ನವದೆಹಲಿ: ಭಾರತದಲ್ಲಿ ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಐಟಿ ಕಂಪನಿ ಎನಿಸಿರುವ ಟಿಸಿಎಸ್ನಲ್ಲಿ ಕೆಲಸದ ವಾತಾವರಣ ಕೂಡ ಉತ್ತಮ ಎಂದು ಬಹಳ ಮಂದಿ ಹೇಳುವುದಿದೆ. ಲಿಂಕ್ಡ್ಇನ್ (LinkedIn) ವರದಿಯೊಂದರ ಪ್ರಕಾರ ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಇರುವ ಕಂಪನಿಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (TCS- Tata Consultancy Service) ಪ್ರಥಮ ಸ್ಥಾನ ಪಡೆದಿದೆ. ಲಿಂಕ್ಡ್ಇನ್ನ ‘2023 ಟಾಪ್ ಕಂಪನೀಸ್ ಇಂಡಿಯಾ’ ಪಟ್ಟಿಯಲ್ಲಿ ಟಿಸಿಎಸ್ ಅಗ್ರಜ ಎನಿಸಿದೆ. ಕೆಲಸ ಮಾಡಲು ಮತ್ತು ವೃತ್ತಿ ಬೆಳವಣಿಗೆ ಹೊಂದಲು ಅತ್ಯುತ್ತಮ ವಾತಾವರಣ ಇರುವ ಕಂಪನಿಗಳ ಈ ಪಟ್ಟಿಯಲ್ಲಿ ಟಿಸಿಎಸ್ ನಂತರದ ಸ್ಥಾನವನ್ನು ಅಮೇಜಾನ್ ಹಾಗೂ ಮಾರ್ಗನ್ ಸ್ಟಾನ್ಲೀ ಕಂಪನಿಗಳು ಪಡೆದಿವೆ.
ವೃತ್ತಿಪರರ ಸೋಷಿಯಲ್ ಮೀಡಿಯಾ ತಾಣವೆನಿಸಿರುವ ಲಿಂಕ್ಡ್ಇನ್ ಪ್ರತೀ ವರ್ಷವೂ ಇಂಥ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಅತ್ಯುತ್ತಮ ಕೆಲಸದ ವಾತಾವರಣ ಇರುವ ಕಂಪನಿಗಳ ಪಟ್ಟಿಯಲ್ಲಿ ಐಟಿ ಕ್ಷೇತ್ರದವೇ ಹೆಚ್ಚಿರುತ್ತಿದ್ದವು. ಈ ಬಾರಿ ಬೇರೆ ಬೇರೆ ಕ್ಷೇತ್ರದ ಕಂಪನಿಗಳು ಪಟ್ಟಿಯಲ್ಲಿವೆ. ಟೆಕ್ ಕಂಪನಿಗಳ ಜೊತೆ ಹಣಕಾಸು ಸೇವೆ, ಆಯಿಲ್ ಅಂಡ್ ಗ್ಯಾಸ್, ವೃತ್ತಿಪರ ಸೇವೆ, ತಯಾರಕಾ ವಲಯ, ಗೇಮಿಂಗ್ ಕ್ಷೇತ್ರದ ಕಂಪನಿಗಳು ಈ ಪಟ್ಟಿಯಲ್ಲಿವೆ.
ಇದನ್ನೂ ಓದಿ: Salary Hike: 18 ತಿಂಗಳಲ್ಲಿ ಮೂರನೇ ವೇತನ ಹೆಚ್ಚಳ: ಈ ಐಟಿ ಕಂಪನಿಯು ಇತರರಿಗೆ ಮಾದರಿಯಾಗುತ್ತಿದೆ
ಅತ್ಯುತ್ತಮ ಕೆಲಸದ ವಾತಾವರಣ ಇರುವ ಕಂಪನಿಗಳ ಪಟ್ಟಿಯಲ್ಲಿರುವ 25 ಸಂಸ್ಥೆಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿರುವಂಥವೇ ಆಗಿರುವುದು ವಿಶೇಷ. ಬೆಂಗಳೂರು ನಂತರ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಪುಣೆ ನಗರಗಳು ಬರುತ್ತವೆ.
