ಮುದ್ರಾ ಸಾಲ ಖಾತ್ರಿ ಯೋಜನೆಗೆ 5,000 ಕೋಟಿ ರೂ, ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ ನೀಡಲು ಕೇಂದ್ರ ಸಂಪುಟ ಅನುಮೋದನೆ

ಕೇಂದ್ರ ಸಚಿವ ಸಂಪುಟವು ಮುದ್ರಾ ಸಾಲಕ್ಕೆ ಖಾತ್ರಿ ಒದಗಿಸಲು 5,000 ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಒದಗಿಸಲು 62,370 ಕೋಟಿ ರೂ ಬಿಡುಗಡೆಗೆ ಸಂಪುಟದ ಅನುಮೋದನೆ ಸಿಕ್ಕಿದೆ. ದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೃಹತ್ತಾದ ಯುಗೇ ಯುಗೀನ್ ಭಾರತ್ ಮ್ಯೂಸಿಯಂಗಾಗಿಯೂ ಸಾವಿರಾರು ಕೋಟಿ ರೂ ವ್ಯಯಿಸಲಾಗುತ್ತಿದೆ.

ಮುದ್ರಾ ಸಾಲ ಖಾತ್ರಿ ಯೋಜನೆಗೆ 5,000 ಕೋಟಿ ರೂ, ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ ನೀಡಲು ಕೇಂದ್ರ ಸಂಪುಟ ಅನುಮೋದನೆ
ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್
Image Credit source: PTI

Updated on: Nov 11, 2026 | 4:10 PM

ನವದೆಹಲಿ, ನವೆಂಬರ್ 11: ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮುಂಗಾರು ಬೆಳೆಗಾಗಿ 62,370 ಕೋಟಿ ರೂ ಮೊತ್ತದ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ನೀಡುವ ಮುದ್ರಾ ಸಾಲಕ್ಕೆ 5,000 ಕೋಟಿ ರೂ ಗ್ಯಾರಂಟಿ ನಿಧಿ ಬಿಡುಗಡೆಗೂ ಸಂಪುಟದ ಸಮ್ಮತಿ ಸಿಕ್ಕಿದೆ. ಇದರ ಜೊತೆಗೆ ದೆಹಲಿಯಲ್ಲಿ ಎರಡು ಅಭಿವೃದ್ದಿ ಯೋಜನೆಗಳಿಗೆ ಫಂಡಿಂಗ್ ಬಿಡುಗಡೆ ಮಾಡುವುದಕ್ಕೂ ಸಂಪುಟದ ಒಪ್ಪಿಗೆ ದೊರೆತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಯ ನಿರ್ಧಾರಗಳನ್ನು ಇಂದು ಪ್ರಕಟಿಸಿದರು.

62,370 ಕೋಟಿ ರೂ ರಸಗೊಬ್ಬರ ಸಬ್ಸಿಡಿ

ಅಕ್ಟೋಬರ್​ನಿಂದ ಮಾರ್ಚ್​ವರೆಗೆ ಇರುವ ರಬಿ ಸೀಸನ್ ಅಥವಾ ಮುಂಗಾರು ಋತುವಿಗಾಗಿ ರಸಗೊಬ್ಬರ ಸಬ್ಸಿಡಿಗೆಂದು ಸರ್ಕಾರ 62,370 ಕೋಟಿ ರೂ ವ್ಯಯಿಸಲಿದೆ. ಇದು ಬೆಳೆಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ನಿಯಮದ ಅಡಿಯಲ್ಲಿ ನೀಡುವ ಸೌಲಭ್ಯವಾಗಿದೆ. ಈ ಯೋಜನೆಯಲ್ಲಿ ಪೊಟಾಶ್ ಮತ್ತು ಫಾಸ್ಫ್ಯಾಟಿಕ್ ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲು ಆ ಹಣವನ್ನು ವ್ಯಯಿಸಲಾಗುತ್ತದೆ.

Loading...

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಈ ರಸಗೊಬ್ಬರಗಳು ರೈತರಿಗೆ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಾಗಲು ಸರ್ಕಾರವು ರಸಗೊಬ್ಬರ ತಯಾರಕರು ಮತ್ತು ಆಮದುಗಾರರಿಗೆ ಸಬ್ಸಿಡಿ ಒದಗಿಸುತ್ತದೆ.

