ಸಿಮೆಂಟ್ ವಾರ್..! ಧೋನಿ ವೈಸ್ ಪ್ರೆಸಿಡೆಂಟ್ ಆಗಿರುವ ಇಂಡಿಯಾ ಸಿಮೆಂಟ್ಸ್ ಸ್ವಾಧೀನಕ್ಕೆ ಅಲ್ಟ್ರಾಟೆಕ್ ಯತ್ನ? ಅದಾನಿ, ಜಿಂದಾಲ್ ನಡೆಗೆ ಮುನ್ನ ಬಿರ್ಲಾ ಹೆಜ್ಜೆ?
Ultratech buying 23% stake in India cements: ದೇಶದ ಅತಿದೊಡ್ಡ ಸಿಮೆಂಟ್ ಸಂಸ್ಥೆಯಾದ ಅಲ್ಟ್ರಾಟೆಕ್ ತನ್ನ ಪ್ರತಿಸ್ಪರ್ಧಿ ಇಂಡಿಯಾ ಸಿಮೆಂಟ್ಸ್ನ ಶೇ. 23ರಷ್ಟು ಷೇರುಪಾಲು ಖರೀದಿಸುತ್ತಿದೆ. ವರದಿ ಪ್ರಕಾರ ಜೂನ್ 27, ಇಂದು ಬ್ಲಾಕ್ ಡೀಲ್ನಲ್ಲಿ ಶೇ. 20ರಷ್ಟು ಇಂಡಿಯಾ ಸಿಮೆಂಟ್ಸ್ ಷೇರುಗಳು ಬಿಕರಿಯಾಗಿವೆ. ಇಂಡಿಯಾ ಸಿಮೆಂಟ್ಸ್ ಅನ್ನು ಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಅಲ್ಟ್ರಾಟೆಕ್ನ ಉದ್ದೇಶ ಎಂಬ ಮಾತು ಕೇಳಿಬರುತ್ತಿದೆ.
ನವದೆಹಲಿ, ಜೂನ್ 27: ಲಾಭ ಗಳಿಸಲು ಪರದಾಡುತ್ತಾ ಸಂಕಷ್ಟದಲ್ಲಿರುವ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್ಸ್ ಕಂಪನಿ ಬಂಡವಾಳ ಹಾಕುತ್ತಿದೆ. ಇಂಡಿಯಾ ಸಿಮೆಂಟ್ಸ್ನ ಶೇ. 23ರಷ್ಟು ಷೇರುಪಾಲನ್ನು ಅಲ್ಟ್ರಾಟೆಕ್ ಖರೀದಿ ಮಾಡುವುದಾಗಿ ಹೇಳಿದೆ. ಕೆಲ ವರದಿಗಳ ಪ್ರಕಾರ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯನ್ನೇ ವಶಕ್ಕೆ ತೆಗೆದುಕೊಳ್ಳಲು ಅಲ್ಟ್ರಾಟೆಕ್ ಯೋಜಿಸಿರಬಹುದು ಎಂದು ಹೇಳಲಾಗುತ್ತಿದೆ.
ಸದ್ಯ ಇಂಡಿಯಾ ಸಿಮೆಂಟ್ಸ್ ಸಂಸ್ಥೆ ಎನ್ ಶ್ರೀನಿವಾಸನ್ ಅವರ ಒಡೆತನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಒಡೆಯರಾದ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ನ ಎಂಡಿಯಾಗಿದ್ದಾರೆ. ಅವರು ಸೇರಿದಂತೆ ಇಂಡಿಯಾ ಸಿಮೆಂಟ್ಸ್ ಮಾಲೀಕರ ಒಟ್ಟಾರೆ ಷೇರುಪಾಲು ಶೇ. 28.42ರಷ್ಟಿದೆ. ಈಗ ಕುಮಾರ ಮಂಗಲಂ ಬಿರ್ಲಾ ಅವರ ಮಾಲಕತ್ವದ ಅಲ್ಟ್ರಾಟಎಕ್ ಶೇ. 23ರಷ್ಟು ಪಾಲು ಪಡೆದದ್ದೇ ಆದಲ್ಲಿ ಇಂಡಿಯಾ ಸಿಮೆಂಟ್ಸ್ನಲ್ಲಿ ಶ್ರೀನಿವಾಸನ್ ಹಿಡಿತ ಹಿಂದಿನಂತೆ ಗಟ್ಟಿಯಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಷೇರುಪಾಲು ಖರೀದಿಸಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಅಲ್ಟ್ರಾಟೆಕ್ ಯತ್ನಿಸಬಹುದು. ಅಂತಿಮವಾಗಿ ಇಡೀ ಕಂಪನಿ ಅದರ ಹಿಡಿತಕ್ಕೆ ಹೋಗಬಹುದು.
ಅದಾನಿ, ಜಿಂದಾಲ್ ಪೈಪೋಟಿ ಭಯ
ಸದ್ಯ ಭಾರತದಲ್ಲಿ ಅತಿದೊಡ್ಡ ಸಿಮೆಂಟ್ ಕಂಪನಿ ಎನಿಸಿರುವ ಅಲ್ಟ್ರಾಟೆಕ್ ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಇಂಡಿಯಾ ಸಿಮೆಂಟ್ಸ್ ಖರೀದಿಗೆ ಮುಂದಾಗಿರಬಹುದು ಎನ್ನಲಾಗಿದೆ. ಯಾಕೆಂದರೆ ಅದಾನಿ ಗ್ರೂಪ್ಗೆ ಸೇರಿದ ಅಂಬುಜಾ ಸಿಮೆಂಟ್ಸ್ ಇತ್ತೀಚೆಗೆ ಪೆನ್ನಾ ಸಿಮೆಂಟ್ಸ್ ಅನ್ನು 10,000 ಕೋಟಿ ರೂಗೆ ಖರೀದಿಸುತ್ತಿರುವುದಾಗಿ ಹೇಳಿದೆ. ಅದಾನಿ ಗ್ರೂಪ್ ಕ್ರಮೇಣವಾಗಿ ಸಿಮೆಂಟ್ ಕ್ಷೇತ್ರದಲ್ಲಿ ಗಟ್ಟಿಯಾದ ಹೆಜ್ಜೆ ಊರುತ್ತಿದೆ.
