
ಆ್ಯಪಲ್ (Apple) ಕಂಪನಿಯ ಐಫೋನ್ಗಳನ್ನು ಬಳಸುತ್ತಿರುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಕಂಪನಿ ತನ್ನ ಬಳಕೆದಾರರನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಇದೀಗ ಹೊಸ ಪ್ಲಾನ್ನೊಂದಿಗೆ ಆ್ಯಪಲ್ ಮತ್ತೆ ಬಂದಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿ ಈಗಲೂ ಭರ್ಜರಿ ಸೇಲ್ ಕಾಣುತ್ತಿರುವ ಐಫೋನ್ 14 (iPhone 14) ಮತ್ತು ಐಫೋನ್ 14 ಪ್ಲಸ್ ಸ್ಮಾರ್ಟ್ಫೋನನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಈ ಎರಡೂ ಫೋನ್ ಹಳದಿ ಬಣ್ಣದಲ್ಲಿ (Yellow Color) ಅನಾವರಣ ಆಗುತ್ತಿದೆ. ಮಾರ್ಚ್ 14 ರಂದು ಐಫೋನ್ 14 ಮತ್ತು 14 ಪ್ಲಸ್ ಭಾರತದಲ್ಲಿ ಹೊಸ ಬಣ್ಣದೊಂದಿಗೆ ಲಾಂಚ್ ಆಗಲಿದೆ. ಮಾರ್ಚ್ 10 ರಿಂದ ಇದರ ಪ್ರೀ ಬುಕ್ಕಿಂಗ್ ಕೂಡ ಶುರುವಾಗಲಿದೆ.
ಆ್ಯಪಲ್‌ನ ಪಿಆರ್ ತಂಡವು ಮುಂದಿನ ವಾರ ಉತ್ಪನ್ನ ಬ್ರೀಫಿಂಗ್ ಅನ್ನು ಯೋಜಿಸುತ್ತಿದೆ ಎಂದು ಮ್ಯಾಕ್ ರೂಮೋರ್ಸ್ ವರದಿ ಮಾಡಿದ್ದು, ಈ ವೇಳೆ ಯಾವುದೇ ಹೊಸ ಫೋನ್ ಬಗ್ಗೆ ಘೋಷಣೆ ಮಾಡದೆ ಐಫೋನ್ 14 ಮತ್ತು 14 ಪ್ಲಸ್ ಅನ್ನು ಹಳದಿ ಬಣ್ಣದಲ್ಲಿ ಪರಿಚಯಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ನೀತಿಯು ಐಫೋನ್ 14 ಮಾರಾಟವನ್ನು ಹೆಚ್ಚಿಸುವ ಆ್ಯಪಲ್‌ನ ಕಾರ್ಯತಂತ್ರದ ಭಾಗವಾಗಿದೆ ಎಂದೂ ಸಹ ತಿಳಿದುಬಂದಿದೆ.
ಅಂತೆಯೆ ಆ್ಯಪಲ್‌ನ ಮುಂದಿನ ಐಫೋನ್ 15, ಐಫೋನ್ 15 ಪ್ರೋ ಡಾರ್ಕ್ ಕೆಂಪು ಬಣ್ಣದ ಆಯ್ಕೆಯಲ್ಲಿ ಬರಲು ಸಿದ್ಧವಾಗಿದೆ ಎಂದು ವರದಿಯಾಗಿದೆ. 2021 ರಲ್ಲಿ ಬಿಡುಗಡೆ ಆದ ಐಫೋನ್ 13 ಅನ್ನು ಕಳೆದ ವರ್ಷ ಕಂಪೆನಿಯು ಹೊಸ ರೀತಿಯ ಹಸಿರು ಬಣ್ಣಗಳಲ್ಲಿ ಪರಿಚಯಿಸಿತ್ತು.
ಐಫೋನ್ 14 ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಪಡೆದುಕೊಂಡಿದೆ. A15 ಬಯೋನಿಕ್ ಚಿಪ್ಸೆಟ್ ನಿಂದ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿದೆ. ಈ ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇ-ಸಿಮ್ ಆಯ್ಕೆಯನ್ನು ನೀಡಲಾಗಿದೆ.
ಇನ್ನು ಐಫೋನ್ 14 ಪ್ಲಸ್ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ತುರ್ತು ಸಂದರ್ಭಕ್ಕೆ Emergency SOS via satellite ಫೀಚರ್ಸ್ ನೀಡಲಾಗಿದೆ.
Published On - 1:51 pm, Thu, 9 March 23