ಆಧಾರ್ (ಸಾಂದರ್ಭಿಕ ಚಿತ್ರ)
ಹೊಸ ವಿಳಾಸಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ ಆಧಾರ್ (Aadhaar) ಕಾರ್ಡಿನಲ್ಲಿ ವಿಳಾಸ ನವೀಕರಣ ಮಾಡಬಹುದಾದ (Address Change) ಹೊಸ ಆಯ್ಕೆ ಒಂದನ್ನು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ಪರಿಚಯಿಸಿದೆ. ಆದರೆ ಕುಟುಂಬದ ಮುಖ್ಯಸ್ಥರೊಂದಿಗೆ ಹೊಂದಿರುವ ಸಂಬಂಧವನ್ನು ದೃಢೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ತಮ್ಮ ಹೆಸರಿನಲ್ಲಿ ಯಾವುದೇ ದಾಖಲೆ ಹೊಂದಿಲ್ಲದಿರುವವರಿಗೆ ಮತ್ತು ವಿವಿಧ ಕಾರಣಗಳಿಂದ ಬೇರೆ ಕಡೆ ವಲಸೆ ಹೋಗುವವರಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಲಾಗಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಮೇರೆಗೆ ಆಧಾರ್ನಲ್ಲಿ ಆನ್ಲೈನ್ ಮೂಲಕ ವಿಳಾಸವನ್ನು ನವೀಕರಿಸಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ವಿವಾಹ ನೋಂದಣಿ ಪ್ರಮಾಣ ಪತ್ರ, ಪಡಿತರ ಚೀಟಿ, ಪಾಸ್ಪೋರ್ಟ್ ಅಥವಾ ಇತರ ಯಾವುದೇ ದಾಖಲೆಗಳನ್ನು ಕುಟುಂಬದ ಮುಖ್ಯಸ್ಥರ ಜೊತೆ ಸಂಬಂಧ ಹೊಂದಿರುವುದನ್ನು ದೃಢಪಡಿಸಲು ಬಳಸಬಹುದಾಗಿದೆ.
ಹೊಸ ವಿಳಾಸಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ, ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆಧಾರ್ ಕಾರ್ಡಿನಲ್ಲಿ ಆನ್ಲೈನ್ ಮೂಲಕ ವಿಳಾಸ ಬದಲಾಯಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
- ಮೈ ಆಧಾರ್ ವೆಬ್ ಪೋರ್ಟಲ್ಗೆ ಭೇಟಿ ನೀಡಿ
- ಅಪ್ಡೇಟ್ ಅಡ್ರೆಸ್ ಆನ್ಲೈನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
- ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಕುಟುಂಬದ ಮುಖ್ಯಸ್ಥರ ಖಾಸಗಿತನವನ್ನು ಕಾಪಾಡುವ ಉದ್ದೇಶದಿಂದ ಅವರ ಯಾವುದೇ ವಿವರಗಳು ಇಲ್ಲಿ ಪ್ರದರ್ಶಿಸಲ್ಪಡುವುದಿಲ್ಲ.
- ಕುಟುಂಬ ಮುಖ್ಯಸ್ಥರ ಆಧಾರ್ ಸಂಖ್ಯೆ ದೃಢೀಕರಣ ಗೊಳ್ಳುತ್ತದೆ. ನಂತರ ನೀವು ಅವರೊಂದಿಗೆ ಹೊಂದಿರುವ ಸಂಬಂಧವನ್ನು ದೃಢೀಕರಿಸಲು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಸೇವಾ ಶುಲ್ಕವಾಗಿ ಐವತ್ತು ರೂಪಾಯಿ ಪಾವತಿಸಬೇಕಾಗುತ್ತದೆ.
- ಶುಲ್ಕ ಪಾವತಿಸಿದ ಕೂಡಲೇ ಸೇವಾ ವಿನಂತಿ ಸಂಖ್ಯೆ ಅಥವಾ ಎಸ್ಆರ್ಎನ್ ನಿಮ್ಮ ಮೊಬೈಲಿಗೆ ಬರುತ್ತದೆ. ವಿಳಾಸ ಬದಲಾವಣೆಗಾಗಿ ಕುಟುಂಬ ಮುಖ್ಯಸ್ಥರಿಗೆ ವಿನಂತಿ ಸಂದೇಶ ಕಳುಹಿಸಲ್ಪಡುತ್ತದೆ.ಕುಟುಂಬ ಮುಖ್ಯಸ್ಥರು ವಿನಂತಿಯನ್ನು ಸ್ವೀಕರಿಸಿ ಅಪ್ರೂವ್ ಮಾಡಬೇಕಾಗುತ್ತದೆ. ಸಂದೇಶ ಬಂದ 30 ದಿನಗಳ ಒಳಗಾಗಿ ಅವರು ಮೈ ಆಧಾರ್ ಪೋರ್ಟಲ್ಗೆ ಲಾಗಿನ್ ಆಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
- ಒಂದು ವೇಳೆ ಕುಟುಂಬ ಮುಖ್ಯಸ್ಥರು ವಿಳಾಸ ಬದಲಾವಣೆ ವಿನಂತಿಯನ್ನು ತಿರಸ್ಕರಿಸಿದರೆ, ವಿಳಾಸ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ವಿನಂತಿ ತಿರಸ್ಕೃತಗೊಂಡಿರುವ ಬಗ್ಗೆ ನಿಮಗೆ ಎಸ್ಎಂಎಸ್ ಮೂಲಕ ಸಂದೇಶ ಬರುತ್ತದೆ.