ಪೇಟಿಎಂ ತ್ರೈಮಾಸಿಕ ಆದಾಯ 1,502 ಕೋಟಿ ರೂ; ಮುಂದಿನ ದಿನಗಳಲ್ಲಿ ಲಾಭದ ಹಳಿಗೆ ಮರಳುವ ತವಕದಲ್ಲಿ ಒನ್97 ಕಮ್ಯೂನಿಕೇಶನ್ಸ್
Paytm 25fy Q1 results: 2025ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆಗಿರುವ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಪೇಟಿಎಂನ ಆದಾಯ ಕುಸಿದಿದೆ. ನಷ್ಟ ಹೆಚ್ಚಿದೆ. ಅದರೆ, ಪೇಟಿಎಂನ ನೇರ ವೆಚ್ಚಗಳು ಶೇ. 20ಕ್ಕಿಂತಲೂ ಹೆಚ್ಚು ಕಡಿಮೆಗೊಂಡಿವೆ. ನಷ್ಟ ಇನ್ನಷ್ಟು ಹೆಚ್ಚಾಗಿದ್ದರೂ ಪೇಟಿಎಂನ ಆದಾಯ ಮೂಲಗಳಾಗಿರುವ ವರ್ತಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದಂತಿದೆ.
ನವದೆಹಲಿ, ಜುಲೈ 19: ಒನ್97 ಕಮ್ಯೂನಿಕೇಶನ್ಸ್ ಮಾಲಕತ್ವದ ಪೇಟಿಎಂ ಸಂಸ್ಥೆಯ 2024ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಆದಾಯ ವರದಿ ಬಿಡುಗಡೆ ಆಗಿದೆ. ಈ ಮೂರು ತಿಂಗಳಲ್ಲಿ ಅದರ ಆದಾಯ 1,502 ಕೋಟಿ ರೂ ಇದೆ. ಕಳೆದ ವರ್ಷ ಇದೇ ಕ್ವಾರ್ಟರ್ನಲ್ಲಿ ಅದು 2,342 ಕೋಟಿ ರೂ ಆದಾಯ ಪಡೆದಿತ್ತು. ಆ ಅವಧಿಗೆ ಹೋಲಿಸಿದರೆ ಪೇಟಿಎಂ ಆದಾಯ ಶೇ. 36ರಷ್ಟು ಕಡಿಮೆ ಆಗಿದೆ. ಹಾಗೆಯೇ, ಪೇಟಿಎಂನ ನಿವ್ವಳ ನಷ್ಟ 839 ಕೋಟಿ ರೂಗೆ ಏರಿದೆ. ಹಿಂದಿನ ಅವಧಿಯಲ್ಲಿ 357 ಕೋಟಿ ರೂ ನಷ್ಟ ಹೊಂದಿತ್ತು. ಈ ಬಾರಿ ನಷ್ಟ ಇನ್ನೂ ಅಗಾಧವಾಗಿದೆ. ಇದರ ನಡುವೆ ಪೇಟಿಎಂ ವರದಿಯಲ್ಲಿ ಸಕಾರಾತ್ಮಕ ಸಂಗತಿಗಳೂ ಕೆಲವಿವೆ.
ಪೇಟಿಎಂನ ನೇರ ವೆಚ್ಚದಲ್ಲಿ ಇಳಿಕೆ
ಪೇಟಿಎಂ ಸಂಸ್ಥೆಯ ನೇರ ವೆಚ್ಚಗಳು ವರ್ಷದ ಹಿಂದೆ 1,037 ಕೋಟಿ ರೂ ಇತ್ತು. ಈ ಕ್ವಾರ್ಟರ್ನಲ್ಲಿ ಅದು 746 ರೂಗೆ ಇಳಿದೆ. ಆದರೆ, ಪರೋಕ್ಷ ವೆಚ್ಚ 1,220 ಕೋಟಿ ರೂನಿಂದ 1,301 ಕೋಟಿ ರೂಗೆ ಏರಿದೆ.
ಇಲ್ಲಿ ಡೈರೆಕ್ಟ್ ಎಕ್ಸ್ಪೆನ್ಸ್ ಅಥವಾ ನೇರ ವೆಚ್ಚಗಳೆಂದರೆ ಬ್ಯಾಂಕುಗಳ ಪೇಮೆಂಟ್ ಪ್ರೋಸಸಿಂಗ್ ಶುಲ್ಕ, ಕ್ಯಾಷ್ಬ್ಯಾಕ್ ಇನ್ಸೆಂಟಿವ್ಗಳ ವೆಚ್ಚ, ವಿವಿಧ ಕಾಂಟೆಸ್ಟ್ಗಳು, ಫಾಸ್ಟ್ಯಾಗ್, ಲಾಜಿಸ್ಟಿಕ್ಸ್, ಸಿಮ್ ವೆಚ್ಚ ಇತ್ಯಾದಿಗಳು ಸೇರುತ್ತವೆ.
