2021ರ ಏಪ್ರಿಲ್ನಿಂದ 2022ರ ಫೆಬ್ರವರಿ ಮಧ್ಯೆ ಹಣಕಾಸು ವರ್ಷ 2022ಕ್ಕೆ ವಿತ್ತೀಯ ಕೊರತೆಯು (Fiscal Deficit) ಕೇಂದ್ರ ಸರ್ಕಾರದ ಗುರಿಯ ಶೇ 82.7ರಷ್ಟಕ್ಕೆ ಜಿಗಿದಿದೆ ಎಂದು ಮಾರ್ಚ್ 31ರಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಬಿಡುಗಡೆ ಮಾಡಿದ ಡೇಟಾದಿಂದ ಗೊತ್ತಾಗಿದೆ. ಹಣಕಾಸು ವರ್ಷ 2021ರ ಪೂರ್ತಿ ವರ್ಷದ ಗುರಿಯ ಶೇ 76ರಷ್ಟು ಆಗಿದೆ. 2022ರ ಹಣಕಾಸು ವರ್ಷಕ್ಕೆ ಸರ್ಕಾರವು ಪರಿಷ್ಕೃತ ವಿತ್ತೀಯ ಕೊರತೆ ಗುರಿಯನ್ನು ಜಿಡಿಪಿಯ ಶೇ 6.9ರಷ್ಟು ಇರಿಸಿಕೊಂಡಿತ್ತು. ಈಗಿನ ಸಂಖ್ಯೆಯು ಹಳಿಯಲ್ಲೇ ಇದೆ ಎಂಬುದನ್ನು ತೋರಿಸುತ್ತಿದೆ. ಫೆಬ್ರವರಿಯಲ್ಲಿ ಕೊರತೆಯು ಏರಿಕೆ ಕಂಡಿದ್ದರ ಹೊರತಾಗಿಯೂ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾದ ಹಾದಿಯಲ್ಲೇ ಇದೆ.
2021ರ ಏಪ್ರಿಲ್ನಿಂದ 2022ರ ಜನವರಿ ಮಧ್ಯೆ ವಿತ್ತೀಯ ಕೊರತೆಯು ಪೂರ್ತಿ ವರ್ಷದ ಗುರಿಯ ಶೇ 58.9ರಷ್ಟಿತ್ತು. ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು 3.79 ಲಕ್ಷ ಕೋಟಿ ರೂಪಾಯಿ ವಿತ್ತೀಯ ಕೊರತೆ ದಾಖಲಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಿಸಿದ್ದ ದುಪ್ಪಟ್ಟಿಗಿಂತ ಹೆಚ್ಚಿನ ಮೊತ್ತ ಇದಾಗಿತ್ತು. ರಾಜ್ಯಗಳಿಗೆ ವರ್ಗಾವಣೆ ಮಾಡಿದ್ದರಿಂದಾಗಿ ಇಷ್ಟು ದೊಡ್ಡ ಮಟ್ಟದ ಏರಿಕೆ ಆಗಿತ್ತು. ಜನವರಿಯಲ್ಲಿ 95,082 ಕೋಟಿ ರೂಪಾಯಿ ಮತ್ತು 2021ರ ಫೆಬ್ರವರಿಯಲ್ಲಿ 35,281 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದರೆ, 2022ರ ಫೆಬ್ರವರಿಯಲ್ಲಿ 2.42 ಲಕ್ಷ ಕೋಟಿ ರೂಪಾಯಿ ವರ್ಗಾಯಿಸಿತ್ತು.
