
ನವದೆಹಲಿ, ಏಪ್ರಿಲ್ 6: ಇಲಾನ್ ಮಸ್ಕ್ ಮಾಲಕತ್ವದ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾ (Tesla) ಭಾರತಕ್ಕೆ ಬರುವ ಸಾಧ್ಯತೆ ಇದೆ. ಆ ಕಂಪನಿ ಬಂದರೆ ಭಾರತದ ಇವಿ ಕಂಪನಿಗಳು ಬೇಗ ಪತನಗೊಳ್ಳಬಹುದು ಎನ್ನುವ ಭೀತಿ ಕೆಲವೆಡೆಯಲ್ಲಿದೆ. ಆದರೆ, ಭಾರತದ ಆಟೊಮೊಬೈಲ್ ಕ್ಷೇತ್ರದ ಹಲವು ನಾಯಕರು ಟೆಸ್ಲಾ ಆಗಮನ ಸಾಧ್ಯತೆಯಿಂದ ದೃತಿಗೆಟ್ಟಂತಿಲ್ಲ. ಮಹೀಂದ್ರ ಅಂಡ್ ಮಹೀಂದ್ರ (Mahindra & Mahindra) ಸಂಸ್ಥೆ ತಾನು ಟೆಸ್ಲಾವನ್ನು ಸ್ವಾಗತಿಸುವುದಾಗಿ ಹೇಳಿದೆ. ಭಾರತದಲ್ಲಿ ಇವಿ ಮಾರುಕಟ್ಟೆಯಲ್ಲಿ ಪ್ರಬಲವಾಗಿ ಬೆಳೆದಿರುವ ಬಿಎಂಡಬ್ಲ್ಯು ಗ್ರೂಪ್ ಸಂಸ್ಥೆ ಕೂಡ ಈ ಅಭಿಪ್ರಾಯವನ್ನು ಪುನರುಚ್ಚರಿಸಿದೆ. ಟೆಸ್ಲಾ ಕಂಪನಿ ಆಗಮನದಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಹಿಗ್ಗಲಿದೆ ಎಂದು ಬಿಎಂಡಬ್ಲ್ಯು ಗ್ರೂಪ್ನ ಸಿಇಒ ಮತ್ತು ಎಂಡಿ ವಿಕ್ರಮ್ ಪಾವಾ ಹೇಳಿದ್ದಾರೆ.
‘ಮಾರುಕಟ್ಟೆ ಬೆಳೆಯಬೇಕು ಎನ್ನುವುದು ನನ್ನ ಭಾವನೆ. ಹೆಚ್ಚು ಸ್ಪರ್ಧೆ ಇದ್ದಾಗೆಲ್ಲಾ ಮಾರುಕಟ್ಟೆ ಬೆಳೆಯುವುದನ್ನು ನಾವು ಕಂಡಿದ್ದೇವೆ… ವಿಶ್ವದ ಯಾವುದೇ ಮಾರುಕಟ್ಟೆ ತೆಗೆದುಕೊಂಡರೂ ಟೆಸ್ಲಾ ಜೊತೆ ನಾವೂ ಸ್ಪರ್ಧೆಯಲ್ಲಿದ್ದೇವೆ. ನಾವೂ ಬೆಳೆಯುತ್ತಿದ್ದೇವೆ. ವಿಶ್ವಾದ್ಯಂತ ನಮ್ಮ ಇವಿಗಳ ಮಾರಾಟ ಹೆಚ್ಚಾಗಿದೆ’ ಎಂದು ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಸಂಸ್ಥೆಯ ಸಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಾರ್ಟಪ್ಗಳ ಉತ್ತೇಜನಕ್ಕಾಗಿ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್, ಹೆಲ್ಪ್ಲೈನ್ ಘೋಷಣೆ
ಬಿಎಂಡಬ್ಲ್ಯು ಗ್ರೂಪ್ ಸಂಸ್ಥೆ ಬಿಎಂಡಬ್ಲ್ಯು ಮತ್ತು ಮಿನಿ ಎನ್ನುವ ಬ್ರ್ಯಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ. 2024ರಲ್ಲಿ ಬಿಎಂಡಬ್ಲ್ಯು ಬ್ರ್ಯಾಂಡ್ನಲ್ಲಿ 3,68,523 ಇವಿಗಳನ್ನು ಮಾರಾಟ ಮಾಡಿದೆ. ಮಿನಿ ಬ್ರ್ಯಾಂಡ್ನಲ್ಲಿ 56,181 ಇವಿಗಳನ್ನು ಮಾರಿದೆ. ಎರಡೂ ಸೇರಿ 2024ರಲ್ಲಿ ಒಟ್ಟು 4,26,594 ಎಲೆಕ್ಟ್ರಿಕ್ ವಾಹಗಳನ್ನು ಬಿಎಂಡಬ್ಲ್ಯು ಮಾರಿದೆ. ಇದು ಜಾಗತಿಕವಾಗಿ ಅದು ಮಾರಿದ ಕಾರುಗಳ ಸಂಖ್ಯೆ.
