Russia- Ukraine Crisis: ತಡೆಹಿಡಿದ ರಷ್ಯಾ ಹಣ ಬಳಸಿಯೇ ಉಕ್ರೇನ್​ ಮರು ನಿರ್ಮಾಣ ಆಗಲಿ ಎಂದ ಕೇಂದ್ರ ಬ್ಯಾಂಕ್ ಗವರ್ನರ್

ಯುದ್ಧ ಮುಗಿದ ಮೇಳೆ ಉಕ್ರೇನ್ ಮರು ನಿರ್ಮಾಣಕ್ಕಾಗಿ ತಡೆ ಹಿಡಿದ ರಷ್ಯಾದ ಹಣವನ್ನು ಬಳಸಿಕೊಳ್ಳಬೇಕು ಎಂದು ಉಕ್ರೇನ್​ ಕೇಂದ್ರ ಬ್ಯಾಂಕ್ ಅಧ್ಯಕ್ಷರು ಹೇಳಿದ್ದಾರೆ.

Russia- Ukraine Crisis: ತಡೆಹಿಡಿದ ರಷ್ಯಾ ಹಣ ಬಳಸಿಯೇ ಉಕ್ರೇನ್​ ಮರು ನಿರ್ಮಾಣ ಆಗಲಿ ಎಂದ ಕೇಂದ್ರ ಬ್ಯಾಂಕ್ ಗವರ್ನರ್
ಕೈರಿಲೊ ಶೆವ್​ಚೆಂಕೊ
Follow us
TV9 Web
| Updated By: Srinivas Mata

Updated on:Mar 10, 2022 | 1:06 PM

ಯುದ್ಧದ ನಂತರ ಉಕ್ರೇನ್​ನ ಮರು ನಿರ್ಮಾಣಕ್ಕಾಗಿ ರಷ್ಯಾದ (Russia – Ukraine Crisis) ತಡೆಹಿಡಿದ ಆಸ್ತಿಯನ್ನೇ ಬಳಸಿಕೊಳ್ಳಬೇಕು ಎಂದು ಉಕ್ರೇನ್​ನ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹೇಳಿರುವುದಾಗಿ ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾಗೆ ಐಎಂಎಫ್​ ಸಂಪರ್ಕ ಅಮಾನತುಗೊಳಿಸಿ ಕಾರ್ಡ್​ ಪಾವತಿ ಕಡಿತಗೊಳಿಸಬೇಕು ಎಂಬುದು ಸೇರಿದಂತೆ ಹೆಚ್ಚುವರಿಯಾಗಿ ವ್ಯಾಪಕವಾದ ನಿರ್ಬಂಧಗಳನ್ನು ಹೇರಬೇಕು ಎಂದು ಉಕ್ರೇನ್​ನ ಕೇಂದ್ರ ಬ್ಯಾಂಕ್​ ಗವರ್ನರ್ ಕೈರಿಲೊ ಶೆವ್​ಚೆಂಕೊ ಕರೆ ನೀಡಿದ್ದಾರೆ. ನಿರ್ಬಂಧಗಳನ್ನು ಹಾಕುವುದಕ್ಕೆ ದಿನದಿನಕ್ಕೂ ವಿಳಂಬ ಮಾಡಿದಂತೆ ನಾಗರಿಕರು ಮತ್ತು ಮಕ್ಕಳ ಜೀವ ಹಾನಿಗೆ ಕಾರಣ ಆಗುತ್ತದೆ, ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. “ಹಣದ ಅಗತ್ಯ ಭಾರೀ ಪ್ರಮಾಣದಲ್ಲಿ ಇರಲಿದೆ,” ಎಂದು ಬಿಬಿಸಿಗೆ ಹೇಳಿದ್ದಾರೆ. “ಇದನ್ನು ಬಹುರಾಷ್ಟ್ರೀಯ ಸಂಸ್ಥೆಗಳ ಸಾಲ ಮತ್ತು ಅನುದಾನದಿಂದ ಹಾಗೂ ಇತರ ದೇಶಗಳ ನೇರ ಸಹಾಯದಿಂದ ಪೂರ್ಣಗೊಳಿಸಬಹುದು. ಆದರೆ ದೊಡ್ಡ ಮಟ್ಟದ ಹಣವನ್ನು ಆಕ್ರಮಣ ನಡೆಸಿದವರಿಂದ ಪಡೆಯಬೇಕು, ಜತೆಗೆ ಮಿತ್ರ ರಾಷ್ಟ್ರಗಳಲ್ಲಿ ತಡೆ ಹಿಡಿದಿರುವ ಮೊತ್ತವನ್ನು ಸಹ ಅದರಲ್ಲಿ ಒಳಗೊಳ್ಳಬೇಕು,” ಎಂದಿದ್ದಾರೆ.

