ಇಬ್ಬರು ಚೀನೀ ಹಳ್ಳಿಗರ ಯಶೋಗಾಥೆ; ಹಣತೆ ದೀಪದಲ್ಲಿ ಓದಿ ಜಗತ್ತಿಗೆ ಇವಿ ಕ್ರಾಂತಿ ಸೃಷ್ಟಿಸಿದವ ಒಬ್ಬ
Two Chinese villagers Chen Liquan, Ben De receive highest science awards: ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚೆನ್ ಲಿಕುವಾನ್ ಮತ್ತು ಬೆನ್ ಡೆ ಅವರಿಗೆ ಚೀನಾ ಸರ್ಕಾರ ಪ್ರಶಸ್ತಿ ನೀಡಿದೆ. ಚೆನ್ ಲಿಕುವಾನ್ ಮತ್ತು ಬೆನ್ ಡೆ ಅವರಿಬ್ಬರೂ ಗ್ರಾಮೀಣ ಭಾಗದಿಂದ ಬಂದರಾಗಿದ್ದು, ದೊಡ್ಡ ತಂತ್ರಜ್ಞಾನ ಕ್ರಾಂತಿಯನ್ನೇ ಮಾಡಿದ್ದಾರೆ. ಚೆನ್ ಲಿಕುವಾನ್ ಅವರು ಲಿಥಿಯಮ್ ಬ್ಯಾಟರಿ ತಂತ್ರಜ್ಞಾನದ ಪಿತಾಮಹರಾಗಿದ್ದಾರೆ.

ಮುಖ್ಯಾಂಶಗಳು
- ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚೆನ್ ಲಿಕುವಾನ್ ಮತ್ತು ಬೆನ್ ಡೆ ಅವರಿಗೆ ಚೀನಾ ಸರ್ಕಾರ ಪ್ರಶಸ್ತಿ ನೀಡಿದೆ.
- ಚೆನ್ ಲಿಕುವಾನ್ ಮತ್ತು ಬೆನ್ ಡೆ ಅವರಿಬ್ಬರೂ ಗ್ರಾಮೀಣ ಭಾಗದಿಂದ ಬಂದರಾಗಿದ್ದು, ಟೆಕ್ ಕ್ರಾಂತಿಯನ್ನೇ ಮಾಡಿದ್ದಾರೆ.
- ಚೆನ್ ಲಿಕುವಾನ್ ಅವರು ಲಿಥಿಯಮ್ ಬ್ಯಾಟರಿ ತಂತ್ರಜ್ಞಾನದ ಪಿತಾಮಹರಾಗಿದ್ದಾರೆ.
ಬೀಜಿಂಗ್, ಜುಲೈ 10: ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರವಾದ ‘ಸ್ಟೇಟ್ ಪ್ರಿ-ಎಮಿನೆಂಟ್ ಸೈನ್ಸ್ ಅಂಡ್ ಟೆಕ್ನಾಲಜಿ ಅವಾರ್ಡ್’ ಅನ್ನು ಇಬ್ಬರು ಹಿರಿಯ ವಿಜ್ಞಾನಿಗಳಿಗೆ ಪ್ರದಾನ ಮಾಡಿದ್ದಾರೆ. ತಮ್ಮ ಬಾಲ್ಯದಲ್ಲಿ ವಿದ್ಯುತ್ ಸೌಕರ್ಯವೂ ಇಲ್ಲದೆ ತೈಲ ದೀಪದ (ಲ್ಯಾಂಪ್) ಬೆಳಕಿನಲ್ಲಿ ಓದಿದ ಒಬ್ಬ ಹಳ್ಳಿಯ ಹುಡುಗ ಹಾಗೂ ಕೇವಲ ಎರಡು ತಿಂಗಳಲ್ಲಿ ಸ್ವಯಂಪ್ರೇರಿತರಾಗಿ ಇಂಗ್ಲಿಷ್ ಕಲಿತ ಮತ್ತೊಬ್ಬ ಸಾಮಾನ್ಯ ಕೃಷಿಕನ ಮಗ ಇಂದು ಚೀನಾದ ತಂತ್ರಜ್ಞಾನ ಮತ್ತು ರಕ್ಷಣಾ ವಲಯದ ದಿಕ್ಕನ್ನೇ ಬದಲಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆನ್ ಲಿಕುವಾನ್ ಮತ್ತು ಬೆನ್ ಡೆ ಆ ಇಬ್ಬರು ಸಾಮಾನ್ಯ ಹಿನ್ನೆಲೆಯ ಸಾಧಕರು.
