ಈ ಪುಟ್ಟ ಪುಟಾಣಿ ಸೆಮಿಕಂಡಕ್ಟರ್ ಬಳಕೆ ಆಗದ ಜಾಗ ಯಾವುದಿದೆ ಅನ್ನೋದನ್ನು ನೀವೇ ಹೇಳಬೇಕು? ಸ್ಮಾರ್ಟ್ ಟೀವಿಯಿಂದ ಕಾರಿನ ಪವರ್ ಸ್ಟೇರಿಂಗ್ ತನಕ, ಏರ್ಕಂಡೀಷನರ್ನಿಂದ ಪ್ಲೇ ಸ್ಟೇಷನ್ವರೆಗೆ ಸೆಮಿಕಂಡಕ್ಟರ್ ಇಲ್ಲದ ಎಲೆಕ್ಟ್ರಾನಿಕ್ಗಳಿಲ್ಲ. ಈಗ ಜಾಗತಿಕ ಮಟ್ಟದಲ್ಲೇ ಇದಕ್ಕೆ ಕೊರತೆ ಎದುರಾಗಿದೆ. ಏನಿದು ಸೆಮಿಕಂಡಕ್ಟರ್? ಇದರ ಕೊರತೆಗೆ ಕಾರಣ ಏನು ಇತ್ಯಾದಿಗಳ ಬಗ್ಗೆ ವಿವರಣಾತ್ಮಕವಾದ ಲೇಖನ ಇಲ್ಲಿದೆ. ನೀವು ಯಾವುದರ ಹೆಸರು ಬೇಕಾದರೂ ಹೇಳಿ, ಫೋನ್, ಟೀವಿ, ಗೃಹಬಳಕೆ ವಸ್ತುಗಳು, ಕಾರು ಹೀಗೆ ಎಲ್ಲದರಲ್ಲೂ ಸೆಮಿಕಂಡಕ್ಟರ್ ಚಿಪ್ಗಳು ಬಳಸಲಾಗುತ್ತದೆ. ನಿಮಗೆ ಗೊತ್ತಿರಲಿ, ಕೈಗಾರಿಕೆ ಸಲಕರಣೆಗಳು, ವಿಮಾನ, ವಾಹನಗಳಲ್ಲೂ ಈ ಚಿಪ್ಗಳನ್ನು ಬಳಸಲಾಗುತ್ತದೆ.
ಆದರೆ, ಸೆಮಿಕಂಡಕ್ಟರ್ಗೆ ಕೊರತೆ ಆಗಿರುವುದು ಮುಖ್ಯವಾಗಿ ವಾಹನೋದ್ಯಮಕ್ಕೆ ಬಿಕ್ಕಟ್ಟಾಗಿ ಪರಿವರ್ತನೆ ಆಗಿದೆ. ಅಗತ್ಯ ಪ್ರಮಾಣದಲ್ಲಿ ಚಿಪ್ಗಳು ಪೂರೈಕೆ ಆಗದಿರುವುದರಿಂದ ವಿಶ್ವದಾದ್ಯಂತ ಕಾರ್ಖಾನೆಗಳನ್ನು ಮುಚ್ಚುವುದಕ್ಕೆ ಮತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಕ್ಕೆ ಕಾರಣ ಆಗಿದೆ. ಇವತ್ತಿಗೆ ಕಾರು ಅನ್ನೋದು ಚಲಿಸುವ ಕಂಪ್ಯೂಟರ್ನಂತೆ. ಪ್ರತಿ ಕಾರಿನಲ್ಲೂ ಹೀಟಿಂಗ್, ಏರ್ ಕಂಡೀಷನಿಂಗ್, ಮನರಂಜನೆ, ಎಂಜಿನ್ ಹೀಗೆ ಎಲ್ಲವೂ ಇದ್ದು, ಇವುಗಳನ್ನು ನಿಯಂತ್ರಣ ಮತ್ತು ನಿಗಾ ಮಾಡುವುದು ಎಲೆಕ್ಟ್ರಾನಿಕ್ ಚಿಪ್ಗಳು. ಉತ್ಪಾದನೆಯ ವೇಳೆ ಒಂದು ವಸ್ತುವಿಗೆ ಕೊರತೆ ಬಿದ್ದರೂ ಮತ್ತು ಕೊರತೆಯಾದ ವಸ್ತುಗಳು ಅದೆಷ್ಟೇ ಸಣ್ಣದಾಗಿದ್ದರೂ ಜೋಡಣೆ ಪೂರ್ತಿ ಮಾಡಲು ಆಗಲ್ಲ ಅಥವಾ ಆ ಉತ್ಪನ್ನ ರವಾನಿಸಲು ಆಗಲ್ಲ. ಇದರಿಂದ ಗಂಭೀರ ಸ್ವರೂಪದ ಅಡೆತಡೆ ಆಗುತ್ತದೆ. ಇದು ಈ ಹಿಂದೆ ಕೂಡ ಆಗಿದೆ.