ಇದನ್ನೂ ಓದಿ: ಜುಲೈ ತಿಂಗಳಲ್ಲಿ 12 ದಿನ ರಜೆಗಳಿವೆ; ನಿಮ್ಮ ಊರಲ್ಲಿ ಯಾವ್ಯಾವತ್ತು ರಜೆ? ಇಲ್ಲಿದೆ ಪಟ್ಟಿ
ಹಾಗೆಯೇ, ಜಿಂದಾಲ್ ಗ್ರೂಪ್ ಒಡೆತನದ ಜೆಎಸ್ಡಬ್ಲ್ಯು ಸಂಸ್ಥೆ ಪ್ರಮುಖ ಸಿಮೆಂಟ್ ಕಂಪನಿಗಳ ಮೇಲೆ ಕಣ್ಣಿಟ್ಟಿದೆ. ಅದಾನಿ ಗ್ರೂಪ್ ಆಗಲೀ, ಜಿಂದಾಲ್ ಆಗಲೀ ಇಂಡಿಯಾ ಸಿಮೆಂಟ್ಸ್ ಮೇಲೆ ಕಣ್ಣಿಡುವ ಮುನ್ನ ತಾನು ಹೋಗಿ ಅಲ್ಲಿ ಬಾವುಟ ಹಾರಿಸಬೇಕೆನ್ನುವುದು ಬಿರ್ಲಾ ಆಲೋಚನೆ ಇರಬೇಕು ಎನ್ನುತ್ತಿದ್ದಾರೆ ಮೂಲಗಳು.
ಯಾರಿಂದ ಷೇರು ಖರೀದಿಸುತ್ತಿದ್ದಾರೆ ಬಿರ್ಲಾ?
ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಎನ್ ಶ್ರೀನಿವಾಸನ್ ಹಾಗೂ ಇತರ ಸಹ-ಮಾಲೀಕರು ಹೊಂದಿರುವ ಒಟ್ಟು ಷೇರುಪಾಲು ಶೇ. 28.42. ಇದು ಬಿಟ್ಟರೆ ಹೆಚ್ಚಿನ ಷೇರು ಪಾಲು ಇರುವುದು ಡಿ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರ ಬಳಿ. ದಮಾನಿ ಅವರು ಇಂಡಿಯಾ ಸಿಮೆಂಟ್ಸ್ನಲ್ಲಿ ಶೇ. 20.78ರಷ್ಟು ಪಾಲು ಹೊಂದಿದ್ದಾರೆ. ಇವರನ್ನು ಬಿಟ್ಟರೆ ಬೇರೆಯವರ ಷೇರುಪಾಲು ತೀರಾ ಹೆಚ್ಚೇನಿಲ್ಲ. ಇಎಲ್ಎಂ ಪಾರ್ಕ್ ಫಂಡ್ ಶೇ. 5.58, ಎಲ್ಐಸಿ ಶೇ. 3.6ರಷ್ಟು ಷೇರುಪಾಲು ಹೊಂದಿವೆ.
ಇದನ್ನೂ ಓದಿ: ಮದುವೆಯಾದವರಿಗೆ ಕೆಲಸವಿಲ್ಲ ಅನ್ನೋದು ಸುಳ್ಳು; ಇತ್ತೀಚೆಗೆ ನೇಮಕವಾದವರಲ್ಲಿ ಶೇ. 25ರಷ್ಟು ವಿವಾಹಿತೆಯರೇ: ಫಾಕ್ಸ್ಕಾನ್
ವರದಿ ಪ್ರಕಾರ ಇಂದು ಜೂನ್ 27ರಂದು ಬ್ಲಾಕ್ ಡೀಲ್ನಲ್ಲಿ ಇಂಡಿಯಾ ಸಿಮೆಂಟ್ಸ್ನ ಶೇ. 20ರಷ್ಟು ಷೇರುಗಳ ಬಿಕರಿಯಾಗಿದೆ. ರಾಧಾಕಿಶನ್ ದಮಾನಿ ಅವರಿಂದ ಅಲ್ಟ್ರಾಟೆಕ್ ಈ ಷೇರು ಖರೀದಿ ಮಾಡಿದ್ದಿರಬಹುದು. ಈಗ ಷೇರುಪಾಲು ಶೇ. 23 ಆದ ಬಳಿಕ ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಿನ ಷೇರುಗಳನ್ನು ಬಿರ್ಲಾ ಒಡೆತನದ ಸಂಸ್ಥೆ ಖರೀದಿಸುವ ಸಾಧ್ಯತೆ ಇಲ್ಲದಿಲ್ಲ.
ಇಂಡಿಯಾ ಸಿಮೆಂಟ್ಸ್ ಹೆಚ್ಚು ಲಾಭದಲ್ಲಿಲ್ಲದಿದ್ದರೂ ಉತ್ತಮ ಮಾರುಕಟ್ಟೆ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಕ ಸಂಸ್ಥೆ ಇದು. ಎಂಎಸ್ ಧೋನಿ ಅವರು ಇಂಡಿಯಾ ಸಿಮೆಂಟ್ಸ್ನಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