ಅತ್ಯುತ್ತಮ ಕೆಲಸದ ವಾತಾರಣ ಇರುವ ಕಂಪನಿಗಳ ಪಟ್ಟಿಯಲ್ಲಿ 25 ಕಂಪನಿಗಳು ಸ್ಥಾನ ಪಡೆದಿವೆ. ಇವುಗಳಲ್ಲಿ 10 ಕಂಪನಿಗಳು ಬ್ಯಾಂಕಿಂಗ್ ಇತ್ಯಾದಿ ಹಣಕಾಸು ಕ್ಷೇತ್ರಕ್ಕೆ ಸೇರಿದವೇ ಆಗಿರುವುದು ಗಮನಾರ್ಹ. ಎಚ್ಡಿಎಫ್ಸಿ ಬ್ಯಾಂಕ್, ಮೆಕೇರೀ ಗ್ರೂಪ್, ಮಾಸ್ಟರ್ಕಾರ್ಡ್, ಯುಬಿ ಇತ್ಯಾದಿ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಗೇಮಿಂಗ್ ಕ್ಷೇತ್ರದ ಕಂಪನಿಗಳು ಇದೇ ಮೊದಲ ಬಾರಿಗೆ ಸ್ಥಾನ ಪಡೆದಿವೆ. ಡ್ರೀಮ್11 ಮತ್ತು ಗೇಮ್ಸ್ 24X7 ಕಂಪನಿಗಳು ಈ ಪಟ್ಟಿಯಲ್ಲಿ ಕ್ರಮವಾಗಿ 20 ಮತ್ತು 24ನೇ ಸ್ಥಾನ ಪಡೆದಿವೆ. ಇನ್ನೂ ಕುತೂಹಲವೆಂದರೆ ಈ 25 ಕಂಪನಿಗಳಲ್ಲಿ 17 ಕಂಪನಿಗಳು ಇದೇ ಮೊದಲ ಬಾರಿಗೆ ಸ್ಥಾನ ಪಡೆದಿರುವುದು.
‘2023 ಟಾಪ್ ಕಂಪನೀಸ್ ಇಂಡಿಯಾ’ ಪಟ್ಟಿ ತಯಾರಿಸಲು ಲಿಂಕ್ಡ್ಇನ್ 8 ಪಿಲ್ಲರ್ಗಳ ಮಾನದಂಡದ ಆಧಾರದ ಮೇಲೆ ಕಂಪನಿಗಳನ್ನು ಆಯ್ಕೆ ಮಾಡಿದೆ. ಉದ್ಯೋಗಿಗಳಿಗೆ ವೃತ್ತಿಯಲ್ಲಿ ಪ್ರಗತಿ ಹೊಂದುವ ಅವಕಾಶಗಳು ಎಷ್ಟಿವೆ ಎಂಬುದು ಈ ಮಾನದಂಡಗಳ ಮೂಲಕ ಅಳೆಯಲಾಗುತ್ತದೆ. ಕೌಶಲ್ಯಗಳ ಮಟ್ಟ ಹೆಚ್ಚಿಸಿಕೊಳ್ಳುವುದು, ಕಂಪನಿಯ ಸ್ಥಿರತೆ, ಬಾಹ್ಯ ಅವಕಾಶ, ಲಿಂಗ ವೈವಿಧ್ಯತೆ, ಶಿಕ್ಷಣ ಹಿನ್ನೆಲೆ, ವೃತ್ತಿ ಅಭಿವೃದ್ಧಿ ಇತ್ಯಾದಿ ಪಿಲ್ಲರ್ಗಳನ್ನು ಲಿಂಕ್ಡ್ಇನ್ ತನ್ನ ಡಾಟಾ ಮೂಲಕ ಗ್ರಹಿಸಿ ವಿವಿಧ ಕಂಪನಿಗಳಿಗೆ ಶ್ರೇಯಾಂಕ ಕೊಟ್ಟಿರುವುದು ತಿಳಿದುಬಂದಿದೆ.