ಟಿಸಿಎಸ್ ಉದ್ಯೋಗಿಗಳಿಗೆ ಸಂಕಷ್ಟ; ವೇರಿಯಬಲ್ ಪೇ ಕಡಿತಗೊಳಿಸುತ್ತಿರುವ ಟಾಟಾ ಕಂಪನಿ
Tata Consultancy Services variable pay cut: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ತನ್ನ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಹಾಕುತ್ತಿರುವುದು ತಿಳಿದುಬಂದಿದೆ. ಸಂಬಳದ ಜೊತೆಗೆ ತ್ರೈಮಾಸಿಕವಾಗಿ ನೀಡುವ ವೇರಿಯಬಲ್ ಪೇನಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಕಡಿತ ಮಾಡಿದೆ. ಬಹುತೇಕ ಹಿರಿಯ ಉದ್ಯೋಗಿಗಳಿಗೆ ಇದರ ಪರಿಣಾಮವಾಗಿದೆ ಎಂದು ವರದಿಗಳು ಹೇಳುತ್ತಿವೆ.
ಬೆಂಗಳೂರು, ನವೆಂಬರ್ 14: ಟಾಟಾ ಗ್ರೂಪ್ನ ಪ್ರಮುಖ ಕಂಪನಿಗಳಲ್ಲಿ ಒಂದಾದ ಟಿಸಿಎಸ್ ತನ್ನ ವೆಚ್ಚ ಕಡಿತಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಉದ್ಯೋಗಿಗಳ ವೇರಿಯಬಲ್ ಪೇ ಹಣಕ್ಕೆ ಕತ್ತರಿ ಹಾಕಿದೆ ಎನ್ನಲಾಗಿದೆ. ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ನೀಡಲಾಗುವ ವೇರಿಯಬಲ್ ಪೇನಲ್ಲಿ ಕನಿಷ್ಠ ಅರ್ಧದಷ್ಟು ಕಡಿಮೆ ಮಾಡಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ತಿಳಿಸಲಾಗಿದೆ. ಬಹುತೇಕ ಹಿರಿಯ ಉದ್ಯೋಗಿಗಳಿಗೆ ಇದರ ಹಣದಲ್ಲಿ ಕತ್ತರಿ ಬಿದ್ದಿದೆ.
ಕಳೆದ ಕೆಲ ತಿಂಗಳುಗಳಿಂದಲೇ ಟಿಸಿಎಸ್ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಬೀಳುತ್ತಿರುವುದು ಕಂಡು ಬಂದಿದೆ. ಮೂರು ತಿಂಗಳ ಹಿಂದೆ ರೆಡ್ಡಿಟ್ನಲ್ಲಿ ಟಿಸಿಎಸ್ ಉದ್ಯೋಗಿಯೊಬ್ಬರು ತಮ್ಮ ಸಂಬಳದಲ್ಲಿನ ವೇರಿಯಬಲ್ ಪೇನಲ್ಲಿ ಶೇ. 40ರಷ್ಟು ಕಡಿತ ಆಗಿದೆ ಎಂದು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ: 1ರಿಂದ 25 ವರ್ಷದವರೆಗೆ ಹೂಡಿಕೆಯಲ್ಲಿ ಅತಿಹೆಚ್ಚು ಲಾಭ ಕೊಟ್ಟಿರೋದು ಈಕ್ವಿಟಿಯೇ: ಮಾರ್ಗನ್ ಸ್ಟಾನ್ಲೀ ವರದಿ
ಕೆಲ ಮಾಧ್ಯಮ ವರದಿ ಪ್ರಕಾರ ಟಿಸಿಎಸ್ ಉದ್ಯೋಗಿಗಳಿಗೆ ವೇರಿಯಬಲ್ ಪೇನಲ್ಲಿ ಕನಿಷ್ಠ ಶೇ. 50ರಷ್ಟು ಕಡಿತ ಆಗಿದೆ ಎನ್ನಲಾಗಿದೆ. ಕೆಲವರಿಗೆ ವೇರಿಯಬಲ್ ಪೇ ಸಿಕ್ಕೇ ಇಲ್ಲ.
ವೇರಿಯಬಲ್ ಪೇ ಅನ್ನು ಟಿಸಿಎಸ್ ಹಾಜರಾತಿಗೆ ಲಿಂಕ್ ಮಾಡಿತ್ತು. ಅಂದರೆ, ಶೇ. 85ರಷ್ಟು ಕೆಲಸದ ದಿನಗಳನ್ನು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಿದರೆ ವೇರಿಯಬಲ್ ಪೇ ಸಿಗುತ್ತದೆ ಎನ್ನುವ ನೀತಿಯನ್ನು ಜಾರಿಗೆ ತಂದಿತ್ತು. ವರ್ಕ್ ಫ್ರಂ ಹೋಮ್ ಸಂಪ್ರದಾಯವನ್ನು ನಿಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಅದಾದ ಬಳಿಕ ಬಹುತೇಕ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಆದರೂ ಕೂಡ ವೇರಿಯಬಲ್ ಪೇನಲ್ಲಿ ಕಡಿತ ಆಗಿದೆ ಎನ್ನುತ್ತಿದ್ದಾರೆ.
ಐಟಿ ಸೆಕ್ಟರ್ನ ಬಿಸಿನೆಸ್ ಆರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ. ಪೈಪೋಟಿ ಕಾರಣದಿಂದಾಗಿ ಲಾಭದ ಮಾರ್ಜಿನ್ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ಕಂಪನಿ ಎನಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ 64,259 ಕೋಟಿ ರು ಆದಾಯ ಸೃಷ್ಟಿಸಿದೆ. ಇದರಿಂದ ಬಂದಿರುವ ನಿವ್ವಳ ಲಾಭ 11,909 ಕೋಟಿ ರೂ ಮಾತ್ರವೇ.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ…
ಬಿಸಿನೆಸ್ನಲ್ಲಿ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿರುವುದರಿಂದ ಟಿಸಿಎಸ್ ತನ್ನ ವೆಚ್ಚವನ್ನು ತಗ್ಗಿಸುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಹಾಕುವ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