ರಷ್ಯಾದ 63,000 ಕೋಟಿ ಡಾಲರ್ ವಿದೇಶೀ ವಿನಿಮಯವು ದೇಶದ ಹೊರಗೆ ಇದೆ. ಅದನ್ನು ಪರಿಣಾಮಕಾರಿಯಾಗಿ ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಇತರ ಸ್ಥಳಗಳಲ್ಲಿ ನಿರ್ಬಂಧಗಳ ಕಾರಣಕ್ಕೆ ಸ್ಥಗಿತವಾಗಿದೆ. ಈ ಮೂಲಕ ಬಿಲಿಯನ್​ಗಟ್ಟಲೆ ಡಾಲರ್​ ಅನ್ನು ಯುದ್ಧ ಮುಗಿದ ಮೇಲೆ ಉಕ್ರೇನ್ ನಿರ್ಮಾಣಕ್ಕೆ ಲಭ್ಯವಾಗುತ್ತದೆ.

ಹೆಚ್ಚುವರಿ ನಿರ್ಬಂಧಗಳ ವಿವರವಾದ ಪಟ್ಟಿ ಶೆವ್​ಚೆಂಕೊ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯದಿಂದ ವಿಧಿಸಲಾದ ಆರ್ಥಿಕ ನಿರ್ಬಂಧಗಳನ್ನು ಸ್ವಾಗತಿಸಿದ್ದು, ಆದರೆ ಜಾಗತಿಕ ಸಮುದಾಯದಿಂದ ಇನ್ನೂ ಹೆಚ್ಚು ನಿರ್ಬಂಧ ಹೇರಬೇಕು ಎಂದು ಹೇಳಿದ್ದಾರೆ. ರಷ್ಯಾದ ಆರ್ಥಿಕತೆಯ ಪ್ರತಿ ಇಂಚಿಂಚೂ ಗುರಿಯಾಗಿಟ್ಟುಕೊಂಡು ಮತ್ತಷ್ಟು ಹಣಕಾಸಿನ ನಿರ್ಬಂಧಗಳ ವ್ಯಾಪಕ ಪಟ್ಟಿಯನ್ನು ವಿಧಿಸಲು ಸರ್ಕಾರಗಳು, ಸಂಸ್ಥೆಗಳು ಮತ್ತು ಕಂಪೆನಿಗಳಿಗೆ ಕರೆ ನೀಡಿದ್ದಾರೆ.

ಕರೆ ನೀಡಿದ ನಿರ್ಬಂಧಗಳು: – ವ್ಯಾಪಾರ ಮತ್ತು ಹಣಕಾಸು ಡೇಟಾ ಪ್ಲಾಟ್​ಫಾರ್ಮ್​ಗಳಾದ ರೆಫಿನಿಟಿವ್ (Refinitiv) ಮತ್ತು ಬ್ಲೂಮ್​ಬರ್ಗ್ (Bloomberg) ರಷ್ಯಾ ಮತ್ತು ಬೆಲರೂಸಿಯನ್ ಗ್ರಾಹಕರಿಗೆ ಸಂಪರ್ಕವನ್ನು ಕೊನೆಗೊಳಿಸಬೇಕು.

– ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ತಮ್ಮ ಬ್ಯಾಂಕುಗಳಿಗೆ ರಷ್ಯಾದ ಬ್ಯಾಂಕ್​ಗಳೊಂದಿಗಿನ ಪತ್ರ ವ್ಯವಹಾರದ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಸೂಚಿಸಬೇಕು.

– ಸೆಂಟ್ರಲ್ ಬ್ಯಾಂಕ್​ಳ ಸಂಸ್ಥೆ, ಬ್ಯಾಂಕ್ ಫಾರ್ ಇಂಟರ್​ನ್ಯಾಷನಲ್​ ಸೆಟಲ್​ಮೆಂಟ್ಸ್ ರಷ್ಯಾದ ಕೇಂದ್ರ ಬ್ಯಾಂಕ್ ಅನ್ನು ಹೊರಹಾಕಬೇಕು.

