದು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sun, 30 July 23