ಮುದ್ರಾ ಯೋಜನೆ ಅಡಿ 5,000 ಕೋಟಿ ರೂ ಸಾಲ ಖಾತ್ರಿ ನಿಧಿ

ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯ ಒದಗಿಸುವ ಪಿಎಂ ಮುದ್ರಾ ಯೋಜನೆ ಅಡಿ ಸರ್ಕಾರವು 5,000 ಕೋಟಿ ರೂ ಕ್ರೆಡಿಟ್ ಗ್ಯಾರಂಟಿ ಫಂಡ್ ಚಾಲ್ತಿಗೊಳಿಸಿದೆ. ಈ ಯೋಜನೆ ಅಡಿ ಸಣ್ಣ ವ್ಯಾಪಾರ ಸಂಸ್ಥೆಗಳು, ಉದ್ದಿಮೆಗಳಿಗೆ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಅಡಮಾನರಹಿತ ಸಾಲ ಸಿಗುವಂತೆ ಮಾಡಲಾಗುತ್ತದೆ. ಈ ಸಾಲಕ್ಕಾಗಿ ಯಾವುದನ್ನೇ ಅಡಮಾನವಾಗಿ ಇಡುವ ಅವಶ್ಯಕತೆ ಇರುವುದಿಲ್ಲ. ಈ ಸಾಲಗಳಿಗೆ ಉದ್ದಿಮೆಗಳ ಪರವಾಗಿ ಸರ್ಕಾರವೇ ಗ್ಯಾರಂಟಿ ಒದಗಿಸುತ್ತದೆ. ಅದಕ್ಕೆಂದೇ ಸದ್ಯ 5,000 ಕೋಟಿ ರೂ ಮೀಸಲಿರಿಸಲು ಸಂಪುಟ ಅನುಮೋದನೆ ನೀಡಿರುವುದು.

ಇದನ್ನೂ ಓದಿ: ಕ್ವಾಲ್​ಕಾಮ್​ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ

ಯುಗೇ ಯುಗೀನ್ ಭಾರತ್ ಮ್ಯೂಸಿಯಂಗೆ 3,230 ಕೋಟಿ ರೂ

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ನವದೆಹಲಿಯಲ್ಲಿ ಯುಗೇ ಯುಗೀನ್ ಭಾರತ್ ಮ್ಯೂಸಿಯಂನ ಅಭಿವೃದ್ಧಿಗಾಗಿ 3,230 ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯಲ್ಲಿ ದೆಹಲಿಯ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್​ನಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. 1.79 ಲಕ್ಷ ಚದರ ಮೀಟರ್ ವಿಸ್ತೀರ್ಣದ ಈ ಪ್ರಸ್ತಾವಿತ ಮ್ಯುಸಿಯಂ ಫ್ರಾನ್ಸ್​ನ ಪ್ಯಾರಿಸ್​ನಲ್ಲಿರುವ ವಿಶ್ವಖ್ಯಾತ ಮ್ಯೂಸಿಯಂಗಿಂತಲೂ ಬೃಹತ್ತಾಗಿರುತ್ತದೆ.

ಇದೇ ವೇಳೆ, ಕೇಂದ್ರ ಸಂಪುಟವು ನೋಯ್ಡಾ ಸೆಕ್ಟರ್ 51ರಿಂದ ಹಿಡಿದು ಗ್ರೇಟರ್ ನೋಯ್ಡಾ ಸೆಕ್ಟರ್-4 ರವರೆಗಿನ ಆಕ್ವಾ ಲೈನ್ ಮೆಟ್ರೋ ರೈಲ್ ಕಾರಿಡಾರ್​ನ ವಿಸ್ತರಣೆಗೆ ಅನುಮೋದನೆ ನೀಡಿದೆ. ಇದು 8.449 ಕಿಮೀ ಉದ್ದದ ಮಾರ್ಗ ವಿಸ್ತರಣೆ ಆಗಿದೆ. ಇದೂ ಸೇರಿಸಿದರೆ ಈ ಆಕ್ವಾ ಲೈನ್ ಕಾರಿಡಾರ್ 71.878 ಕಿಮೀಯಷ್ಟಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us