ಆಗಸ್ಟ್ ತಿಂಗಳಲ್ಲಿ 15.76 ಲಕ್ಷಕೋಟಿ ರೂ ಮೊತ್ತದಷ್ಟು ಡಿಜಿಟಲ್ ವಹಿವಾಟು; ಯುಪಿಐ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ
UPI Transactions In 2023 August: ಭಾರತದಲ್ಲಿ 2023ರ ಆಗಸ್ಟ್ ತಿಂಗಳಲ್ಲಿ ಯುಪಿಐ ಮೂಲಕ 10.58 ಬಿಲಿಯನ್ ಬಾರಿ ವಹಿವಾಟುಗಳಾಗಿವೆ. 15.76 ಲಕ್ಷಕೋಟಿ ರೂನಷ್ಟು ಹಣದ ವಹಿವಾಟುಗಳಾಗಿವೆ. ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ ಈ ಮಾಹಿತಿಯನ್ನು ಎಕ್ಸ್ನಲ್ಲಿ ಪ್ರಕಟಿಸಿದೆ. ಇದಕ್ಕೆ ಸ್ಪಂದಿಸಿರುವ ಪ್ರಧಾನಿ ಮೋದಿ, ಯುಪಿಐ ಪ್ರಗತಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಭಾರತೀಯ ಜನರ ಡಿಜಿಟಲ್ ಕೌಶಲ್ಯವನ್ನೂ ಮೆಚ್ಚಿಕೊಂಡಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 1: ಭಾರತದಲ್ಲಿ ಯುಪಿಐ ವ್ಯವಸ್ಥೆ (UPI) ದಿನೇ ದಿನೇ ಪ್ರಬಲವಾಗುತ್ತಲೇ ಹೋಗಿದೆ. ಹೆಚ್ಚೆಚ್ಚು ಹಣದ ವಹಿವಾಟು ಯುಪಿಐ ಮೂಲಕವೇ ಆಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಯುಪಿಐ ಮೂಲಕ ನಡೆದ ಹಣದ ವಹಿವಾಟು ಸಂಖ್ಯೆ ಮತ್ತು ಮೊತ್ತ ಎರಡೂ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ. ಯುಪಿಐ ರೂಪಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಸಂಸ್ಥೆ (NPCI) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರ ಆಗಸ್ಟ್ ತಿಂಗಳಲ್ಲಿ ಯುಪಿಐ ಬಳಸಿ ಬರೋಬ್ಬರಿ 1058 ಕೋಟಿ ಬಾರಿ ವಹಿವಾಟುಗಳು ನಡೆದಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 61ರಷ್ಟು ಹೆಚ್ಚಾಗಿದೆ. ಇನ್ನು, ಆಗಸ್ಟ್ ತಿಂಗಳಲ್ಲಿ ಒಟ್ಟು 15.76 ಲಕ್ಷಕೋಟಿ ರೂನಷ್ಟು ಮೊತ್ತದ ವಹಿವಾಟುಗಳಾಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಇದರಲ್ಲೂ ಕೂಡ ಶೇ. 47ರಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳು, ಅಂದರೆ ಜುಲೈ ತಿಂಗಳಿಗೆ ಹೋಲಿಸಿದರೆ ಯುಪಿಐ ವಹಿವಾಟು ತುಸು ಹೆಚ್ಚಾಗಿದೆ. 2023ರ ಜುಲೈ ತಿಂಗಳಲ್ಲಿ 996 ಕೋಟಿ ಬಾರಿ ಯುಪಿಐ ವಹಿವಾಟು ನಡೆದಿತ್ತು. 15.34 ಲಕ್ಷಕೋಟಿ ರೂನಷ್ಟು ಹಣದ ವಿನಿಮಯ ಆಗಿತ್ತು.
ಇನ್ನು, 2023ರ ಜೂನ್ ತಿಂಗಳಲ್ಲಿ ಯುಪಿಐ ವಹಿವಾಟು ಸಂಖ್ಯೆ 934 ಕೋಟಿಯಾದರೆ, ಹಣದ ಮೊತ್ತ 14.75 ಲಕ್ಷ ಕೋಟಿ ರೂ ಆಗಿದೆ. ಈ ಬಗ್ಗೆ ಎನ್ಪಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಗ್ರಾಫಿಕ್ಸ್ ಇಮೇಜ್ ಹಾಕಿ ಮಾಹಿತಿ ಅಪ್ಡೇಟ್ ಮಾಡಿದೆ.
