Twitter Buyout: ಎಲಾನ್ ಮಸ್ಕ್ ವಿರುದ್ಧದ ವಿಚಾರಣೆ ಸ್ಥಗಿತಗೊಳಿಸಿದ ಅಮೆರಿಕ ಕೋರ್ಟ್; ಅ 28ರ ಒಳಗೆ ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ವಿಚಾರಣೆಯನ್ನು ಅ 28ರ ಸಂಜೆ 5 ಗಂಟೆಯವರೆಗೂ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
ವಿಲ್ಮಿಂಗ್ಟನ್: ಎಲಾನ್ಮಸ್ಕ್ (Elon Musk) ಮತ್ತು ಟ್ವಿಟರ್ (Twitter) ನಡುವಣ ಪ್ರಕರಣದ ವಿಚಾರಣೆಯನ್ನು ಅಮೆರಿಕದ ಕೋರ್ಟ್ ಸ್ಥಗಿತಗೊಳಿಸಿದೆ. ಟ್ವಿಟರ್ ಖರೀದಿಗಾಗಿ ಮಸ್ಕ್ ಅವರಿಗೆ 44 ಶತಕೋಟಿ ಡಾಲರ್ ಒಟ್ಟುಗೂಡಿಸಲು ಸಮಯಾವಕಾಶ ನೀಡಲು ಕೋರ್ಟ್ ನಿರ್ಧರಿಸಿದ್ದು, ಇದೇ ತಿಂಗಳ 28ರ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ವಿಚಾರಣೆಯನ್ನು ಅ 28ರ ಸಂಜೆ 5 ಗಂಟೆಯವರೆಗೂ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
ಈ ಕಾಲಮಿತಿಯ ಒಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಇಬ್ಬರೂ ಕಕ್ಷಿದಾರರು ನನ್ನನ್ನು ಸಂಪರ್ಕಿಸಬೇಕು. ನವೆಂಬರ್ ತಿಂಗಳಲ್ಲಿ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಾಧೀಶರಾದ ಕ್ಯಾಥಲೀನ್ ಮೆಕ್ಕೊರ್ಮಿಕ್ ಹೇಳಿದರು. ಈ ಹಿಂದೆ ನಿಗದಿಯಾದಂತೆ ಅ 17ರಂದು ಎಲಾನ್ಸ್ಕ್ ವಿರುದ್ಧದ ವಿಚಾರಣೆ ಆರಂಭವಾಗಬೇಕಿತ್ತು. ಆದರೆ ಮಸ್ಕ್ ಅವರು ಟ್ವಿಟರ್ ಖರೀದಿಯ ಬಗ್ಗೆ ತಮ್ಮ ನಿಲುವು ಪುನರುಚ್ಚರಿಸಿದ ನಂತರ ವಿಚಾರಣೆ ಮುಂದೂಡಿಕೆಯಾಗಿದೆ.
ಟ್ವಿಟರ್ ಖರೀದಿಗೆ ಆಸಕ್ತಿ ತೋರಿದ್ದ ಎಲಾನ್ ಮಸ್ಕ್ ನಂತರ ನಕಲಿ ಖಾತೆಗಳ ವಿಚಾರ ಮುಂದಿಟ್ಟು ವಹಿವಾಟಿನಿಂದ ಹಿಂದೆ ಸರಿದಿದ್ದರು. ಟ್ವಿಟರ್ ಕಂಪನಿಯ ಷೇರು ಮೌಲ್ಯಗಳ ಮೇಲೆ ಈ ವಿದ್ಯಮಾನ ಪರಿಣಾಮ ಬೀರಿತ್ತು. ಗುರುವಾರ ಮಸ್ಕ್ ಖರೀದಿ ಒಪ್ಪಂದಕ್ಕೆ ಬದ್ಧತೆ ಘೋಷಿಸಿದ ನಂತರ ಷೇರುಮೌಲ್ಯ ಏಕಾಏಕಿ ನಾಟಕೀಯವಾಗಿ ಬೆಳೆಯಿತು.
ಟ್ವಿಟರ್ ಖರೀದಿಗಾಗಿ ಹಣ ಒಗ್ಗೂಡಿಸುತ್ತಿರುವ ಎಲಾನ್ ಮಸ್ಕ್ ತಮ್ಮ ಮಾಲೀಕತ್ವದ ಟೆಸ್ಲಾ ಕಂಪನಿಯ ಷೇರುಗಳನ್ನು ಮಾರುವ ಮೂಲಕ 15.4 ಶತಕೋಟಿ ಡಾಲರ್ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಮಾರಾಟ ಪ್ರಕ್ರಿಯೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.