– ಅಂತಾರಾಷ್ಟ್ರೀಯ ಹಣಕಾಸು ನಿಧಿಯು ತನ್ನ ಸಭೆಗಳಿಂದ ರಷ್ಯಾ ಮತ್ತು ಬೆಲಾರಸ್ ಅನ್ನು ಅಮಾನತುಗೊಳಿಸಬೇಕು, ವಿಶೇಷ ಡ್ರಾಯಿಂಗ್ ರೈಟ್ಸ್ ಎಂದು ಕರೆಯಲ್ಪಡುವ IMF ನೀಡಿದ ಆಸ್ತಿಗಳಿಗೆ ಸಂಪರ್ಕವನ್ನು ನಿರ್ಬಂಧಿಸುವುದು, ಏಕೆಂದರೆ “ಈ ಹಣವನ್ನು ನಮ್ಮ ದೇಶದ (ಉಕ್ರೇನ್) ವಿರುದ್ಧ ಮಿಲಿಟರಿ ಕ್ರಮಕ್ಕೆ ಹಣಕಾಸು ಒದಗಿಸಲು ಬಳಸಬಹುದು.”

– ಚೀನಾದ ಯೂನಿಯನ್‌ಪೇ ಕಾರ್ಡ್ ಪಾವತಿ ವ್ಯವಸ್ಥೆಯಿಂದ (ಮಾಸ್ಟರ್‌ಕಾರ್ಡ್ ಮತ್ತು ವೀಸಾದಂತೆಯೇ) ರಷ್ಯಾದ ಬ್ಯಾಂಕ್‌ಗಳು ನೀಡಿದ ಪಾವತಿ ಕಾರ್ಡ್‌ಗಳ ಸೇವೆಯನ್ನು ನಿಲ್ಲಿಸಬೇಕು.

– ಅರ್ಮೇನಿಯಾ, ಕಝಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಟರ್ಕಿ ಮತ್ತು ವಿಯೆಟ್ನಾಂ ದೇಶಗಳು ರಷ್ಯಾದ ಪಾವತಿ ವ್ಯವಸ್ಥೆ, ಮಿರ್ ನಿರ್ಬಂಧಿಸಬೇಕು.

– ಅಂತಾರಾಷ್ಟ್ರೀಯ ಹಣ ವರ್ಗಾವಣೆ ಆಪರೇಟರ್ ವೆಸ್ಟರ್ನ್ ಯೂನಿಯನ್ ರಷ್ಯಾದ ಮತ್ತು ಬೆಲರೂಸಿಯನ್ ಬ್ಯಾಂಕ್​ಗಳಿಗೆ ನಗದು ವಿತರಣೆಯನ್ನು ನಿಲ್ಲಿಸಬೇಕು.

“ನಾವು ಈಗಾಗಲೇ ರಷ್ಯಾದ ಆರ್ಥಿಕ ವ್ಯವಸ್ಥೆಯ ಮೇಲೆ (ನಿರ್ಬಂಧಗಳ) ಪರಿಣಾಮವನ್ನು ನೋಡುತ್ತಿದ್ದೇವೆ. ಆದರೆ ಇನ್ನೂ ಹೆಚ್ಚಿನದನ್ನು ಮಾಡಲು ನಾವು ಕಾಯುತ್ತಿದ್ದೇವೆ. ನಿರ್ಬಂಧಗಳು ವಿಳಂಬ ಆಗುವುದರಿಂದ ಪ್ರತಿದಿನ ನಾಗರಿಕರು ಮತ್ತು ಮಕ್ಕಳ ಪ್ರಾಣ ಹೋಗುತ್ತಿದೆ ಎಂದು ನಾನು ಒತ್ತಿಹೇಳಲು ಬಯಸುತ್ತೇನೆ,” ಎಂದು ಶೆವ್​ಚೆಂಕೊ ಹೇಳಿದ್ದಾರೆ. “ಇವು ಯುರೋಪಿನ ಮಾರ್ಗವನ್ನು ಆರಿಸಿಕೊಂಡಿರುವ ಉಕ್ರೇನಿಯನ್ನರ ಜೀವನ ಆಗಿವೆ ಮತ್ತು ಈಗ ತಮ್ಮ ದೇಶವನ್ನು ಮಾತ್ರವಲ್ಲದೆ ಪಾಶ್ಚಾತ್ಯ ನಾಗರಿಕತೆಯ ಪ್ರಮುಖ ಭಾಗದಲ್ಲಿರುವ ಸಂಪೂರ್ಣ ಮೌಲ್ಯಗಳ ವ್ಯವಸ್ಥೆಯನ್ನು ಸಹ ರಕ್ಷಿಸುತ್ತಿದೆ,” ಎಂದಿದ್ದಾರೆ. ​

ಇದನ್ನೂ ಓದಿ: ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ

Published On - 1:03 pm, Thu, 10 March 22