2011ರ ಜಪಾನ್ ಫುಕುಶಿಮಾ ಭೂಕಂಪದ ಸಮಯ
2011ರಲ್ಲಿ ಜಪಾನ್ನ ಫುಕುಶಿಮಾದಲ್ಲಿ ಭಾರೀ ಭೂಕಂಪ ಆಗಿತ್ತಲ್ಲಾ, ಆಗ ವಾಹನ ಮತ್ತು ಇತರ ಉದ್ಯಮಗಳಿಗೆ ಚಿಪ್ಗಳನ್ನು ಉತ್ಪಾದಿಸುವ ರೆನಾಸಸ್ ಎಂಬ ಕಂಪೆನಿ ಮೇಲೆ ಪರಿಣಾಮ ಆಗಿತ್ತು. ಈ ಕಂಪೆನಿಯು ಫುಕುಶಿಮಾದಿಂದ ಬಹಳ ದೂರ ಏನಿರಲಿಲ್ಲ. ಇದು ವಿಶ್ವದಾದ್ಯಂತ ವಾಹನಗಳಿಗೆ ಚಿಪ್ಗಳನ್ನು ಪೂರೈಸುವ ಪ್ರಮುಖ ಸರಬರಾಜುದಾರ ಕಂಪೆನಿಯಾಗಿತ್ತು. ಸುನಾಮಿ ಕಾರಣಕ್ಕೆ ಕಾರ್ಖಾನೆಯನ್ನು ಮುಚ್ಚಲಾಯಿತು. ಪರಿಣಾಮವಾಗಿ ವಿಶ್ವದಾದ್ಯಂತದ ಪೂರೈಕೆ ಸಾಮರ್ಥ್ಯ ಗಮನಾರ್ಹವಾಗಿ ಶೇಕಡಾ 25ರಷ್ಟು ಕಡಿಮೆಯಾಯಿತು. ಆಗ ಜಪಾನೀಸ್, ಜರ್ಮನ್, ಚೀನೀಯರು ಹೀಗೆ ವಿಶ್ವದಾದ್ಯಂತದ ಕಾರ್ಖಾನೆಗಳು ಉತ್ಪಾದನೆ ಕಡಿಮೆ ಮಾಡಬೇಕಾಯಿತು ಮತ್ತು ಮುಚ್ಚಬೇಕಾಯಿತು.
ವಿಶ್ವದಾದ್ಯಂತದ ಇತರ ಕಂಪೆನಿಗಳು ಸಬ್ಅಸೆಂಬ್ಲಿಗಳು ಎನಿಸಿಕೊಂಡಿದ್ದವು. ಅಂದರೆ, ಮನರಂಜನಾ ಸಿಸ್ಟಮ್, ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್ ಇಂಥವುಗಳ ಜೋಡಣೆಯಲ್ಲಿ ಇವುಗಳು ತೊಡಗಿಕೊಂಡಿದ್ದವು. ಈ ಎಲ್ಲ ಮಾದರಿಗಳನ್ನು ವಿವಿಧ ಸರಬರಾಜುದಾರರು ಉತ್ಪಾದಿಸುತ್ತಿದ್ದರು ಮತ್ತು ಆ ನಂತರ ವಾಹನದಲ್ಲಿ ಜೋಡಣೆ ಮಾಡಲಾಗುತ್ತಿತ್ತು. ಆ ದಿನಗಳಲ್ಲಿ ಹಲವು ಭಾಗಗಳಿಗೆ ಮತ್ತು ಸಬ್ಅಸೆಂಬ್ಲಿಗಳಿಗೆ ಚಿಪ್ಗಳನ್ನು ಬಹಳ ಬಳಸಲಾಗುತ್ತಿತ್ತು. ಹಲವು ಉತ್ಪಾದಕರಿಗೆ ಇದೇ ಪ್ರಮುಖ ಪೂರೈಕೆ ಮೂಲವಾಗಿತ್ತು. ಆ ಕೈಗಾರಿಕೆ ಕುಸಿದಾಗ ಎಲ್ಲರಿಗೂ ಸಮಸ್ಯೆಯಾಯಿತು. ಬಹಳ ಕಂಪೆನಿಗಳಿಗೆ ತಮಗೆ ಪೂರೈಕೆ ಮಾಡುತ್ತಿದ್ದ ಸರಬರಾಜುದಾರರಿಗೆ ಚಿಪ್ಗಳನ್ನು ಒದಗಿಸುತ್ತಿದ್ದದ್ದು ಜಪಾನ್ನ ಈ ಕಂಪೆನಿ ಎಂಬುದು ಸಹ ಗೊತ್ತಿರಲಿಲ್ಲ. ಇದು ಪೂರೈಕೆ ಜಾಲದ (ಸಪ್ಲೈ ಚೈನ್) ಮಹಾತ್ಮೆ.
ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಯಿತು
ಅಂತಿಮವಾಗಿ ಉತ್ಪಾದನೆ ಹಂತದಲ್ಲಿ ಯಾರು ವಸ್ತುಗಳನ್ನು ಪೂರೈಸುತ್ತಿದ್ದಾರೆ ಅಂತ ಮಾತ್ರ ಅಲ್ಲ, ಪ್ರತಿ ಹಂತದ ಬಗ್ಗೆಯೂ ಮಾಹಿತಿ ಇರಬೇಕಾಗುತ್ತದೆ. ಇದನ್ನೇ ಡೈಮಂಡ್ ಶೇಪ್ (ವಜ್ರದ ಅಕಾರ) ಪೂರೈಕೆ ಜಾಲ ಎನ್ನಲಾಗುತ್ತದೆ. ಎಲ್ಲ ವಸ್ತುಗಳು ಈ ಪ್ರವೇಶದ ಮೂಲಕವೇ ಸಾಗಬೇಕು. ಎಲ್ಲೋ ಒಂದು ಕಡೆ ತಡೆ ಬಿದ್ದರೆ ಇಡೀ ವ್ಯವಸ್ಥೆ ಕುಸಿದು ಬೀಳುತ್ತದೆ. ಇದು ಆಗಿದ್ದು 2011ರಲ್ಲಿ. ಉತ್ಪಾದನೆಯಲ್ಲಿ ಚೇತರಿಕೆ ಕಾಣಿಸಿಕೊಳ್ಳುವುದಕ್ಕೆ ಪ್ರಮುಖ ತಯಾರಿಕರಿಗೆ ಹಲವು ತಿಂಗಳೇ ಬೇಕಾಯಿತು. ಯಾರು ತಯಾರಕರು ಎಂಬುದರ ಆಧಾರದಲ್ಲಿ 4 ತಿಂಗಳು, ಆರು ತಿಂಗಳ ಸಮಯ ತೆಗೆದುಕೊಂಡಿತು. ಎಲ್ಲರೂ ಆಗ ಹೇಳಿದ್ದೇನೆಂದರೆ, ನಾವು ಪಾಠ ಕಲಿತೆವು. ನಮ್ಮ ದೌರ್ಬಲ್ಯ ಎಲ್ಲಿದೆ ಎಂಬುದು ಗೊತ್ತಾಯಿತು. ಖಂಡಿತಾ ಇದು ಮತ್ತೆ ಆಗಲ್ಲ ಎಂದಿದ್ದರು. ಆದರೆ ಮತ್ತೆ ಅದೇ ಆಗಿದೆ.
