
ಮೊಬೈಲ್‌ಗೆ (Mobile) ಪದೇಪದೇ ಬರುವ ಅನಗತ್ಯ ಕರೆಗಳು, ಜಾಹೀರಾತು ಕರೆಗಳು ಮತ್ತು ಸ್ವಯಂಚಾಲಿತ ಕರೆಗಳಿಂದ ಬೇಸತ್ತಿರುವವರಿಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ, ನಿರ್ದಿಷ್ಟ ರೀತಿಯ ಸ್ವಯಂಚಾಲಿತ ಕರೆಗಳಿಗೆ ಪ್ರತಿ ನಿಮಿಷಕ್ಕೆ ಗರಿಷ್ಠ 5 ಪೈಸೆಯವರೆಗೆ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ನಿಯಮದ ಉದ್ದೇಶ ಅನಗತ್ಯ ವಾಣಿಜ್ಯ ಕರೆಗಳಿಗೆ ಕಡಿವಾಣ ಹಾಕುವುದಾಗಿದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಮೊಬೈಲ್‌ನಲ್ಲಿ ಕರೆ ಮಾಡುತ್ತಾರೆ. ಆದರೆ ಕೆಲವು ಕರೆಗಳನ್ನು ವ್ಯಕ್ತಿಯೊಬ್ಬರು ನೇರವಾಗಿ ಸಂಖ್ಯೆಯನ್ನು ಒತ್ತಿ ಮಾಡುವುದಿಲ್ಲ. ಬದಲಿಗೆ ಅಪ್ಲಿಕೇಶನ್, ತಂತ್ರಾಂಶ ಅಥವಾ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಇಂತಹ ಕರೆಗಳನ್ನು ಮಾಡಲಾಗುತ್ತದೆ. ಇವುಗಳನ್ನು ಅಪ್ಲಿಕೇಶನ್-ಟು-ಪರ್ಸನ್ (A2P) ಕರೆಗಳು ಎಂದು ಕರೆಯಲಾಗುತ್ತದೆ.
ಒಂದೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಕರೆ ಮಾಡುವ ಸ್ವಯಂಚಾಲಿತ ವ್ಯವಸ್ಥೆಗಳು, ರೋಬೋಕಾಲ್‌ಗಳು, ಮೊದಲೇ ದಾಖಲಿಸಿರುವ ಧ್ವನಿಯ ಕರೆಗಳು ಹಾಗೂ ಕೃತಕ ಧ್ವನಿ ಬಳಸಿ ಮಾಡುವ ಕರೆಗಳು ಇದರಲ್ಲಿ ಸೇರಿವೆ.
TRAI ನಿಗದಿಪಡಿಸಿರುವ 5 ಪೈಸೆ ಪ್ರತಿ ನಿಮಿಷದ ಶುಲ್ಕವು ಸಾಮಾನ್ಯ ಮೊಬೈಲ್ ಬಳಕೆದಾರರು ಕರೆ ಮಾಡಿದಾಗ ಅಥವಾ ಕರೆ ಸ್ವೀಕರಿಸಿದಾಗ ಪಾವತಿಸಬೇಕಾದ ಶುಲ್ಕವಲ್ಲ. ಇದು A2P ಕರೆಗಳನ್ನು ಮಾಡುವ ಸಂಸ್ಥೆಗಳಿಗೆ ಸಂಬಂಧಿಸಿದ ದೂರಸಂಪರ್ಕ ಜಾಲಗಳ ನಡುವಿನ ಶುಲ್ಕ ವ್ಯವಸ್ಥೆಯಾಗಿದೆ.
