ನವದೆಹಲಿ, ಜುಲೈ 19: ಭಾರತದಲ್ಲಿ ಆದಾಯ ಅಸಮಾನತೆ (Income inequality) ಬಹಳ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಬೇಕು ಎಂದು ಆಗಾಗ್ಗೆ ವರದಿ ನೀಡುವ ಆಕ್ಸ್ಫ್ಯಾಮ್, ಥಾಮಸ್ ಪಿಕೆಟ್ಟಿ (Thomas Piketty) ಮತ್ತಿತರ ಅಂತಾರಾಷ್ಟ್ರೀಯ ವ್ಯಕ್ತಿ ಮತ್ತು ಎನ್ಜಿಒಗಳ ವಿರುದ್ಧ ಆರ್ಥಿಕ ತಜ್ಞ ಹಾಗು ಮೋದಿ ಟೀಮ್ ಸದಸ್ಯ ಸಂಜೀವ್ ಸಾನ್ಯಾಲ್ ತಿರುಗೇಟು ನೀಡಿದ್ದಾರೆ. ಈ ಜಾಗತಿಕ ಎನ್ಜಿಒಗಳ ಅಜೆಂಡಾ ಬೇರೆಯೇ ಇದ್ದು, ಇವರು ಭಾರತದ ಶ್ರೀಮಂತರು ಮತ್ತು ಉದ್ಯಮಿಗಳ ಪತನ ಆಗಬಯಸುತ್ತಾರೆ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿರುವ ಅವರು ವ್ಯಾಖ್ಯಾನಿಸಿದ್ದಾರೆ.
‘ನಾನು ಶಾಲೆಯಲ್ಲಿರುವಾಗ ಟಾಟಾ ಮತ್ತು ಬಿರ್ಲಾ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೆವು. ಈಗ ಅಂಬಾನಿ, ಅದಾನಿ ಹೆಸರು ಕೇಳುತ್ತಿದೆ. ಇಂಥ ಉದ್ಯಮಿಗಳು ಹೂಡಿಕೆ ಮಾಡುವುದರಿಂದ ಭಾರತಕ್ಕೆ ಅವರ ಅಗತ್ಯತೆ ಇದೆ… ನಮಗೆ ಲಕ್ಷಗಟ್ಟಲೆ ಉದ್ಯೋಗಗಳು ಬೇಕು. ಪಿಕೆಟ್ಟಿಯಾಗಲಿ, ಅಕ್ಸ್ಫ್ಯಾಮ್ ಆಗಲಿ ಅಥವಾ ಇತರ ಎನ್ಜಿಒಗಳಾಗಲೀ ಈ ಉದ್ಯೋಗ ಕೊಡುವುದಿಲ್ಲ. ಕೈಗಾರಿಕೋದ್ಯಮಿಗಳಿಂದ ಮಾತ್ರ ಇದು ಸಾಧ್ಯ. ಆದ್ದರಿಂದ ಈ ಉದ್ಯಮಿಗಳನ್ನು ಗುರಿ ಮಾಡುವುದು ತಪ್ಪು,’ ಎಂದು ಸಂಜೀವ್ ಸಾನ್ಯಾಲ್ ಹೇಳಿದ್ದಾರೆ.
‘ಥಾಮಸ್ ಪಿಕೆಟ್ಟಿ, ಆಕ್ಸ್ಫ್ಯಾಮ್ ಅಥವಾ ಇಂಥ ಸಾವಿರಾರು ಎನ್ಜಿಒಗಳ ಬ್ಯಾಲನ್ಸ್ ಶೀಟ್ ತೆಗೆದು ನೋಡಿ. ಅವುಗಳಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದು ಗೊತ್ತಾಗುತ್ತದೆ. ಈ ಎನ್ಜಿಒಗಳಿಗೆ ಫೋರ್ಡ್ ಫೌಂಡೇಶನ್, ರಾಕ್ಫೆಲ್ಲರ್ ಫೌಂಡೇಶನ್, ಗೇಟ್ಸ್ ಫೌಂಡೇಶನ್, ಸೋರೋಸ್ ಓಪನ್ ಸೊಸೈಟಿಯಂತಹ ಸಂಘಟನೆಗಳಿಂದ ಫಂಡಿಂಗ್ ಸಿಗುತ್ತದೆ…
ಇದನ್ನೂ ಓದಿ: ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ
‘ಬಿಲ್ ಗೇಟ್ಸ್, ಸೋರೋಸ್, ಫೋರ್ಡ್, ರಾಕ್ಫೆಲ್ಲರ್ ಇವೆಲ್ಲಾ ಯಾರು? ಇವರು ಅಮೆರಿಕದ ಶ್ರೀಮಂತರು. ಈ ಶ್ರೀಮಂತರಿಂದ ಹಣ ಪಡೆಯುವ ಎನ್ಜಿಒಗಳು ಅವರನ್ನು ಹೊಗಳುತ್ತವೆ. ನಮ್ಮ ದೇಶಕ್ಕೆ ಬಂದು ನಮ್ಮ ಶ್ರೀಮಂತರನ್ನು ದೂಷಿಸುತ್ತವೆ’ ಎಂದು ಸಂಜೀವ್ ಸಾನ್ಯಾಲ್ ವಿಷಾದಿಸಿದ್ದಾರೆ.
ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ. 16ರಿಂದ 17ರಷ್ಟಿದೆ. ಜಾಗತಿಕವಾಗಿ ಬಿಲಿಯನೇರ್ಗಳ ಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶ. 16ರಿಂದ 17ರಷ್ಟಿರಬೇಕು. ಇದರ ಜೊತೆಗೆ ಸರ್ಕಾರ ಬಡವರಿಗೂ ಸಹಾಯ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ಅದಕ್ಕಾಗಿ ಹೂಡಿಕೆದಾರರನ್ನು, ಸೃಜನಶೀಲರನ್ನು ಹತ್ತಿಕ್ಕಬೇಕೆಂದಿಲ್ಲ ಎಂಬುದು ಸಂಜೀವ್ ಸಾನ್ಯಾಲ್ ಅನಿಸಿಕೆ.
‘ನಿಮಗೆ ಗೊತ್ತಿರಲಿ, ಈ ವಿದೇಶೀ ಎನ್ಜಿಒಗಳಿಗೆ ಭಾರತಕ್ಕೆ ಒಳಿತಾಗಬೇಕೆನ್ನುವ ಇಚ್ಛೆ ಇಲ್ಲ. ನಮ್ಮನ್ನು ನಿಯಂತ್ರಣದಲ್ಲಿ ಇಡುವುದಷ್ಟೇ ಅವರಿಗೆ ಬೇಕು. ಅವರಿಗೆ ಶ್ರೀಮಂತರನ್ನು ಕಂಡರೆ ಆಗದು ಎಂದ ಮೇಲೆ ಸೋರೋಸ್, ಫೋರ್ಡ್ ಮತ್ತಿತರರಿಂದ ಯಾಕೆ ಫಂಡಿಂಗ್ ಪಡೆಯುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