ಅನೈತಿಕ ವ್ಯವಹಾರ ಆರೋಪ: ಇಬ್ಬರು ಫಂಡ್ ಮ್ಯಾನೇಜರ್ಗಳನ್ನು ವಜಾ ಮಾಡಿದ ಆಕ್ಸಿಸ್ ಮ್ಯೂಚುವಲ್ ಫಂಡ್
ಅನೈತಿಕ ವಹಿವಾಟು ಆರೋಪದ ಮೇಲೆ ಇಬ್ಬರು ಫಂಡ್ ಮ್ಯಾನೇಜರ್ಗಳನ್ನು ಆ್ಯಕ್ಸಿಸ್ ಮ್ಯೂಚುವಲ್ ಫಂಡ್ನ ಆಡಳಿತ ಮಂಡಳಿಅಮಾನತು ಮಾಡಿದೆ.
ಮುಂಬೈ: ಆ್ಯಕ್ಸಿಸ್ ಮ್ಯೂಚುವಲ್ ಫಂಡ್ನ ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅನೈತಿಕ ವಹಿವಾಟು ಆರೋಪದ ಮೇಲೆ ಇಬ್ಬರು ಫಂಡ್ ಮ್ಯಾನೇಜರ್ಗಳನ್ನು ಅಮಾನತು ಮಾಡಿದೆ. ಈ ಬೆಳವಣಿಗೆಯಿಂದಾಗಿ ಆಕ್ಸಿಸ್ ಫಂಡ್ ಹೌಸ್ ನಿರ್ವಹಿಸುತ್ತಿದ್ದ ಏಳು ಮ್ಯೂಚುವಲ್ ಫಂಡ್ಗಳ ನಿರ್ವಹಣೆಯ ಚುಕ್ಕಾಣಿ ಹಿಡಿದ ಕೈಗಳು ಬದಲಾಗಿವೆ. ಟ್ರೇಡರ್, ರೀಸರ್ಚ್ ಅನಲಿಸ್ಟ್ ಮತ್ತು ಫಂಡ್ ಮ್ಯಾನೇಜರ್ಗಳಾಗಿದ್ದ ವೀರೇಶ್ ಜೋಶಿ ಮತ್ತು ದೀಪಕ್ ಅಗರ್ವಾಲ್ ಅಮಾನತು ಆದವರು.
ವೀರೇಶ್ ಜೋಶಿ ಅವರು ಆ್ಯಕ್ಸಿಸ್ ಆಬ್ರಿಟ್ರೇಜ್ ಫಂಡ್, ಆ್ಯಕ್ಸಿಸ್ ಬ್ಯಾಂಕಿಂಗ್ ಇಟಿಎಫ್, ಆ್ಯಕ್ಸಿಸ್ ಕನ್ಸಮ್ಷನ್ ಇಟಿಎಫ್, ಆ್ಯಕ್ಸಿಸ್ ನಿಫ್ಟಿ ಇಟಿಎಫ್, ಆ್ಯಕ್ಸಿಸ್ ಟೆಕ್ನಾಲಜಿ ಇಟಿಫ್ಗಳನ್ನು ಇತರರ ಸಹಯೋಗದಲ್ಲಿ ನಿರ್ವಹಿಸುತ್ತಿದ್ದರು. ದೀಪಕ್ ಅಗರ್ವಾಲ್ ಅವರು ಸ್ವತಂತ್ರವಾಗಿ ಅ್ಯಕ್ಸಿಸ್ ಕ್ವಾಂಟ್ ಫಂಡ್ ಮತ್ತು ಇತರರ ಸಹಯೋಗದಲ್ಲಿ ಆ್ಯಕ್ಸಿಸ್ ಕನ್ಸಮ್ಷನ್ ಇಟಿಎಫ್, ಆ್ಯಕ್ಸಿಸ್ ವ್ಯಾಲ್ಯೂ ಫಂಡ್ಗಳನ್ನು ನಿರ್ವಹಿಸುತ್ತಿದ್ದರು. ಈ ಎಲ್ಲ ಫಂಡ್ಗಳು ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಫಂಡ್ಗಳಾಗಿದ್ದವು. ಆಶಿಶ್ ನಾಯಕ್ ಮತ್ತು ಜಿನೇಶ್ ಗೋಪಾನಿ ಅವರಿಗೆ ಇದೀಗ ಈ ಫಂಡ್ಗಳ ಹೊಣೆ ವಹಿಸಲಾಗಿದೆ.