ಇನ್ಡೈರೆಕ್ಟ್ ಎಕ್ಸ್ಪೆನ್ಸ್ ಅಥವಾ ಪರೋಕ್ಷ ವೆಚ್ಚದಲ್ಲಿ ಮಾರ್ಕೆಟಿಂಗ್, ಉದ್ಯೋಗಿಗಳ ESOP ವೆಚ್ಚ, ಸಾಫ್ಟ್ವೇರ್, ಕ್ಲೌಡ್, ಡಾಟಾ ಸೆಂಟರ್ ಇತ್ಯಾದಿ ತಂತ್ರಜ್ಞಾನ ವೆಚ್ಚಗಳು ಸೇರುತ್ತವೆ.
ಪರ್ಸನಲ್ ಲೋನ್ 2,500 ಕೋಟಿ ರೂ
2025ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಪೇಟಿಎಂನಿಂದ ವಿತರಿಸಲಾದ ಪರ್ಸನಲ್ ಲೋನ್ಗಳ ಮೌಲ್ಯ 2,500 ಕೋಟಿ ರೂ ಇದೆ. ಒಂದು ಸಾಲದ ಸರಾಸರಿ ಮೊತ್ತ 1.35 ಲಕ್ಷ ರೂನಷ್ಟಿದೆ. ಹಿಂದಿನ ಅವಧಿಯಲ್ಲೂ ಹೆಚ್ಚೂಕಡಿಮೆ ಇಷ್ಟೇ ಟಿಕೆಟ್ ಸೈಜ್ ಇತ್ತು.
ಮರ್ಚಂಟ್ ಲೋನ್ 2,508 ಕೋಟಿ ರೂ
ಪೇಟಿಎಂಗೆ ಪ್ರಮುಖ ಆದಾಯ ಮೂಲವಾಗಿರುವುದು ವರ್ತಕರು. ಈ ವರ್ತಕರಿಗೆ ವಿತರಿಸಲಾಗಿರುವ ಸಾಲ ಈ ತ್ರೈಮಾಸಿಕ ಅವಧಿಯಲ್ಲಿ 2,508 ಕೋಟಿ ರೂ. ಉನ್ನತ ಗುಣಮಟ್ಟದ ವರ್ತಕರನ್ನು ಗುರುತಿಸಿ ಅವರಿಗೆ ಸಾಲ ನೀಡಲು ತಮ್ಮ ಪಾರ್ಟ್ನರ್ ಸಂಸ್ಥೆಗಳು ಗಮನ ಕೊಡುತ್ತಿವೆ.
ಇದನ್ನೂ ಓದಿ: FASTag: ವಿಂಡ್ಸ್ಕ್ರೀನಲ್ಲಿ ಫಾಸ್ಟ್ಯಾಗ್ ಹಾಕದಿದ್ರೆ ಬ್ಲ್ಯಾಕ್ಲಿಸ್ಟ್ ಸೇರ್ತೀರಾ ಹುಷಾರ್..! ಎನ್ಎಚ್ಎಐ ಬಿಗಿನಿಯಮ
ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಪೇಟಿಎಂನ ಮರ್ಚಂಟ್ ಪೇಮೆಂಟ್ ಆಪರೇಟಿಂಗ್ ಬಿಸಿನೆಸ್ 2024ರ ಜನವರಿಗೆ ಪೂರ್ವದಲ್ಲಿ ಇದ್ದ ಮಟ್ಟಕ್ಕೆ ಮರಳಿದೆ. ಪೇಮೆಂಟ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹಾಕಿದ್ದ ಬಳಿಕ ಬಹಳಷ್ಟು ವರ್ತಕರು ಪೇಟಿಎಂನಿಂದ ದೂರವಾಗಿದ್ದರು. ಈಗ ಅವರು ತೆಕ್ಕೆಗೆ ಮರಳಿದ್ದಾರೆ. ಅಂಗಡಿ ಮುಂಗಟ್ಟುಗಳಲ್ಲಿ ಈಗ ಪೇಟಿಎಂನ ಕ್ಯುಆರ್ ಕೋಡ್ಗಳು ಮತ್ತು ಸೌಂಡ್ಬಾಕ್ಸ್ಗಳು ಮರಳಿ ನಿಲ್ಲತೊಡಗಿವೆ. ಸೌಂಡ್ಬಾಕ್ಸ್ ಸೇವೆ ಪಡೆದಿರುವ ವರ್ತಕರ ಸಂಖ್ಯೆ 1.09 ಕೋಟಿ ರೂ ಇದೆ. ಇವೂ ಕೂಡ ಪೇಟಿಎಂಗೆ ಭವಿಷ್ಯದಲ್ಲಿ ಆದಾಯ ತಂದುಕೊಡಬಲ್ಲಂಥವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