ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿಮಾನ ಹಾರಾಟ ಸೇವೆ ತಾತ್ಕಾಲಿಕವಾಗಿ ನಿಲ್ಲಿಸಿರುವ ಮತ್ತು ಇನ್ಸಾಲ್ವೆನ್ಸಿಗೆ ಅರ್ಜಿ (Insolvency) ಸಲ್ಲಿಸಿರುವ ಗೋ ಫಸ್ಟ್ ಏರ್ಲೈನ್ಸ್ಗೆ (Go First Airlines) ಸೇರಿದ ವಿಮಾನಗಳಿಗೆ ಬೇಡಿಕೆ ಬರುತ್ತಿದೆ. ಪ್ರತಿಸ್ಪರ್ಧಿ ಏರ್ಲೈನ್ಸ್ ಸಂಸ್ಥೆಗಳಾದ ಟಾಟಾ ಗ್ರೂಪ್, ಇಂಡಿಗೋ ಮೊದಲಾದವರು ಗೋ ಫಸ್ಟ್ ವಿಮಾನಗಳ ಖರೀದಿಗೆ ಪ್ರಯತ್ನಿಸುತ್ತಿವೆ. ಗೋ ಫಸ್ಟ್ಗೆ ವಿಮಾನಗಳ ಗುತ್ತಿಗೆ ಕೊಟ್ಟಿರುವ ಸಂಸ್ಥೆಗಳೊಂದಿಗೆ (Lessors) ಟಾಟಾ ಗ್ರೂಪ್ ಮತ್ತು ಇಂಡಿಗೋ ಮಾತುಕತೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಗೋ ಫಸ್ಟ್ ಏರ್ಲೈನ್ಸ್ ಒಟ್ಟು 55 ವಿಮಾನಗಳನ್ನು ಹೊಂದಿದೆ. ವರದಿಗಳ ಪ್ರಕಾರ 40ಕ್ಕೂ ಹೆಚ್ಚು ವಿಮಾನಗಳನ್ನು ಮರುಸ್ವಾಧೀನಪಡಿಸಿಕೊಳ್ಳಲು ಗೋ ಫಸ್ಟ್ ವಿಮಾನಗಳ ಗುತ್ತಿಗೆದಾರರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಈ ವಿಮಾನಗಳನ್ನು ನೀಡುವ ಕುರಿತು ಮಾತುಕತೆಗೆ ಈ ಲೀಸಿಂಗ್ ಕಂಪನಿಗಳೂ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಗೋ ಫಸ್ಟ್ನ ಲೆಸ್ಸರ್ಸ್ ಅಥವಾ ಗುತ್ತಿಗೆದಾರರಲ್ಲಿ ಜ್ಯಾಕ್ಸನ್ ಸ್ಕ್ವಯರ್ ಏವಿಯೇಶನ್, ಎಸ್ಎಂಬಿಸಿ ಏವಿಯೇಶನ್ ಕ್ಯಾಪಿಟಲ್ ಮತ್ತು ಸಿಡಿಬಿ ಏವಿಯೇಶನ್ ಇತ್ಯಾದಿ ದೊಡ್ಡ ದೊಡ್ಡ ಲೀಸಿಂಗ್ ಸಂಸ್ಥೆಗಳಿವೆ. ಗೋ ಫಸ್ಟ್ ಏರ್ಲೈನ್ಸ್ನ ಏರ್ಬಸ್ ಎ320 ವಿಮಾನಗಳನ್ನು ಲೀಸ್ಗೆ ಕೊಟ್ಟಿರುವುದು ಈ ಸಂಸ್ಥೆಗಳೇ. ಗೋ ಫಸ್ಟ್ ಏರ್ಲೈನ್ಸ್ ಮೇ 3ರಂದು ಭಾರತದ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಎಟಿ) ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿದಾಗಲೀ ಈ ಲೀಸಿಂಗ್ ಸಂಸ್ಥೆಗಳು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದವು. ಆದರೂ ಕೂಡ ಗೋ ಫಸ್ಟ್ ಏರ್ಲೈನ್ಸ್ ತನ್ನ ನಿರ್ಧಾರಕ್ಕೆ ಬದ್ಧವಾಗಿತ್ತು. ಇದಾದ ಬಳಿಕ ಲೀಸಿಂಗ್ ಕಂಪನಿಗಳು ತನ್ನ ವಿಮಾನಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿವೆ ಎಂದು ಗೋ ಫಸ್ಟ್ ಅಳಲು ತೋಡಿಕೊಂಡಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು.
ಇದನ್ನೂ ಓದಿ: Pod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?
