ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಫ್ಯಾಕ್ಟರಿಗೆ ಸ್ಥಳ ಶೋಧನೆಯಲ್ಲಿ ಟೆಸ್ಲಾ ಕಂಪನಿ; ಮೂರು ರಾಜ್ಯಗಳಲ್ಲಿ ಒಂದನ್ನು ಆರಿಸುವ ಸಾಧ್ಯತೆ
Tesla to manufacture EVs in India: ಜಾಗತಿಕ ಇವಿ ದೈತ್ಯ ಟೆಸ್ಲಾ ಭಾರತದಲ್ಲಿ ಎರಡರಿಂದ ಮೂರು ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಇವಿ ಘಟಕವೊಂದನ್ನು ಸ್ಥಾಪಿಸಲಿದೆ. ಇದೇ ಏಪ್ರಿಲ್ ಕೊನೆಯಲ್ಲಿ ಅಮೆರಿಕದಿಂದ ಟೆಸ್ಲಾ ತಂಡದವರು ಭಾರತಕ್ಕೆ ಆಗಮಿಸಲಿದ್ದು, ಸೂಕ್ತ ಸ್ಥಳಗಳಿಗೆ ಶೋಧ ನಡೆಸಲಿದ್ದಾರೆ. ಭಾರತದಲ್ಲಿ ಕರ್ನಾಟಕ ಸೇರಿದಂತೆ ಏಳೆಂಟು ರಾಜ್ಯಗಳಲ್ಲಿ ಇವಿ ಉದ್ಯಮ ನೆಲಸಿದೆ. ಆದರೆ, ಪ್ರಮುಖವಾಗಿ ಚೆನ್ನೈ, ಪುಣೆ ಮತ್ತು ದೆಹಲಿ ಎನ್ಸಿಆರ್ ಪ್ರದೇಶಗಳಲ್ಲಿ ಆಟೊಮೋಟಿವ್ ಸೆಕ್ಟರ್ ಕೇಂದ್ರಿತವಾಗಿದೆ. ಇಲ್ಲಿ ಯಾವುದಾದರೂ ಒಂದು ಸ್ಥಳವನ್ನು ಟೆಸ್ಲಾ ಆರಿಸಿಕೊಳ್ಳುವ ನಿರೀಕ್ಷೆ ಇದೆ.
ನವದೆಹಲಿ, ಏಪ್ರಿಲ್ 4: ಇಲಾನ್ ಮಸ್ಕ್ ಮಾಲಕತ್ವದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ (Tesla) ಭಾರತದಲ್ಲಿ ಉತ್ಪಾದನೆ ಆರಂಭಿಸುವುದು ನಿಶ್ಚಿತವಾಗಿದೆ. ಕನಿಷ್ಠ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಮೂರು ವರ್ಷದಲ್ಲಿ ಉತ್ಪಾದನೆ ಆರಂಭಿಸಲು ಬದ್ಧವಾಗುವ ಎಲೆಕ್ಟ್ರಿಕ್ ಕಾರ್ ಕಂಪನಿಗಳ ವಾಹನಗಳಿಗೆ ಭಾರತ ಸರ್ಕಾರ ಆಮದು ಸುಂಕ (import duty) ಕಡಿಮೆ ಮಾಡುವ ಕ್ರಮವನ್ನು ಘೋಷಿಸಿದ ಬೆನ್ನಲ್ಲೇ ಟೆಸ್ಲಾ ಕಂಪನಿ ಹೂಡಿಕೆಗೆ ಸಜ್ಜಾಗಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಟೆಸ್ಲಾ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕೆ 2-3 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಲು ಕಂಪನಿಯ ಒಂದು ತಂಡ ಈ ತಿಂಗಳೇ ಭಾರತಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.
ವರದಿ ಪ್ರಕಾರ, ಭಾರತದಲ್ಲಿ ವಾಹನ ಕ್ಷೇತ್ರದ ವಿವಿಧ ಉತ್ಪಾದನಾ ಘಟಕಗಳು ಕೇಂದ್ರೀಕೃತವಾಗಿರುವ ಆರೇಳು ನಗರಗಳಿವೆ. ಏಪ್ರಿಲ್ ಕೊನೆಯ ವಾರದಲ್ಲಿ ಟೆಸ್ಲಾ ತಂಡದವರು ಅಮೆರಿಕದಿಂದ ಆಗಮಿಸಲಿದ್ದು, ಈ ಎಲ್ಲಾ ಜಾಗಕ್ಕೂ ಭೇಟಿ ನೀಡಿ ಸ್ಥಳಗಳ ಪರಿಶೀಲನೆ ನಡೆಸಬಹುದು.