ಆದರೆ, ಈಗ ಜಪಾನ್ ಮಾತ್ರ ಅಲ್ಲ, ಟೊಯೊಟಾ ಮತ್ತು ಸ್ಯಾಮ್ಸಂಗ್ ಕೂಡ ವಾಹನೋದ್ಯಮಕ್ಕೆ ಚಿಪ್ಗಳನ್ನು ಪೂರೈಸುವ ಪ್ರಮುಖ ಕಂಪೆನಿಗಳಾಗಿವೆ. ಇನ್ನು ಆ ಎರಡು ಕಂಪೆನಿಗಳಲ್ಲಿ ಏನೋ ಸಮಸ್ಯೆ ಆಗಿರಬೇಕು. ಅದಕ್ಕೇ ಈ ಬದಲಾವಣೆ ಅಂದುಕೊಳ್ಳುವಂತಿಲ್ಲ. ಬೇಡಿಕೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡಿರುವುದರಿಂದ ಅಷ್ಟು ಉತ್ಪಾದನೆ ಮಾಡುವ ಸಾಮರ್ಥ್ಯ ಇವುಗಳ ಬಳಿ ಇಲ್ಲ. ಜತೆಗೆ ವಾಹನೋದ್ಯಮಕ್ಕೆ ಮಾತ್ರ ಸಮಸ್ಯೆ ಆಗಿಬಿಟ್ಟಿತು ಅಂದುಕೊಳ್ಳುವಂತಿಲ್ಲ. ಜತೆಗೆ ಗ್ರಾಹಕ ಎಲೆಕ್ಟ್ರಾನಿಕ್ ತಯಾರಕರ ಮೇಲೂ ಪರಿಣಾಮ ಆಗಿದೆ. ಅಲ್ಲಂತೂ ವಾಹನೋದ್ಯಮಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿಪ್ಗಳನ್ನು ಬಳಸುತ್ತಾರೆ.
ಕೊರೊನಾ ಬಿಕ್ಕಟ್ಟಿನಲ್ಲಿದೆ ಮೂಲ ಕಾರಣ
ಇದಕ್ಕೆ ಕಾರಣ ಆಗಿರುವುದು ಕಳೆದ ವರ್ಷದ ಕೊರೊನಾ ಬಿಕ್ಕಟ್ಟು. ಟೀವಿಯ ಬಳಕೆ ಹೆಚ್ಚಾಯಿತು, ಮೊಬೈಲ್ ಮತ್ತೊಂದು ಸಿಕ್ಕಾಪಟ್ಟೆ ಬಳಸಿದೆವು. ಒಟ್ಟಿನಲ್ಲಿ 2020ನೇ ಇಸವಿಯಲ್ಲಿ ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿಹೋಯಿತು. ಇನ್ನು ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರುಗಳಿಗೆ ಬೇಡಿಕೆ ನೆಲ ಕಚ್ಚಿತು. ಯಾವಾಗ ಕಾರಿಗೆ ಬೇಡಿಕೆ ಇಲ್ಲ ಅಂತಾಯಿತೋ ಆಗ ಎಲ್ಲ ಉತ್ಪಾದಕರು ಹೆಚ್ಚಿನ ಸರಕು ಖರೀದಿ ಅಥವಾ ದಾಸ್ತಾನಿಗೆ ಮುಂದಾಗಲಿಲ್ಲ. ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳದೆ, ಎಷ್ಟು ಅಗತ್ಯವೋ ಅಷ್ಟರಲ್ಲೇ ವಹಿವಾಟಿನ ಕಡೆಗೆ ಲಕ್ಷ್ಯ ಕೊಟ್ಟರು. ವರ್ಷದ ದ್ವಿತೀಯಾರ್ಧದಲಲ್ಇ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿ ಹೋಯಿತು. ಜನರು ದಿಢೀರನೆ ಕಾರುಗಳ ಖರೀದಿಗೆ ಮುಂದಾದರು. ಉತ್ಪಾದಕರು ಏಕಾಏಕಿ ಚಿಪ್ಗಳಿಗೆ ಆರ್ಡರ್ ನೀಡಲು ನೋಡಿದಾಗ ಗೊತ್ತಾಗಿದ್ದೇನೆಂದರೆ, ಕೈಗಾರಿಕೆಗಳಿಂದ ತಮ್ಮ ಸಾಮರ್ಥ್ಯವನ್ನು ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ಕಡೆಗೆ ತಿರುಗಿಸಿಯಾಗಿತ್ತು.