ಚೆನ್ ಲಿಕುವಾನ್: ವಿಶ್ವದ ಮೂರನೇ ಒಂದು ಭಾಗದಷ್ಟು ಇವಿ ಬ್ಯಾಟರಿಗಳ ಜನಕ
1940ರಲ್ಲಿ ಸಿಚುವಾನ್ ಪ್ರಾಂತ್ಯದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಚೆನ್ ಲಿಕುವಾನ್ (Chen Liquan) ಅವರ ಮನೆಯಲ್ಲಿ ಕೇವಲ ಎಣ್ಣೆ ದೀಪಗಳಷ್ಟೇ ಇದ್ದವು. ನಮ್ಮ ಸರ್ ಎಂ ವಿಶ್ವೇಶರಾಯ ಅವರು ಬಾಲ್ಯದಲ್ಲಿ ಬೀದಿ ದೀಪದ ಬೆಳಕಿನಡಿ ಓದುತ್ತಿದ್ದ ಕಥೆ ನೆನಪಾಗಬಹುದು. ಚೆನ್ ಲಿಕುವಾನ್ ತಮ್ಮ ಹೈಸ್ಕೂಲ್ ಪ್ರವೇಶ ಪರೀಕ್ಷೆ ಬರೆಯಲು ಹೋದ ದಿನವೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಲ್ಬ್ ಅನ್ನು ನೋಡಿದ್ದು! ಆ ಒಂದು ಕ್ಷಣ ಅವರ ಜೀವನದ ಗುರಿಯನ್ನು ಬದಲಿಸಿತು. ಇತರ ಮಕ್ಕಳಿಗೆ ಬೆಳಕಿನ ಸೌಕರ್ಯ ಅಪರೂಪವಾಗಬಾರದು ಎಂದು ನಿರ್ಧರಿಸಿ ಭೌತಶಾಸ್ತ್ರವನ್ನು ಅಭ್ಯಾಸ ಮಾಡಿದರು.
ಜರ್ಮನಿಯ ಆ ಒಂದು ಮಾತು: 1976ರಲ್ಲಿ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಗೆ ಭೇಟಿ ನೀಡಿದ್ದಾಗ, ಅಲ್ಲಿನ ವಿಜ್ಞಾನಿಯೊಬ್ಬರು ಜಂಟಿಯಾಗಿ ಮಾತನಾಡುತ್ತಾ, “ಲಿಥಿಯಂ ನೈಟ್ರೈಡ್ ಎಂಬ ವಸ್ತುವಿನಿಂದ ಭವಿಷ್ಯದಲ್ಲಿ ಬ್ಯಾಟರಿ ಹಾಗೂ ಕಾರುಗಳನ್ನು ತಯಾರಿಸಬಹುದು” ಎಂದು ಹೇಳಿದ್ದರು.
ಆ ಕಾಲದಲ್ಲಿ ಚೀನಾ ತೈಲ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಜರ್ಮನ್ ವಿಜ್ಞಾನಿಯ ಮಾತಿನಿಂದ ಪ್ರೇರಿತರಾದ ಚೆನ್, ತಮ್ಮ ಹಳೆಯ ಸಂಶೋಧನೆಗಳನ್ನು ಕೈಬಿಟ್ಟು ಸಂಪೂರ್ಣವಾಗಿ ಲಿಥಿಯಂ ಬ್ಯಾಟರಿ ಸಂಶೋಧನೆಗೆ ಧುಮುಕಿದರು.
ಇವರ ಪರಿಶ್ರಮದ ಫಲವಾಗಿ ಚೀನಾದ ಮೊದಲ ಲಿಥಿಯಂ ಬ್ಯಾಟರಿ ಸಿದ್ಧವಾಯಿತು. ಇಂದು ವಿಶ್ವದ ಅತಿ ದೊಡ್ಡ ಇವಿ ಬ್ಯಾಟರಿ ಸಂಸ್ಥೆಯಾದ CATL ನಂತಹ ದೈತ್ಯ ಕಂಪನಿಗಳ ಉಗಮಕ್ಕೆ ಇವರೇ ಅಡಿಪಾಯ ಹಾಕಿಕೊಟ್ಟರು. ಇಂದು ಜಗತ್ತಿನ ಒಟ್ಟು ಎಲೆಕ್ಟ್ರಿಕ್ ವಾಹನಗಳ (EVs) ಮೂರನೇ ಒಂದು ಭಾಗದಷ್ಟು ಇವಿಗಳಿಗೆ ಇವರ ತಂತ್ರಜ್ಞಾನವೇ ಶಕ್ತಿ ನೀಡುತ್ತಿದೆ.
ಇದನ್ನೂ ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್
ಬೆನ್ ಡೆ: ಫೈಟರ್ ಜೆಟ್‌ಗಳಿಗೆ ‘ಹದ್ದು ದೃಷ್ಟಿ’ ನೀಡಿದ ರೇಡಾರ್ ತಜ್ಞ
ಚೀನಾದ ವಾಯುಪಡೆಗೆ ಶಕ್ತಿ ತುಂಬಿದ 88 ವರ್ಷದ ವಿಜ್ಞಾನಿ ಬೆನ್ ಡೆ (Ben De) ಅವರ ಕಥೆಯೂ ಅಷ್ಟೇ ರೋಮಾಂಚನಕಾರಿಯಾಗಿದೆ. 1960 ಮತ್ತು 70ರ ದಶಕದ ಆತಂಕಕಾರಿ ಅಂತಾರಾಷ್ಟ್ರೀಯ ಪರಿಸ್ಥಿತಿಯಲ್ಲಿ ಚೀನಾಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ‘ಫೇಸ್ಡ್-ಅರೇ ರೇಡಾರ್’ (Phased-array radar) ತಂತ್ರಜ್ಞಾನದ ತೀವ್ರ ಅಗತ್ಯವಿತ್ತು.