ಇದನ್ನೂ ಓದಿ: ವೀಕೆಂಡ್ ರಜೆಗಳಿಲ್ಲ, ದಿನಕ್ಕೆ 15 ಗಂಟೆ ಕೆಲಸ; ವರ್ಕ್ ಫ್ರಂ ಕೇಳಲೇಬೇಡಿ: ಇದು ನವಿ ಕಂಪನಿ ಬಾಸ್ ಕಥೆ
ಮಹಾರಾಷ್ಟ್ರದ ಪುಣೆ ಮತ್ತು ತಮಿಳುನಾಡಿನ ಚೆನ್ನೈ ನಗರಗಳು ಭಾರತದಲ್ಲಿ ಪ್ರಮುಖ ಆಟೊಮೋಟಿವ್ ಹಬ್ಗಳಾಗಿವೆ. ಇಲ್ಲಿ ಹೆಚ್ಚಿನ ವಾಹನ ತಯಾರಿಕೆ ಘಟಕಗಳು ಹಾಗೂ ವಾಹನ ಬಿಡಿಭಾಗ ತಯಾರಿಕೆಯ ಘಟಕಗಳು ಕೇಂದ್ರಿತವಾಗಿವೆ. ದೆಹಲಿಯ ಎನ್ಸಿಆರ್ ಪ್ರದೇಶದಲ್ಲೂ ಹಲವು ಕಂಪನಿಗಳ ಫ್ಯಾಕ್ಟರಿ ಇವೆ. ಗುಜರಾತ್ ಹಾಗೂ ಕರ್ನಾಟಕದಲ್ಲೂ ಹಲವು ಫ್ಯಾಕ್ಟರಿಗಳಿವೆ. ಟೆಸ್ಲಾದ ತಂಡದವರು ಈ ಎಲ್ಲಾ ಸ್ಥಳಗಳಿಗೆ ಬಂದು ತಮ್ಮ ಫ್ಯಾಕ್ಟರಿಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಿದೆ ಎಂದು ಫೈನಾನ್ಷಿಯಲ್ ಟೈಮ್ಸ್ನ ವರದಿಯಲ್ಲಿ ಹೇಳಲಾಗಿದೆ.
ಟೆಸ್ಲಾಗೆ ಈಗ ಭಾರತದ ಮಾರುಕಟ್ಟೆ ಬಹಳ ಮುಖ್ಯ
ಎಲೆಕ್ಟ್ರಿಕ್ ಕಾರಿನ ಕ್ಷೇತ್ರದಲ್ಲಿ ಟೆಸ್ಲಾ ಜಾಗತಿಕವಾಗಿ ನಂಬರ ಒನ್. ಆದರೆ, ಚೀನಾದ ಕೆಲ ಕಂಪನಿಗಳು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರು ತಯಾರಿಸಿ ಟೆಸ್ಲಾಗೆ ಪೈಪೋಟಿ ನೀಡುತ್ತಿದೆ. ಅಮೆರಿಕ, ಚೀನಾ ಮೊದಲಾದ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತಿದೆ. ಇದೇ ವೇಳೆ ಭಾರತದಲ್ಲಿ ಈಗ ಇ-ಕಾರುಗಳ ಉದ್ಯಮ ಬೆಳೆಯತೊಡಗಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬೇಗನೇ ಹಿಡಿತ ಸಾಧಿಸಲು ಟೆಸ್ಲಾಗೆ ಇದೇ ಸರಿಯಾದ ಸಂದರ್ಭವಾಗಿದೆ ಎಂಬುದು ತಜ್ಞರ ಅನಿಸಿಕೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ 200 ದಾಟಿದ ಬಿಲಿಯನೇರ್ಗಳ ಸಂಖ್ಯೆ; ಪಟ್ಟಿಗೆ ಈ ವರ್ಷ 25 ಹೊಸಬರು ಸೇರ್ಪಡೆ
ಕಳೆದ ವರ್ಷ ಬಂದಿದ್ದ ವರದಿಯೊಂದರ ಪ್ರಕಾರ ಟೆಸ್ಲಾ ಕಂಪನಿ ಭಾರತದಲ್ಲಿ 24,000 ಡಾಲರ್ (ಸುಮಾರು 20 ಲಕ್ಷ ರುಪಾಯಿ) ಮೌಲ್ಯದ ಎಲೆಕ್ಟ್ರಿಕ್ ವಾಹನವನ್ನು ತಯಾರಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