ಹಾಗಿದ್ದರೆ ಇದು ಕೊರೊನಾ ತಂದಿಟ್ಟ ಸಮಸ್ಯೆಯೇ ಅಂದರೆ, ಬಿಕ್ಕಟ್ಟಿನ ಬೇರು ಇರುವುದು ಕೊರೊನಾದಲ್ಲಿ ಅಂತ ಮಾತ್ರ ಹೇಳಬಹುದು. ಕೊರೊನಾದಿಂದ ಬೇಡಿಕೆಯ ಸ್ವರೂಪದಲ್ಲೇ ದೊಡ್ಡ ಬದಲಾವಣೆ ಆಗಿಹೋಯಿತು. ಇದಕ್ಕೆ ಕಂಪೆನಿಗಳು ಪ್ರತಿಕ್ರಿಯಿಸಿದ ರೀತಿ ದಿಗ್ಭ್ರಾಂತಿ ಹುಟ್ಟಿಸುವಂತಿತ್ತು ಅಥವಾ ಸಮಸ್ಯೆ ಏನಾಗಬಹುದು ಎಂದು ಊಹಿಸುವುದು ಅಸಾಧ್ಯವಾಗಿತ್ತು. ತಯಾರಕರು ಇದನ್ನು ನಿರ್ವಹಿಸಬಹುದಿತ್ತು. ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ಗಳ ಪಾಠವೇ ಇದು. ಅಪಾಯವನ್ನು ಕಡಿಮೆ ಮಾಡುವುದು ಹೇಗೆ ಮತ್ತು ಬೇಡಿಕೆ ಜತೆಗೆ ಪೂರೈಕೆಯನ್ನು ಸರಿತೂಗಿಸಿಕೊಂಡು ಹೋಗುವುದು ಹೇಗೆ ಎಂದು ತಿಳಿಸಿಕೊಡುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ಬೇರೆ ಯಾವುದೇ ಸಮಸ್ಯೆ ಕಡೆಗೆ ಬೊಟ್ಟು ಮಾಡಬಹುದು. ಆದರೆ ಅತಿ ಮುಖ್ಯ ಕಾರಣ ಮಾತ್ರ ಬೇಡಿಕೆ ಸ್ವರೂಪದಲ್ಲಿನ ಬದಲಾವಣೆ. ಇನ್ನೊಂದು ಕಡೆ ಗ್ರಾಹಕ ಎಲೆಕ್ಟ್ರಾನಿಕ್ಸ್ ಬೇಡಿಕೆ ಸಿಕ್ಕಾಪಟ್ಟೆ ಆಗಿಹೋಯಿತು ಮತ್ತು ಇನ್ನೊಂದು ಕಡೆ ವಾಹನ ವಲಯದಲ್ಲಿ ಬೇಡಿಕೆ ಕುಸಿದು, ನಂತರ ಒಟ್ಟಿಗೆೆ ಹೆಚ್ಚಾಗಿ ಹೋಯಿತು.
ಆದರೆ, ಸದ್ಯಕ್ಕಂತೂ ಈ ಸಮಸ್ಯೆ ಬಗೆಹರಿಯಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ ಯಾವುದಾದರೂ ನಿರ್ದಿಷ್ಟ ಕಂಪೆನಿಯ ಉತ್ಪನ್ನಕ್ಕೆ ಬೇಕಾದ ಚಿಪ್ ಮತ್ತೊಂದಕ್ಕೆ ಬದಲಿ ಆಗಲು ಸಾಧ್ಯವಿಲ್ಲ. ಮಾರುತಿ ಕಾರಿನಲ್ಲಿ ಬಳಸುವ ಚಿಪ್ ಅಂದರೆ ಅದಕ್ಕೆ ಅದೇ ಬೇಕು. ಮಹೀಂದ್ರಾ ಕಂಪೆನಿಯದ್ದನ್ನು ಬಳಸುವುದಕ್ಕೆ ಆಗಲ್ಲ. ಆದ್ದರಿಂದ ಸದ್ಯಕ್ಕೆ ಬದಲಾಗುತ್ತಿರುವ ಬೇಡಿಕೆ ಜತೆಗೆ ಸ್ಪಂದಿಸಲು ಖಂಡಿತಾ ಸಮಯ ಬೇಕೇಬೇಕು. ಇದರ ಜತೆಗೆ ಈ ಸೆಮಿಕಂಡಕ್ಟರ್ಗಳ ಬೆಲೆ ಕೂಡ ಜಾಸ್ತಿ ಆಗುವ ಸಾಧ್ಯತೆ ಇದ್ದೇ ಇದೆ. ಸರ್ವಾಂತರ್ಯಾಮಿ ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚಾಗುವ ತನಕ ದೊರೆಯದಣ್ಣ ಸಮಸ್ಯೆಗೆ ಮುಕುತಿ.
ಇದನ್ನೂ ಓದಿ: ಕನಸಿನ ಕಾರು ಖರೀದಿಗೆ ದುಡ್ಡು ಕೊಟ್ಟರೂ ಕಾಯುವುದು ಕಡ್ಡಾಯ; ಜಾಗತಿಕ ಸಮಸ್ಯೆ ಜಗುಲಿಗೂ ಬಂತು