ವಾಷಿಂಗ್ಟನ್, ಜೂನ್ 13: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿರುವ ಫೆಡರಲ್ ರಿಸರ್ವ್ (US Fed Reserve) ನಿರೀಕ್ಷೆಯಂತೆ ಈ ಬಾರಿ ಬಡ್ಡಿದರ ಕಡಿತಗೊಳಿಸಿಲ್ಲ. ಅಷ್ಟೇ ಅಲ್ಲ ಈ ವರ್ಷಾಂತ್ಯದವರೆಗೂ ಬಡ್ಡಿಕಡಿತ ಕ್ರಮವನ್ನು ತಳ್ಳಿಹಾಕಿದೆ. ಡಿಸೆಂಬರ್ನಲ್ಲಿ ಅಲ್ಪಮಟ್ಟದಲ್ಲಿ ಬಡ್ಡಿ ಇಳಿಸುವ ಇರಾದೆ ಇದೆ ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ಅಧಿಕಾರಿಗಳು ಬಿಟ್ಟುಕೊಟ್ಟಿದ್ದಾರೆ. ಸದ್ಯ ಅಲ್ಲಿ ಬಡ್ಡಿದರ ಶೇ. 5.25ರಿಂದ ಶೇ. 5.50ರವರೆಗೆ ಇದೆ. ಫೆಡರಲ್ ರಿಸರ್ವ್ನ ನಿರ್ಧಾರ ಬರುವ ಮುನ್ನ ಅಮೆರಿಕದ ಹಣದುಬ್ಬರದ ವರದಿಯೂ ಹೊರಬಂದಿತ್ತು. ಅದರ ಪ್ರಕಾರ ಮೇ ತಿಂಗಳಲ್ಲಿ ಹಣದುಬ್ಬರ ಶೇ. 3.3ರಷ್ಟಿದೆ. ಕೇವಲ 10 ಬೇಸಿಸ್ ಪಾಯಿಂಟ್ಗಳಷ್ಟು ಮಾತ್ರವೇ ಹಣದುಬ್ಬರ ಕಡಿಮೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ದರ ಶೇ. 3.2 ಇತ್ತು.
ಹಣದುಬ್ಬರ ದರ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಕಡಿಮೆ ಆಗಿಲ್ಲ. ಶೇ. 2ಕ್ಕೆ ದರವನ್ನು ಇಳಿಸುವ ಗುರಿ ಇನ್ನೂ ದೂರವೇ ಇದೆ. ಹೀಗಾಗಿ, ಫೆಡರಲ್ ರಿಸರ್ವ್ ಸದ್ಯದ ಮಟ್ಟಿಗೆ ಬಡ್ಡಿ ದರ ಇರಿಸುವ ಆಲೋಚನೆಯನ್ನೇ ಕೈಬಿಟ್ಟಿದೆ. ಹಿಂದಿನ ಸಭೆಯಲ್ಲಿ ಈ ವರ್ಷ ಮೂರು ಬಾರಿ ಬಡ್ಡಿದರ ಇಳಿಸಲು ಮುಂದಾಗಿದ್ದ ಫೆಡರಲ್ ರಿಸರ್ವ್ ಈಗ ಡಿಸೆಂಬರ್ನಲ್ಲಿ ಮಾತ್ರವೇ ರೇಟ್ ಕಟ್ ಕ್ರಮಕ್ಕೆ ಕೈಹಾಕಲು ನಿರ್ಧರಿಸಿದೆ. ಅದೂ ಹಣದುಬ್ಬರ ಹತೋಟಿಗೆ ಬಂದರೆ ಮಾತ್ರ. ಇಲ್ಲವಾದರೆ ಅದೂ ಇಲ್ಲ.
ಇದನ್ನೂ ಓದಿ: ಭಾರತದ ಹಣದುಬ್ಬರ ಶೇ. 4.75ಕ್ಕೆ ಇಳಿಕೆ; ಬಡ್ಡಿದರ ಕಡಿತಕ್ಕೆ ಮನಸು ಮಾಡುತ್ತಾ ಆರ್ಬಿಐ?
ಭಾರತೀಯ ಕಾಲಮಾನದಲ್ಲಿ ನಿನ್ನೆ ಮಧ್ಯರಾತ್ರಿ (ಜೂನ್ 12) ಮಾಧ್ಯಮಗಳೊಂದಿಗೆ ಮಾತನಾಡಿದ ಫೆಡರಲ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್, ಅಮೆರಿಕದ ಆರ್ಥಿಕತೆ ಬಗ್ಗೆ ಆಶಾದಾಯಕವಾಗಿದ್ದಾರೆ. ಆದರೆ, ಅವರು ಹಣದುಬ್ಬರದ ಬಗ್ಗೆ ಮಾತ್ರವೇ ವ್ಯಾಕುಲಗೊಂಡಿರುವುದು. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಬಡ್ಡಿದರವನ್ನೂ ಇದೇ ಮಟ್ಟದಲ್ಲಿ ಮುಂದುವರಿಸಬೇಕಾಗಬಹುದು. ಸದ್ಯಕ್ಕೆ ಈ ವರ್ಷದೊಳಗೆ ಒಮ್ಮೆ ಮಾತ್ರವೇ ಬಡ್ಡಿದರ ಇಳಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಪೋವೆಲ್ ತಿಳಿಸಿದ್ದಾರೆ. ವರದಿಗಳ ಪ್ರಕಾರ ಡಿಸೆಂಬರ್ನಲ್ಲಿ 25 ಬೇಸಿಸ್ ಪಾಯಿಂಟ್ಗಳಷ್ಟು ಮಾತ್ರವೇ ದರ ಕಡಿಮೆಗೊಳಿಸಬಹುದು ಎನ್ನಲಾಗಿದೆ.
ಎಲ್ಲವೂ ಕೂಡ ಹಣದುಬ್ಬರ ಎತ್ತ ಸಾಗಲಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಬೆಲೆ ಏರಿಕೆ ದರವು ನಿರೀಕ್ಷಿ ರೀತಿಯಲ್ಲಿ ಹತೋಟಿಗೆ ಬರುತ್ತಿಲ್ಲ. ಮಾರ್ಚ್ ತಿಂಗಳಲ್ಲಿ ನಡೆದ ಸಭೆಯ ವೇಳೆ ಅಧಿಕಾರಿಗಳು ವಾರ್ಷಾಂತ್ಯದ ಹಣದುಬ್ಬರ ಶೇ. 2.4ರಷ್ಟಿರಬಹುದು ಎಂದು ಅಂದಾಜಿಸಿದ್ದರು. ಈಗ ನಡೆದ ಸಭೆಯಲ್ಲಿ ಆ ಹಣದುಬ್ಬರ ಶೇ. 2.6ರಷ್ಟಿರಬಹುದು ಎಂದು ಅಭಿಪ್ರಾಯ ಬದಲಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ
ಫೆಡರಲ್ ರಿಸರ್ವ್ ಬಡ್ಡಿದರ ಸದ್ಯಕ್ಕೆ ಕಡಿಮೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಹೂಡಿಕೆದಾರರಿಗೆ ಒಂದು ಸ್ಪಷ್ಟತೆ ಸಿಕ್ಕಂತಾಗಿದೆ. ಚಿನ್ನ ಇತ್ಯಾದಿ ಬೆಲೆಗಳು ತುಸು ಕಡಿಮೆ ಆಗಬಹುದು. ಈಕ್ವಿಟಿ ಮಾರುಕಟ್ಟೆ ಉಬ್ಬರ ತುಸು ತಗ್ಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