ಇದರ ಪರಿಣಾಮವಾಗಿ ಫೆಬ್ರವರಿಯಲ್ಲಿ ಕೇಂದ್ರದ ಒಟ್ಟು ತೆರಿಗೆ ಆದಾಯವು ವರ್ಷದಿಂದ ವರ್ಷಕ್ಕೆ ಶೇ 17.6ರಷ್ಟು ಏರಿಕೆಯಾಗಿ, 1.77 ಲಕ್ಷ ಕೋಟಿ ರೂಪಾಯಿಗಳಾಗಿದ್ದರೂ ನಿವ್ವಳ ತೆರಿಗೆ ಆದಾಯವು ನೆಗೆಟಿವ್ 66,550 ಕೋಟಿ ರೂಪಾಯಿಯಾಗಿದೆ. ಒಟ್ಟು ಸ್ವೀಕೃತಿಗಳು ಕೂಡ ಫೆಬ್ರವರಿಯಲ್ಲಿ 44,236 ಕೋಟಿ ರೂಪಾಯಿಗಳಷ್ಟು ಇಳಿಕೆ ಕಂಡಿದ್ದು, ಇದು ವಿತ್ತೀಯ ಕೊರತೆಯನ್ನು ಹೆಚ್ಚಿಸಲು ಕಾರಣವಾಗಿದೆ. ವೆಚ್ಚದ ಕಡೆಯಲ್ಲಿ ಫೆಬ್ರವರಿಯಲ್ಲಿ ಒಟ್ಟು ವೆಚ್ಚವು ವರ್ಷಕ್ಕೆ ಶೇ 11.0ರಷ್ಟು ಏರಿ, 3.34 ಲಕ್ಷ ಕೋಟಿ ರೂಪಾಯಿ, ಬಂಡವಾಳ ವೆಚ್ಚವು ರೂ. 43,495 ಕೋಟಿಗಳಲ್ಲಿದೆ.
ಒಟ್ಟಾರೆಯಾಗಿ, ಏಪ್ರಿಲ್ 2021-ಫೆಬ್ರವರಿ 2022ರಲ್ಲಿ ಕೇಂದ್ರದ ಬಂಡವಾಳ ವೆಚ್ಚವು 4.85 ಲಕ್ಷ ಕೋಟಿ ರೂಪಾಯಿಗೆ ತಲುಪಿ, ಶೇ 19.7ರಷ್ಟು ಹೆಚ್ಚಾಗಿದೆ. ಆದರೆ ಒಟ್ಟು ವೆಚ್ಚವು ಶೇ 11.5 ಹೆಚ್ಚಾಗಿ, 31.44 ಲಕ್ಷ ಕೋಟಿ ರೂಪಾಯಿ ಆಗಿದೆ. ಆದಾಯದ ಭಾಗದಲ್ಲಿ ಹಣಕಾಸು ವರ್ಷ 2022ರ ಮೊದಲ 11 ತಿಂಗಳಲ್ಲಿ ಒಟ್ಟು ಸ್ವೀಕೃತಿಗಳು ಶೇ 29.3ರಷ್ಟು ಹೆಚ್ಚಿದ್ದು, ಹಣಕಾಸು ವರ್ಷ 2021ರ ಅದೇ ಅವಧಿಯಲ್ಲಿ ಸಂಗ್ರಹಿಸಲಾದ ತೆರಿಗೆಯೇತರ ಆದಾಯದ ಎರಡು ಪಟ್ಟು ಹೆಚ್ಚಿದೆ.
ವಿತ್ತೀಯ ಕೊರತೆ ಅಂದರೇನು ತಿಳಿಯಬೇಕೆ? ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಸರ್ಕಾರಕ್ಕೆ ಬರಬಹುದಾದ ಅಂದಾಜು ಆದಾಯ ಮತ್ತು ಅಂದಾಜು ವೆಚ್ಚವನ್ನು ಜನರ ಮುಂದಿಡಲಾಗುತ್ತದೆ. ಇದು ಕೇವಲ ಅಂದಾಜಷ್ಟೇ ಆಗಿರುತ್ತದೆ. ಆದಾಯಕ್ಕಿಂತ ಖರ್ಚು ಇಷ್ಟು ಹೆಚ್ಚಾಗುತ್ತದೆ ಅಂದಾಗ ವಿತ್ತೀಯ ಕೊರತೆ ಎನ್ನಲಾಗುತ್ತದೆ. ಅಷ್ಟು ಹಣವನ್ನು ಸರಿತೂಗಿಸಲು ಸರ್ಕಾರವು ಸಾಲ ಮಾಡುತ್ತದೆ, ಬಾಂಡ್ ವಿತರಣೆ ಮಾಡುತ್ತದೆ. ಹೀಗೆ ಬೇರೆ ಬೇರೆ ಮಾರ್ಗ ಅನುಸರಿಸುತ್ತದೆ.
ಇದನ್ನೂ ಓದಿ: Karnataka Budget 2021: ಜನ ಸಾಮಾನ್ಯರಿಗೂ ಗೊತ್ತಿರಬೇಕಾದ ಬಜೆಟ್ ಪಾರಿಭಾಷಿಕ ಪದಗಳು