ನವದೆಹಲಿ, ಮಾರ್ಚ್ 12: ಎಲ್ಲಾ ಗುಳ್ಳೆಗಳು ಒಡೆಯಲೇಬೇಕು. ಕೃತಕವಾಗಿ ಉಬ್ಬಿದ ಎಲ್ಲವೂ ಕುಸಿಯಲೇಬೇಕು ಎಂದು ಪದೇ ಪದೇ ಹೇಳುತ್ತಲೇ ಬಂದಿರುವ ಖ್ಯಾತ ಹಣಕಾಸು ಶಿಕ್ಷಕ ಹಾಗೂ ಲೇಖಕ ರಾಬರ್ಟ್ ಕಿಯೋಸಾಕಿ (Robert Kiyosaki) ಅವರು ಈ ಬಾರಿಯ ಷೇರುಮಾರುಕಟ್ಟೆ ಕುಸಿತದ ಹಾದಿ ಇಷ್ಟಕ್ಕೇ ನಿಲ್ಲುವುದಿಲ್ಲ ಎಂದು ಭವಿಷ್ಯ ಪುನರುಚ್ಚರಿಸಿದ್ದಾರೆ. ಇತಿಹಾಸದಲ್ಲೇ ಅತಿದೊಡ್ಡ ಷೇರುಪೇಟೆ ಕುಸಿತ ಸಂಭವಿಸುತ್ತದೆ ಎಂದು ಕೆಲವಾರು ವರ್ಷಗಳಿಂದ ಹೇಳುತ್ತಲೇ ಬಂದಿರುವ ‘ರಿಚ್ ಡ್ಯಾಡ್, ಪೂರ್ ಡ್ಯಾಡ್’ (Rich Dad Poor Dad) ಪುಸ್ತಕದ ಕರ್ತೃವಾದ ಅವರು, ಈಗಿನ ಮಾರುಕಟ್ಟೆ ಕುಸಿತದತ್ತ ಬೆರಳು ತೋರಿದ್ದಾರೆ.
1929ರಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಡುವೆ ಅಮೆರಿಕದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಭಾರೀ ಕುಸಿತವಾಗಿತ್ತು. ಬರೋಬ್ಬರಿ ಅರ್ಧದಷ್ಟು ಷೇರುಮೌಲ್ಯ ನಶಿಸಿಹೋಗಿತ್ತು. ಕೆಲವೇ ವಾರದ ಅಂತರದಲ್ಲಿ ಹೂಡಿಕೆದಾರರು ಆಗಿನ ಕಾಲದಲ್ಲೇ 30 ಬಿಲಿಯನ್ ಡಾಲರ್ ನಷ್ಟ ಕಂಡಿದ್ದರು.
ಇದನ್ನೂ ಓದಿ: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?
96 ವರ್ಷಗಳ ಹಿಂದೆ ನಡೆದ ಈ ಷೇರು ಮಾರುಕಟ್ಟೆ ಕುಸಿತವು ಜಾಗತಿಕ ಆರ್ಥಿಕ ಹಿನ್ನಡೆಗೆ ಎಡೆ ಮಾಡಿಕೊಟ್ಟಿತು. 1929ರಿಂದ 1939ರವರೆಗೂ ಗ್ರೇಟ್ ಡಿಪ್ರೆಶನ್ ನೆಲಸಿತ್ತು. ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ನಂಬಿಕೆಯೇ ಹೋಗುವಂತೆ ಮಾಡಿತ್ತು.
ಅಂದಹಾಗೆ, 1929ರ ಮಹಾಕುಸಿತ ಮತ್ತು ಈಗಿನ 2025ರ ಷೇರುಪೇಟೆ ಕುಸಿತಕ್ಕೂ ಸಾಮ್ಯತೆ ಇದೆ. 1929ರಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ಮಂದವಾಗಿತ್ತು. ಕೃಷಿ ಕ್ಷೇತ್ರ ಹಿನ್ನಡೆ ಕಾಣುತ್ತಿತ್ತು. ರೈತರು ಸಾಲದ ಶೂಲಕ್ಕೆ ಸಿಲುಕುವಂತಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಬೆಳವಣಿಗೆ ಕಾಣದ ಸೆಕ್ಟರ್ನ ಷೇರುಗಳನ್ನು ಜನರು ಹೆಚ್ಚೆಚ್ಚಾಗಿ ಕೊಳ್ಳುತ್ತಿದ್ದರು. ಇದರಿಂದ ಇವುಗಳ ಮೌಲ್ಯವು ಅರ್ಹತೆಗಿಂತ ತೀರಾ ಹೆಚ್ಚಾಗಿ ಕೃತಕವಾಗಿ ಉಬ್ಬಿತ್ತು. ಅಂತಿಮವಾಗಿ ಷೇರುದಾರರಿಗೆ ವಾಸ್ತವ ಪರಿಸ್ಥಿತಿ ಅರಿವಾಗತೊಡಗಿ, ಕೊನೆಗೆ ಮಾರುಕಟ್ಟೆ ಕುಸಿತ ಕ್ಷಿಪ್ರವಾಗಿ ನಡೆದಿತ್ತು.
ಇದನ್ನೂ ಓದಿ: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್ಗಳು
ಈಗ 2025ರಲ್ಲಿ ಷೇರು ಮಾರುಕಟ್ಟೆ ಉಚ್ಚ ಸ್ಥಿತಿ ತಲುಪಿದೆ. ಭಾರತ, ಅಮೆರಿಕ ಸೇರಿದಂತೆ ಹೆಚ್ಚಿನ ದೇಶಗಳ ಮಾರುಕಟ್ಟೆ ಅತಿರೇಕವಾಗಿ ಉಬ್ಬಿದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ಕಿಯೋಸಾಕಿ ಮೊದಲಾದ ಕೆಲ ತಜ್ಞರು, ಈ ರೀತಿ ಕೃತಕವಾಗಿ ಉಬ್ಬಿದ ಮಾರುಕಟ್ಟೆಗಳು ಕುಸಿಯಲೇಬೇಕು ಎಂದು ವಾದಿಸುತ್ತಲೇ ಬಂದಿದ್ದಾರೆ. ಈ ಬಾರಿ ಭಾರತದಲ್ಲಿ ಸತತ ಐದು ತಿಂಗಳು ಮಾರುಕಟ್ಟೆ ಕುಸಿದಿದೆ. ಅಮೆರಿಕದ ಮಾರುಕಟ್ಟೆಯೂ ಕುಸಿಯುವ ಹಾದಿಯಲ್ಲಿದೆ. ಸತತ ಎರಡು ದಿನ ಅಲ್ಲಿನ ಮಾರುಕಟ್ಟೆ ಕುಸಿತ ಕಂಡಿದೆ. ಭಾರತದ ಇಡೀ ಷೇರು ಮಾರುಕಟ್ಟೆಯಲ್ಲಿರುವ ಹೂಡಿಕೆಗೆ ಸಮನಾದಷ್ಟು ಸಂಪತ್ತನ್ನು ಅಮೆರಿಕದ ಹೂಡಿಕೆದಾರರು ಒಂದೇ ದಿನದಲ್ಲಿ ಕಳೆದುಕೊಂಡರಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