ಗೋ ಫಸ್ಟ್ ವಿಮಾನಗಳಿಗೆ ಇರುವ ಏರ್ಪೋರ್ಟ್ ಸ್ಲಾಟ್ಗಳಿಗೂ ಭಾರೀ ಬೇಡಿಕೆ ಬಂದಿದೆ. ಈ ಸ್ಲಾಟ್ಗಳನ್ನು ಖರೀದಿಸಲು ಆಕಾಸ ಏರ್ ಸೇರಿದಂತೆ ಹಲವು ವೈಮಾನಿಕ ಸಂಸ್ಥೆಗಳು ಆಸಕ್ತಿ ತೋರಿರುವುದು ಕಂಡುಬಂದಿದೆ. ಟಾಟಾ ಗ್ರೂಪ್ ಮತ್ತು ಇಂಡಿಗೋ ಏರ್ಲೈನ್ ಸಂಸ್ಥೆಗಳೂ ಈ ವಿಚಾರದಲ್ಲಿ ತೀವ್ರ ಪ್ರಯತ್ನಗಳನ್ನು ಹಾಕುತ್ತಿವೆ. ನವದೆಹಲಿ ಮತ್ತು ಮುಂಬೈ ಏರ್ಪೋರ್ಟ್ಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸಂಬಂಧ ಟಾಟಾ ಗ್ರೂಪ್ ಮತ್ತು ಇಂಡಿಗೋ ಏರ್ಲೈನ್ಸ್ ಮಾತುಕತೆ ನಡೆಸುತ್ತಿವೆ. ಪ್ರತಿಯೊಂದು ವಿಮಾನ ಸಂಸ್ಥೆಗಳಿಗೂ ವಿವಿಧ ಏರ್ಪೋರ್ಟ್ಗಳಲ್ಲಿ ಲ್ಯಾಂಡಿಂಗ್ಗೆ ಮತ್ತು ನಿಲುಗಡೆಗೆ ಸ್ಥಳಾವಕಾಶ ಕೊಡಲಾಗುತ್ತದೆ. ಗೋ ಫಸ್ಟ್ ವಿಮಾನಗಳಿಗಿರುವ ಸ್ಥಳ ಮೀಸಲನ್ನು ಪಡೆಯಲು ಟಾಟಾ ಮತ್ತು ಇಂಡಿಗೋ ಪ್ರಯತ್ನಿಸುತ್ತಿದ್ದು ಏರ್ಪೋರ್ಟ್ ಆಪರೇಟರ್ಗಳೊಂದಿಗೆ ಮಾತನಾಡುತ್ತಿವೆ.
ಇದನ್ನೂ ಓದಿ: Govt Schemes: ಕೇಂದ್ರದ ಈ 3 ಸ್ಕೀಮ್ಗಳಿಗೆ 8 ವರ್ಷ; ಎಷ್ಟು ಕೋಟಿ ಭಾರತೀಯರನ್ನು ತಲುಪಿವೆ ಈ ಸ್ಕೀಮ್ಗಳು?
ಟಾಟಾ ಗ್ರೂಪ್ ಸಂಸ್ಥೆ ಇತ್ತೀಚೆಗಷ್ಟೇ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿ, ಭಾರತದ ನಂಬರ್ ಒನ್ ಏರ್ಲೈನ್ಸ್ ಸಂಸ್ಥೆ ಎನಿಸಿದೆ. ಏರ್ ಏಷ್ಯಾ, ಸಿಂಗಾಪುರ್ ಏರ್ಲೈನ್ಸ್ನ ಭಾರತೀಯ ಕಾರ್ಯಾಚರಣೆಯ ಮಾಲಿಕತ್ವ ಹೊಂದಿರುವ ಟಾಟಾ ಗ್ರೂಪ್ ಇದೀಗ ತನ್ನೆಲ್ಲಾ ವೈಮಾನಿಕ ಸೇವೆಗಳನ್ನು ಇಂಟಿಗ್ರೇಟ್ ಮಾಡುವ ಆಲೋಚನೆಯಲ್ಲಿದೆ. ಎಲ್ಲವೂ ಒಂದೇ ಏರ್ಲೈನ್ಸ್ಗೆ ವಿಲೀನವಾಗಲಿದೆ. ಟಾಟಾ ಗ್ರೂಪ್ ಇತ್ತೀಚೆಗಷ್ಟೇ ಬಹಳಷ್ಟು ಹೊಸ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಮತ್ತು ಏರ್ಬಸ್ ಸಂಸ್ಥೆಗಳಿಗೆ ಆರ್ಡರ್ ಕೊಟ್ಟಿದೆ.