2 ತಿಂಗಳಲ್ಲಿ ಇಂಗ್ಲಿಷ್ ಕಲಿಕೆ: ಆಗ ಚೀನಾದಲ್ಲಿ ಈ ತಂತ್ರಜ್ಞಾನದ ಬಗ್ಗೆ ಯಾವುದೇ ಮಾಹಿತಿ ಅಥವಾ ಅನುಭವ ಇರಲಿಲ್ಲ. ಅಂತರರಾಷ್ಟ್ರೀಯ ಸಂಶೋಧನಾ ವರದಿಗಳನ್ನು ಓದಲು ಬೆನ್ ಡೆ ಅವರಿಗೆ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಇತ್ತು. ಕೇವಲ ಎರಡು ತಿಂಗಳ ಕಠಿಣ ಸ್ವಯಂ-ಅಧ್ಯಯನದ ಮೂಲಕ ಅವರು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿ, ಜಾಗತಿಕ ರೇಡಾರ್ ವಿಜ್ಞಾನದ ದಾಖಲೆಗಳನ್ನು ಓದಿ ಅರ್ಥೈಸಿಕೊಂಡರು.
ಫೈಟರ್ ಜೆಟ್‌ಗಳಿಗೆ ಎಕ್ಸ್-ರೇ ದೃಷ್ಟಿ: 1979ರಲ್ಲಿ ಚೀನಾದ ಯುದ್ಧವಿಮಾನಗಳು ಕಣ್ಣಿಗೆ ಕಾಣಿಸದ ದೂರದಲ್ಲಿರುವ (Beyond-Visual-Range) ಮತ್ತು ಕೆಳಭಾಗದಲ್ಲಿ ಅಡಗಿರುವ ಶತ್ರು ವಿಮಾನಗಳನ್ನು ಪತ್ತೆಹಚ್ಚುವ ಅತ್ಯಾಧುನಿಕ ‘ಆ್ಯರ್‌ಬೋರ್ನ್ ಪಲ್ಸ್ ಡಾಪ್ಲರ್ ರೇಡಾರ್’ (Airborne Pulse-Doppler Radar) ತಂತ್ರಜ್ಞಾನವನ್ನು ಇವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿತು.
ರೇಡಾರ್‌ನ ಡೇಟಾ ನಿಖರತೆಯನ್ನು ಪರೀಕ್ಷಿಸಲು ಬೆನ್ ಡೆ ಅವರು ಪ್ರತಿಯೊಂದು ಟೆಸ್ಟ್ ಫ್ಲೈಟ್‌ನಲ್ಲೂ ಸ್ವತಃ ತಾವೇ ಪ್ರಯಾಣಿಸುತ್ತಿದ್ದರು. ಈ ಪ್ರಯೋಗಗಳ ಸಮಯದಲ್ಲಿ ಇಂಜಿನ್ ವೈಫಲ್ಯ ಮತ್ತು ಲ್ಯಾಂಡಿಂಗ್ ಗೇರ್ ದೋಷದಿಂದಾಗಿ ಎರಡು ಬಾರಿ ಅವರು ಸಾವಿನ ಮುಖಾಮುಖಿಯಾಗಿ ಪಾರಾಗಿದ್ದರು.
ಇದನ್ನೂ ಓದಿ: ವಿಶ್ವದ ಹಲವು ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್ ಅಗ್ಗ; ಇದು ಹೇಗೆ ಸಾಧ್ಯವಾಯಿತು? ಸಚಿವ ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟ ಸತ್ಯ
ಇಬ್ಬರು ಹಳ್ಳಿಗರಿಂದ ಚೀನಾದ ಸ್ವಾವಲಂಬನೆಯ ಸಂದೇಶ
ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ರಕ್ಷಣೆ ಮತ್ತು ದೈನಂದಿನ ತಂತ್ರಜ್ಞಾನದಲ್ಲಿ ಚೀನಾ ಸ್ವಾವಲಂಬನೆ ಸಾಧಿಸಬೇಕೆಂಬ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಗೆ ಈ ಇಬ್ಬರು ವಿಜ್ಞಾನಿಗಳ ಸಾಧನೆ ಅತ್ಯುತ್ತಮ ಉದಾಹರಣೆಯಾಗಿದೆ. ಶೂನ್ಯದಿಂದ ಆರಂಭಿಸಿ ದೇಶವನ್ನು ಜಾಗತಿಕ ತಂತ್ರಜ್ಞಾನದ ಸೂಪರ್ ಪವರ್ ಮಾಡಿದ ಇಬ್ಬರು ಹಳ್ಳಿಯ ಹುಡುಗರ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯಾಗುವಂಥದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




