ಟಾಟಾ ಸಮೂಹದ ಅಧ್ಯಕ್ಷರಾದ ಎನ್.ಚಂದ್ರಶೇಖರನ್ (N Chandrasekharan) ಅವರು ಮುಂಬೈನ ಪೆಡರ್ ರಸ್ತೆ ಪ್ರದೇಶದಲ್ಲಿ 98 ಕೋಟಿ ರೂಪಾಯಿಗೆ ಡೂಪ್ಲೆಕ್ಸ್ ಖರೀದಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಚಂದ್ರಶೇಖರನ್ ಮತ್ತು ಅವರ ಕುಟುಂಬ ಕಳೆದ ಐದು ವರ್ಷಗಳಿಂದ ಡೂಪ್ಲೆಕ್ಸ್ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗಿತ್ತು. ಈಗ ಖರೀದಿ ಮಾಡಿರುವ ವಿಲಾಸಿ ಅಪಾರ್ಟ್ಮೆಂಟ್ ಇರುವ ಸ್ಥಳವನ್ನು 33 ಸೌಥ್ ಮುಂಬೈ ಪೆಡರ್ ರಸ್ತೆ ಎಂದು ಕರೆಯಲಾಗುತ್ತದೆ. ವರದಿಯ ಪ್ರಕಾರ, 28 ಅಂತಸ್ತಿನ ಈ ಅಪಾರ್ಟ್ಮೆಂಟ್ನ 11 ಹಾಗೂ 12ನೇ ಅಂತಸ್ತನ್ನು ಖರೀದಿ ಮಾಡಿದ್ದು, 6000 ಚದರಡಿಯ ಕಾರ್ಪೆಟ್ ಪ್ರದೇಶ ಹೊಂದಿದೆ. ಚಂದ್ರಶೇಖರನ್ ಮತ್ತು ಅವರ ಕುಟುಂಬ ಕಳೆದ 5 ವರ್ಷಗಳಿಂದ ಭೋಗ್ಯಕ್ಕೆ ಇತ್ತು. ಅದನ್ನು ಈಚೆಗಷ್ಟೇ ಚಂದ್ರಶೇಖರನ್, ಪತ್ನಿ ಲಲಿತಾ, ಮಗ ಪ್ರಣವ್ ಹೆಸರಲ್ಲಿ ನೋಂದಣಿ ಮಾಡಲಾಗಿದೆ. ಇದನ್ನು ಬಿಲ್ಡರ್ ಸಮೀರ್ ಭೋಜ್ವಾನಿ ನಿಯಂತ್ರಿಸುವ ಕಂಪೆನಿಯಾದ ಜಿವೇಶ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಮಾರಾಟ ಮಾಡಲಾಗಿದೆ.
ಚಂದ್ರ ಅವರು ಈಗಾಗಲೇ ಇಲ್ಲಿ ಕಳೆದ ಕೆಲವು ವರ್ಷಗಳಿಂದ ಲೀಸ್ ರೆಂಟಲ್ ಆದ ತಿಂಗಳಿಗೆ 20 ಲಕ್ಷ ರೂಪಾಯಿಯಂತೆ ಪಾವತಿಸುತ್ತಾ ಇದ್ದರು. ಫೆಬ್ರವರಿ 21, 2017ರಂದು ಟಾಟಾ ಸನ್ಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ 33 ಸೌಥ್ ಕಂಡೋಮಿನಿಯಮ್ಗೆ ತೆರಳಿದರು ಎಂದು ಈ ವ್ಯವಹಾರದ ಬಗ್ಗೆ ಮಾಹಿತಿ ಇರುವವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಮತ್ತೆ 5 ವರ್ಷಗಳ ಅವಧಿಗೆ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರನ್ನಾಗಿ ಮುಂದುವರಿಸಿದ ವೇಳೆ 98 ಕೋಟಿ ರೂಪಾಯಿಯ ಡೂಪ್ಲೆಕ್ಸ್ ಖರೀದಿ ಬಗ್ಗೆ ನಿರ್ಧರಿಸಿದ್ದರು. ಅವರು 2016ರ ಅಕ್ಟೋಬರ್ನಲ್ಲಿ ಟಾಟಾ ಸನ್ಸ್ ಮಂಡಳಿ ಸೇರ್ಪಡೆಯಾದರು. 2017ರ ಜನವರಿಯಲ್ಲಿ ಅಧ್ಯಕ್ಷರಾಗಿ ನೇಮಕವಾದರು.
ಈ ವರ್ಷದ ಫೆಬ್ರವರಿಯಲ್ಲಿ ಟಾಟಾ ಸನ್ಸ್ ಮಂಡಳಿಯು ಸರ್ವಾನುಮತದಿಂದ ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು ಮತ್ತೆ 5 ವರ್ಷಗಳಿಗೆ ವಿಸ್ತರಿಸಿತು. ಮಾಧ್ಯಮಗಳ ವರದಿ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಪಗಾರ ಪಡೆಯುವ ಕಾರ್ಪೊರೇಟ್ ಬಾಸ್ಗಳಲ್ಲಿ ಚಂದ್ರಶೇಖರನ್ ಒಬ್ಬರು. 2021ರಲ್ಲಿ ವಾರ್ಷಿಕ ವೇತನ 91 ಕೋಟಿ ರೂಪಾಯಿ ಪಡೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