ಇದನ್ನೂ ಓದಿ: ಗಳಿಸಿದ ಹಣ ನಿಲ್ಲುತ್ತಿಲ್ಲವಾ? ನಾವು ಮಾಡುವ ಪ್ರಮುಖ ಹಣಕಾಸು ತಪ್ಪುಗಳೇನು? ಇದಕ್ಕೆ ಪರಿಹಾರವೇನು? ಇಲ್ಲಿದೆ ಅಮೂಲ್ಯ ಮಾಹಿತಿ
It’s 10 Billion+ transactions in August`23! Make seamless payments from your mobile in real-time with UPI.#UPI #DigitalPayments #UPIChalega @GoI_MeitY @_DigitalIndia @upichalega @dilipasbe pic.twitter.com/5NrcpIirn8
— NPCI (@NPCI_NPCI) September 1, 2023
ಎನ್ಪಿಸಿಐನ ಈ ಟ್ವೀಟ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಮೂಲಕವೇ ಸ್ಪಂದಿಸಿದ್ದಾರೆ. ಭಾರತದ ಜನರು ಡಿಜಿಟಲ್ ಪ್ರಗತಿಯನ್ನು ಅಪ್ಪಿಕೊಳ್ಳುವ ಪ್ರಯತ್ನಕ್ಕೆ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.
‘ಇದು ವಿಶೇಷ ಸುದ್ದಿ..! ಭಾರತದ ಜನರು ಡಿಜಿಟಲ್ ಬೆಳವಣಿಗೆಯನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ಇದು ಕನ್ನಡಿ ಆಗಿದೆ…. ಮುಂಬರುವ ದಿನಗಳಲ್ಲೂ ಈ ಟ್ರೆಂಡ್ ಹೀಗೇ ಮುಂದುವರಿಯಲಿ,’ ಎಂದು ಪಿಎಂ ನರೇಂದ್ರ ಮೋದಿ ಆಶಿಸಿದ್ದಾರೆ.
This is exceptional news! It is a testament to the people of India embracing digital progress and a tribute to their skills. May this trend continue in the times to come. https://t.co/MrXpYbg5Cd
— Narendra Modi (@narendramodi) September 1, 2023
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಯುಪಿಐ ಅನ್ನು ರೂಪಿಸಿದೆ. ಕೋವಿಡ್ಗೆ ಮುಂಚೆಯೇ ಇದನ್ನು ಜಾರಿಗೆ ತರಲಾಗಿತ್ತಾದರೂ ಕೋವಿಡ್ ಸಂದರ್ಭದಲ್ಲಿ ಇದರ ಬಳಕೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಲಾಕ್ಡೌನ್ ಕಾರಣದಿಂದ ಕ್ಯಾಷ್ ವಹಿವಾಟು ಕಷ್ಟಸಾಧ್ಯವಾಗಿದ್ದು ಜನರಿಗೆ ಯುಪಿಐ ಬಳಸುವುದು ಬಹುತೇಕ ಅನಿವಾರ್ಯವೂ ಆಗಿತ್ತು.
ಇದನ್ನೂ ಓದಿ: ಬಲು ದುಬಾರಿಯಾಗಲಿದೆ ವಿಮಾನ ಪ್ರಯಾಣ; ಜೆಟ್ ಫುಯಲ್ ಬೆಲೆ ಶೇ. 14ರಷ್ಟು ಹೆಚ್ಚಳ; ಕಿಮೀಗೆ 1.12 ಲಕ್ಷ ರೂ ಬೆಲೆ
ಇದೇ ವೇಳೆ ಭಾರತದ ಈ ಸೂಪರ್ ಹಿಟ್ ಯುಪಿಐ ವ್ಯವಸ್ಥೆ ಬಹಳ ದೇಶಗಳ ಗಮನ ಸೆಳೆದಿರುವುದು ಹೌದು. ಅನಿವಾಸಿ ಭಾರತೀಯರು ಹೆಚ್ಚಿರುವ ದೇಶಗಳಲ್ಲಿ ಯುಪಿಐ ವ್ಯವಸ್ಥೆ ಬಳಸಲು ಅನುಮತಿಸುವ ಪ್ರಯತ್ನಗಳಾಗುತ್ತಿವೆ. ಸಿಂಗಾಪುರ, ಯುಎಇಯಲ್ಲಿ ಯುಪಿಐ ಸಹಯೋಗದ ಪೇಮೆಂಟ್ ವ್ಯವಸ್ಥೆ ಬಳಕೆಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