ವಿವಾದಕ್ಕೆ ತೆರೆ
ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ (Elon Musk) ಮತ್ತೊಮ್ಮೆ ಟ್ವಿಟರ್ (Twitter) ಖರೀದಿಗೆ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಮೊದಲು ಒಪ್ಪಿಕೊಂಡಿದ್ದ ದರಕ್ಕೇ ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ಮತ್ತು ಮಸ್ಕ್ ನಡುವೆ ಇತ್ತೀಚೆಗಷ್ಟೇ ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆದಿತ್ತು. ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲೆಂದು ಮಸ್ಕ್ ನ್ಯಾಯಾಲಯದಲ್ಲಿ ಕಾನೂನು ಸಮರವನ್ನೂ ಆರಂಭಿಸಿದ್ದರು. ಇದೀಗ ನಡೆದಿರುವ ಮತ್ತೊಂದು ಬೆಳವಣಿಗೆಯಲ್ಲಿ ಟ್ವಿಟರ್ಗೆ ನೀಡಿದ್ದ ಖರೀದಿ ಪ್ರಸ್ತಾವಕ್ಕೆ ಮಾನ್ಯತೆ ನೀಡುವುದಾಗಿ ಮಸ್ಕ್ ಅಮೆರಿಕದ ಸೆಕ್ಯುರಿಟಿ ಅಂಡ್ ಎಕ್ಸ್ಚೇಂಜ್ ಕಮಿಷನ್ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಟ್ವಿಟರ್ನ ಪ್ರತಿ ಷೇರಿಗೆ 54.20 ಡಾಲರ್ನಂತೆ ಪಾವತಿಸಲು ಒಪ್ಪಿರುವುದಾಗಿ ಮಸ್ಕ್ ಅವರಿಂದ ಪತ್ರ ಬಂದಿದೆ ಎಂದು ಟ್ವಿಟರ್ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದೆ. ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು, ಎಲ್ಲ ಕಾನೂನು ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಮಸ್ಕ್ ಷರತ್ತು ಹಾಕಿದ್ದಾರೆ. ಟ್ವಿಟರ್ ದಾಖಲಿಸಿದ್ದ ಪ್ರಕರಣದ ವಿಚಾರಣೆಯು ಇದೇ ವಾರ ಆರಂಭವಾಗಬೇಕಿತ್ತು.
ನ್ಯಾಯಾಲಯದಲ್ಲಿ ತಮಗೆ ಗೆಲುವುದು ಸಿಗುವುದಿಲ್ಲ ಎಂದು ಖಾತ್ರಿಯಾದ ನಂತರವೇ ಮಸ್ಕ್ ಈ ನಿರ್ಧಾರಕ್ಕೆ ಬಂದಿರಬಹುದು. ಖರೀದಿಸುವ ನಿರ್ಧಾರ ಮಾಡಿ ಮತ್ತೆ ಹಿಂಜರಿಯುವುದು ಕೆಲ ಸಾಮಾನ್ಯ ಮನುಷ್ಯರಲ್ಲಿ ಕಂಡುಬರುವ ಪ್ರವೃತ್ತಿ. ಆದರೆ ಹೆಜ್ಜೆ ಮುಂದಿಡುವ ಮೊದಲು ಮಸ್ಕ್ ಪೂರ್ವಾಪರ ವಿವೇಚಿಸಿರಲಿಲ್ಲವೇ ಎಂದು ರಿಚ್ಮಂಡ್ ಲಾ ಯೂನಿವರ್ಸಿಟಿಯ ಪ್ರಾಧ್ಯಾಪಕ ಕಾರ್ಲ್ ಟೊಬಿಯಾಸ್ ಹೇಳಿದರು.
ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ, ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಉದ್ಯಮಗಳ ಸಮೂಹ ಹೊಂದಿರುವ ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವುದಾಗಿ ಕಳೆದ ಏಪ್ರಿಲ್ನಲ್ಲಿ ಘೋಷಿಸಿದ್ದರು. ಆದರೆ ಜುಲೈ ತಿಂಗಳಲ್ಲಿ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ‘ನಕಲಿ ಖಾತೆಗಳ ಮೂಲಕ ಟ್ವಿಟರ್ ಮೋಸ ಮಾಡುತ್ತಿದೆ’ ಎನ್ನುವುದು ಮಸ್ಕ್ ಅವರ ಆರೋಪವಾಗಿತ್ತು. ಈ ಅರೋಪವನ್ನು ಅಲ್ಲಗಳೆದಿದ್ದ ಟ್ವಿಟರ್, ನಿರೂಪಿಸುವಂತೆ ಸವಾಲು ಹಾಕಿತ್ತು.
Published On - 9:44 am, Fri, 7 October 22