ನವದೆಹಲಿ: ವಿಸ್ತಾರ ಏರ್ಲೈನ್ (Vistara Airline) ಬ್ರ್ಯಾಂಡ್ ಅನ್ನು ರದ್ದುಗೊಳಿಸುವುದು ಮತ್ತು ನಾಲ್ಕು ಏರ್ಲೈನ್ಗಳನ್ನು ಏರ್ ಇಂಡಿಯಾದೊಂದಿಗೆ (Air India) ವಿಲೀನಗೊಳಿಸಲು ಟಾಟಾ ಸಮೂಹ (Tata Group) ಚಿಂತನೆ ನಡೆಸಿದೆ. ಈ ಮೂಲಕ ತನ್ನ ಕುಂಟುತ್ತಾ ಸಾಗುತ್ತಿರುವ ವಿಮಾನಯಾನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಲು ಮತ್ತು ವಿಸ್ತರಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಸಿಂಗಾಪುರ ಏರ್ಲೈನ್ಸ್ನ ದಕ್ಷಿಣ ಏಷ್ಯಾದ ಸ್ಥಳೀಯ ಸಂಸ್ಥೆಯಾದ ವಿಸ್ತಾರ ಬ್ರ್ಯಾಂಡ್ ಅನ್ನು ರದ್ದುಗೊಳಿಸಲೂ ಟಾಟಾ ಚಿಂತನೆ ನಡೆಸಿದೆ. ಸಂಯೋಜಿತ ಏರ್ಲೈನ್ಸ್ನ ಎಷ್ಟು ಷೇರುಗಳನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಸಿಂಗಾಪುರ ಏರ್ಲೈನ್ಸ್ ಮೌಲ್ಯಮಾಪನ ಮಾಡುತ್ತಿದೆ ಎಂದೂ ಮೂಲಗಳು ಹೇಳಿವೆ.
ಈ ಬೆಳವಣಿಗೆಗೆ ಸಂಬಂದಿಸಿದಂತೆ ಟಾಟಾ ಸಮೂಹ, ಏರ್ ಇಂಡಿಯಾ ಹಾಗೂ ವಿಸ್ತಾರ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಟಾಟಾ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಸಿಂಗಾಪುರ ಏರ್ಲೈನ್ಸ್ (ಎಸ್ಐಎ) ಪ್ರಕಟಣೆ ತಿಳಿಸಿತ್ತು. ಇದು ಬಿಟ್ಟರೆ ಉಳಿದಂತೆ ಸಂಸ್ಥೆಯ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಅಕ್ಟೋಬರ್ 13ರಂದು ಎಕ್ಸ್ಚೇಂಜ್ ಫೈಲಿಂಗ್ ಮಾಡುವ ವೇಳೆ ಮಾಹಿತಿ ನೀಡಿದ್ದ ಸಿಂಗಾಪುರ ಏರ್ಲೈನ್ಸ್, ಎಸ್ಐಎ ಹಾಗೂ ಟಾಟಾ ಜತೆಗೆ ಸದ್ಯ ಹೊಂದಿರುವ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಇದರಲ್ಲಿ ವಿಸ್ತಾರ ಮತ್ತು ಏರ್ ಇಂಡಿಯಾವನ್ನೂ ಒಳಗೊಳ್ಳುವಂತೆ ಮಾಡಲು ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳಿತ್ತು.
ಇದನ್ನೂ ಓದಿ: Air Asia: ಏರ್ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ
ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ. 300 ಸಣ್ಣ ಜೆಟ್ಗಳ ಖರೀದಿಗೆ ಚಿಂತನೆ ನಡೆಸಿದೆ. ಇದು ಸಾಕಾರಗೊಂಡಲ್ಲಿ ವಿಮಾನಯಾನ ಇತಿಹಾಸದಲ್ಲೇ ಅತಿದೊಡ್ಡ ಖರೀದಿಯಾಗಲಿದೆ ಎಂದು ಹೇಳಲಾಗಿದೆ. ಈಗ ವಿಮಾನಯಾನ ಸಂಸ್ಥೆಯು 113 ವಿಮಾನಗಳನ್ನು ಹೊಂದಿದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಲ ಚಾಂಪ್ಬೆಲ್ ವಿಲ್ಸನ್ ಇತ್ತೀಚೆಗೆ ಹೇಳಿದ್ದರು.
5 ಶತಕೋಟಿ ಡಾಲರ್ ಮೌಲ್ಯದ ಕ್ಯಾರಿಯರ್ಗಳನ್ನು ಹೊಂದುವ ಸಲುವಾಗಿ 1 ಶತಕೋಟಿ ಡಾಲರ್ ಪಂಡಿಂಗ್ ಸಂಗ್ರಹಿಸುವ ಬಗ್ಗೆಯೂ ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ಬೆಳವಣಿಗೆಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ಮೂಲಗಳು ಹೇಳಿವೆ. 25 ಏರ್ಬಸ್ ಎಸ್ಇ ಮತ್ತು 5 ಬೋಯಿಂಗ್ ಏರ್ಕ್ರಾಫ್ಟ್ಗಳನ್ನು ಹೊಂದುವ ಗುರಿಯನ್ನೂ ಏರ್ಲೈನ್ಸ್ ಹೊಂದಿದೆ ಎನ್ನಲಾಗಿದೆ.
ವಿಲೀನ ಆಗುವ ಏರ್ಲೈನ್ಸ್ಗಳಿವು…
ಏರ್ ಇಂಡಿಯಾ, ವಿಸ್ತಾರ, ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾಗೂ ಏರ್ ಏಷ್ಯಾ ಇಂಡಿಯಾವನ್ನು ವಿಲೀನಗೊಳಿಸಲು ಟಾಟಾ ಉದ್ದೇಶಿಸಿದೆ ಎನ್ನಲಾಗಿದೆ. ಏರ್ ಏಷಿಯಾ ವಿಮಾನಯಾನ ಸಂಸ್ಥೆಯ ಸಂಪೂರ್ಣ ಪಾಲನ್ನು ಟಾಟಾ ಸಮೂಹ ಇತ್ತೀಚೆಗಷ್ಟೇ ಖರೀದಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