ಕರೆ ಆರಂಭವಾಗುವ ಜಾಲದ ಸೇವಾದಾರರು, ಕರೆ ಕೊನೆಗೊಳ್ಳುವ ಜಾಲದ ಸೇವಾದಾರರಿಗೆ ಈ ಶುಲ್ಕವನ್ನು ಪಾವತಿಸುವ ವ್ಯವಸ್ಥೆ ಇರಲಿದೆ. ಆದರೆ ಪ್ರತಿ A2P ಕರೆಗೆ ಕಡ್ಡಾಯವಾಗಿ 5 ಪೈಸೆಯೇ ವಿಧಿಸಲಾಗುತ್ತದೆ ಎಂದಲ್ಲ. ದೂರಸಂಪರ್ಕ ಕಂಪನಿಗಳ ನಡುವಿನ ವಾಣಿಜ್ಯ ಒಪ್ಪಂದದ ಆಧಾರದ ಮೇಲೆ ನಿಜವಾದ ಮೊತ್ತ ನಿರ್ಧಾರವಾಗಲಿದೆ. 5 ಪೈಸೆಯನ್ನು ಗರಿಷ್ಠ ಮಿತಿಯಾಗಿ ನಿಗದಿಪಡಿಸಲಾಗಿದೆ.
Tech Tips: ವಿದ್ಯುತ್ ಇಲ್ಲದಿದ್ದರೂ ಫೋನ್ ಚಾರ್ಜ್ ಮಾಡಬಹುದು; ಈ 4 ವಿಧಾನ ಗೊತ್ತಿರಲಿ
A2P ಕರೆಗಳನ್ನು ಬಳಸುವ ಸಂಸ್ಥೆಗಳು ಈ ರೀತಿಯ ಕರೆ ವ್ಯವಸ್ಥೆಯನ್ನು ತಮ್ಮ ದೂರಸಂಪರ್ಕ ಸೇವಾದಾರರಿಗೆ ಮುಂಚಿತವಾಗಿ ತಿಳಿಸಬೇಕು. ಅಲ್ಲದೆ, ಇಂತಹ ಕರೆಗಳಿಗೆ ಬಳಸುವ ಸಂಖ್ಯೆಗಳ ವಿವರಗಳನ್ನೂ ನೀಡಬೇಕು. ಈ ಘೋಷಣೆ ಮಾಡದೆ A2P ಕರೆಗಳನ್ನು ಮಾಡಿದರೆ, ಅವುಗಳನ್ನು ಅನಗತ್ಯ ವಾಣಿಜ್ಯ ಸಂವಹನ (UCC) ಎಂದು ಪರಿಗಣಿಸಲಾಗುತ್ತದೆ. ಇದರಿಂದ ಇಂತಹ ಕರೆಗಳನ್ನು ಮಾಡುವ ಸಂಸ್ಥೆಗಳ ಮೇಲೆ ನಿಯಂತ್ರಣ ಹೆಚ್ಚಿಸಲು TRAIಗೆ ಅವಕಾಶ ಸಿಗಲಿದೆ.
ಹೊಸ ನಿಯಮಗಳಲ್ಲಿ ಕೇವಲ ಶುಲ್ಕ ವಿಧಿಸುವ ವ್ಯವಸ್ಥೆಯಷ್ಟೇ ಅಲ್ಲ, ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಸ್ಪ್ಯಾಮ್ ಕರೆಗಳನ್ನು ಮಾಡುವ ಸಾಧ್ಯತೆ ಹೆಚ್ಚಿರುವ ಸಂಖ್ಯೆಗಳ ಮಾಹಿತಿಯನ್ನು ದೂರಸಂಪರ್ಕ ಕಂಪನಿಗಳು ಪರಸ್ಪರ ಹಂಚಿಕೊಳ್ಳಲಿವೆ. ಒಂದೇ ಸಂಸ್ಥೆಗೆ ಸಂಬಂಧಿಸಿದ ಐದು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಗಳು 10 ದಿನಗಳ ಅವಧಿಯಲ್ಲಿ ಗುರುತಿಸಲ್ಪಟ್ಟರೆ, ಹೆಚ್ಚುವರಿ ಪರಿಶೀಲನೆ, ಗ್ರಾಹಕರ ಗುರುತು ಪರಿಶೀಲನೆ ಸೇರಿದಂತೆ ಹಂತ ಹಂತವಾಗಿ ಕ್ರಮ ಕೈಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