‘ನಿಯಮಗಳಿಗೆ ಬದ್ಧವಾಗಿರಬೇಕು ಎನ್ನುವುದು ಆ್ಯಕ್ಸಿಸ್ ಎಎಂಸಿ ಘೋಷಿಸಿಕೊಂಡಿರುವ ನೀತಿ. ನಮ್ಮೆಲ್ಲ ಸಿಬ್ಬಂದಿ ಇದಕ್ಕೆ ಬದ್ಧವಾಗಿರಬೇಕು. ನಾವು ಕಳೆದ ಎರಡು ತಿಂಗಳುಗಳಿಂದ ಸ್ವಯಂಪ್ರೇರಿತ ಆಂತರಿಕ ವಿಚಾರಣೆ ನಡೆಸುತ್ತಿದ್ದೇವೆ. ಇದಕ್ಕಾಗಿ ಪ್ರತಿಷ್ಠಿತ ಬಾಹ್ಯ ಸಲಹೆಗಾರರ ಮಾರ್ಗದರ್ಶನ ಪಡೆದುಕೊಂಡಿದ್ದೇವೆ. ಈ ಪ್ರಕ್ರಿಯೆಯ ಭಾಗವಾಗಿ ಇಬ್ಬರು ಫಂಡ್ ಮ್ಯಾನೇಜರ್ಗಳ ವಿರುದ್ಧ ವಿಚಾರಣೆ ಬಾಕಿಯಿಟ್ಟು, ಅವರನ್ನು ಅಮಾನತು ಮಾಡಲಾಗಿದೆ’ ಎಂಬ ಆ್ಯಕ್ಸಿಸ್ ಮ್ಯೂಚುವಲ್ ಫಂಡ್ ಹೇಳಿಕೆಯನ್ನು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಅಮಾನತಾಗಿರುವ ವೀರೇಶ್ ಜೋಶಿ ಮತ್ತು ದೀಪಕ್ ಅಗರ್ವಾಲ್ ವಿರುದ್ಧ ಫ್ರಂಟ್ ರನಿಂಗ್ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿತ್ತು. ಷೇರು ದಲ್ಲಾಳಿಯೊಬ್ಬರಿಗೆ ಬೃಹತ್ ಪ್ರಮಾಣದ ಷೇರು ವಹಿವಾಟಿನ ಗೌಪ್ಯ ಮಾಹಿತಿ ಲಭ್ಯವಾಗಿ, ಅವರು ಅದರಿಂದ ದೊಡ್ಡಮಟ್ದ ಲಾಭಮಾಡಿಕೊಳ್ಳುವಂಥ ವಹಿವಾಟು ನಡೆಸುವುದನ್ನು ಫ್ರಂಟ್ ರನಿಂಗ್ ಎನ್ನುತ್ತಾರೆ. ಭಾರತದಲ್ಲಿ ಇಂತ ವಹಿವಾಟನ್ನು ಅನೈತಿಕ ಎಂದು ಕರೆಯಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ.
ಈ ಬೆಳವಣಿಗೆಯ ನಂತರ ಈ ಫಂಡ್ಗಳಲ್ಲಿ ಹೂಡಿಕೆ ಮಾಡಿರುವ ಕೆಲವರು ಗಾಬರಿಗೊಂಡಿದ್ದಾರೆ. ಆದರೆ ಅಂಥ ಚಿಂತೆ ಅನಗತ್ಯ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ್ಯಕ್ಸಿಸ್ ಎಎಂಸಿಯ ಮ್ಯೂಚುವಲ್ ಫಂಡ್ಗಳನ್ನು ಹಲವು ಮ್ಯಾನೇಜರ್ಗಳು ನಿರ್ವಹಿಸುತ್ತಾರೆ. ಹೀಗಾಗಿ ಯಾರೋ ಒಬ್ಬಿಬ್ಬರು ಮ್ಯಾನೇಜರ್ಗಳ ವಿರುದ್ಧ ಆರೋಪ ಕೇಳಿ ಬಂದ ಮಾತ್ರಕ್ಕೆ ಹೂಡಿಕೆದಾರರು ಗಾಬರಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಹೂಡಿಕೆಯ ಯಾವುದೇ ನಿರ್ಧಾರದ ಮೇಲೆಯೂ ಈ ಸುದ್ದಿಯ ಪರಿಣಾಮ ಇರಬಾರದು. ಫಂಡ್ಗಳು ಹೂಡಿಕೆ ಮಾಡಿರುವ ರೀತಿಯಲ್ಲಿ, ಈ ಫಂಡ್ಗಳ ಭಾಗವಾಗಿರುವ ಕಂಪನಿಗಳ ಷೇರುಗಳ ಮಾರಾಟ ಅಥವಾ ಖರೀದಿ ನಡೆದರೆ ಅದನ್ನೂ ಫಂಡ್ಹೌಸ್ ಜನರ ಗಮನಕ್ಕೆ ತರಲಿದೆ ಎಂದು ಹೂಡಿಕೆ ಸಲಹೆಗಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಫ್ರಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸೋದು ಹೇಗೆ..! ಇಲ್ಲಿದೆ ಮಾಹಿತಿ
ಇದನ್ನೂ ಓದಿ: Mutual Funds: ಮ್ಯೂಚುವಲ್ ಫಂಡ್ಸ್ ಪ್ಲಾನ್ನಲ್ಲಿ ಹೂಡಿಕೆ ಮಾಡುವಾಗ ಈ 5 ಅಂಶಗಳನ್ನು ಗಮನಿಸಿ
Published On - 2:01 pm, Sun, 8 May 22