ಜರ್ಮನಿ ಮೂಲದ ಬಿಎಂಡಬ್ಲ್ಯು ಗ್ರೂಪ್ ಭಾರತದಲ್ಲಿ ತಯಾರಕಾ ಘಟಕ ಸ್ಥಾಪಿಸಿ ಹತ್ತಿರ ಹತ್ತಿರ ಎರಡು ದಶಕವಾಗಿದೆ. 2007ರಲ್ಲಿ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪಿಸಿದ ಬಿಎಂಡಬ್ಲ್ಯು, ಇಲ್ಲಿ ಅತಿಹೆಚ್ಚು ಕಾರು ಮಾರುವ ಕಂಪನಿಗಳ ಸಾಲಿಗೆ ಸೇರಿದೆ. ಇತ್ತೀಚೆಗೆ, ಇವಿ ಸೆಗ್ಮೆಂಟ್ಗೂ ಅದು ಕಾಲಿಟ್ಟಿದೆ. ಬಿಎಂಬಡ್ಲ್ಯು ಮತ್ತು ಮಿನಿ ಎನ್ನುವ ಎರಡು ಬ್ರ್ಯಾಂಡ್ಗಳನ್ನು ಸೇರಿ 1,249 ಎಲೆಕ್ಟ್ರಿಕ್ ಕಾರುಗಳನ್ನು ಅದು ಮಾರಿದೆ. 2025ರ ಮೊದಲ ಕ್ವಾರ್ಟರ್ನಲ್ಲಿ (ಜನವರಿಯಿಂದ ಮಾರ್ಚ್) 646 ಇವಿಗಳನ್ನು ಮಾರಿದೆ. ಅದರ ಒಟ್ಟು ಕಾರುಗಳಲ್ಲಿ ಶೇ. 15ರಷ್ಟವು ಇವಿಗಳಾಗಿವೆ.
ಇದನ್ನೂ ಓದಿ: ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?
ಟೆಸ್ಲಾ ಸಂಸ್ಥೆ 2027ರಲ್ಲಿ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪಿಸುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳುತ್ತಿವೆ. ಟೆಸ್ಲಾ ಪರಿಪೂರ್ಣ ಎಲೆಕ್ಟ್ರಿಕ್ ವಾಹನ ತಯಾರಕಾ ಸಂಸ್ಥೆಯಾಗಿದ್ದು, ಭಾರತದಲ್ಲಿ ಇವಿ ಮಾರುಕಟ್ಟೆಯನ್ನು ಬೇಗ ಆಕ್ರಮಿಸಿಕೊಳ್ಳಬಹುದು ಎಂಬ ಅನಿಸಿಕೆಗಳಿವೆ. ಟೆಸ್ಲಾವನ್ನೂ ಮೀರಿಸುವ ಮತ್ತು ವಿಶ್ವದ ಅತಿದೊಡ್ಡ ಇವಿ ಕಂಪನಿಯಾದ ಚೀನಾದ ಬಿವೈಡಿ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪಿಸಬಹುದು ಎಂದು ಹೇಳಲಾಗಿತ್ತು. ಸದ್ಯ ಬಿವೈಡಿ ಸಂಸ್ಥೆ ಈ ವರದಿಯನ್ನು ಅಲ್ಲಗಳೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