WhatsApp Business Messages Changes: ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಮುಂದೆ ಮೆಸೇಜ್ಗೂ ಶುಲ್ಕ; ಅ. 1ರಿಂದ ಹೊಸ ನಿಯಮ
ಅಕ್ಟೋಬರ್ 1ರಿಂದ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ನ ಸಂದೇಶ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಭಾರತದಲ್ಲಿ ಮೂಲ ದರ ಪ್ರತಿ ಸಂದೇಶಕ್ಕೆ 11.5 ಪೈಸೆಯಾಗಿದ್ದು, ಜಿಎಸ್‌ಟಿ ಸೇರಿಸಿದರೆ ಸುಮಾರು 14 ಪೈಸೆಯಾಗುತ್ತದೆ. ಆದರೆ ಸಾಮಾನ್ಯ ವಾಟ್ಸ್‌ಆ್ಯಪ್ ಬಳಕೆದಾರರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ಮುಖ್ಯಾಂಶಗಳು
- ವಾಟ್ಸ್‌ಆ್ಯಪ್‌ನಲ್ಲಿ 14 ಪೈಸೆ ಶುಲ್ಕ? ಅಸಲಿಗೆ ಯಾರಿಗೆ ಅನ್ವಯಿಸುತ್ತದೆ?
- ಅಕ್ಟೋಬರ್ 1ರಿಂದ ವಾಟ್ಸ್‌ಆ್ಯಪ್ ಬಿಸಿನೆಸ್‌ನಲ್ಲಿ ಏನು ಬದಲಾಗಲಿದೆ?
- ಸಾಮಾನ್ಯ ವಾಟ್ಸ್‌ಆ್ಯಪ್ ಬಳಕೆದಾರರು ಹಣ ಕೊಡಬೇಕೇ? ಸತ್ಯ ಇಲ್ಲಿದೆ!
ವಾಟ್ಸ್‌ಆ್ಯಪ್ (WhatsApp) ಬಳಸುವವರಿಗೆ ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಆದರೆ ಇದರಿಂದ ಸಾಮಾನ್ಯ ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು, ಕುಟುಂಬದವರು ಅಥವಾ ಪರಿಚಯಸ್ಥರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹೊಸ ಬದಲಾವಣೆ ಮುಖ್ಯವಾಗಿ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ವ್ಯವಹಾರಗಳಿಗೆ ಅನ್ವಯಿಸುತ್ತದೆ.
ಅಕ್ಟೋಬರ್ 1ರಿಂದ ಏನು ಬದಲಾಗಲಿದೆ?
ಇದುವರೆಗೆ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ಸಂಸ್ಥೆಗಳು, ಗ್ರಾಹಕರು ತಮ್ಮನ್ನು ಸಂಪರ್ಕಿಸಿದ ಬಳಿಕ ಆರಂಭವಾಗುವ 24 ಗಂಟೆಗಳ ಗ್ರಾಹಕ ಸೇವಾ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಬಹುದಾಗಿತ್ತು. ಗ್ರಾಹಕರ ಪ್ರಶ್ನೆಗೆ ಉತ್ತರಿಸುವುದು, ಆರ್ಡರ್ ಕುರಿತು ಮಾಹಿತಿ ನೀಡುವುದು ಅಥವಾ ವಿತರಣೆಯ ಮಾಹಿತಿ ನೀಡುವುದು ಇದರಲ್ಲಿ ಸೇರಿತ್ತು. ಅಕ್ಟೋಬರ್ 1ರಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. 24 ಗಂಟೆಗಳ ಗ್ರಾಹಕ ಸೇವಾ ಅವಧಿ ಮುಂದುವರಿದರೂ, ಆ ಅವಧಿಯಲ್ಲಿ ಕಳುಹಿಸುವ ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ವಿಧಿಸಲಾಗುತ್ತದೆ.
ಒಂದು ಸಂದೇಶಕ್ಕೆ ಎಷ್ಟು ಶುಲ್ಕ?
ಭಾರತದಲ್ಲಿ ಬಳಕೆ ಮಾಹಿತಿ ಹಾಗೂ ಸೇವಾ ಸಂದೇಶಗಳಿಗೆ ಮೂಲ ದರ ರೂ. 0.115, ಅಂದರೆ 11.5 ಪೈಸೆ ಎಂದು ಮೆಟಾ ಹೇಳಿದೆ. ಶೇ. 18 ಜಿಎಸ್‌ಟಿ ಸೇರಿಸಿದರೆ ಇದು ಸುಮಾರು 14 ಪೈಸೆ ಆಗುತ್ತದೆ. ಈ ಶುಲ್ಕವನ್ನು ಸಂದೇಶ ಸ್ವೀಕರಿಸುವ ಗ್ರಾಹಕರು ಅಲ್ಲ, ಸಂದೇಶ ಕಳುಹಿಸುವ ವ್ಯವಹಾರ ಕಂಪನಿ ಪಾವತಿಸಬೇಕು.
ಉದಾಹರಣೆಗೆ, ಒಂದು ಸಂಸ್ಥೆ 1,000 ಆರ್ಡರ್ ದೃಢೀಕರಣ ಅಥವಾ ವಿತರಣಾ ಮಾಹಿತಿ ಸಂದೇಶಗಳನ್ನು ಕಳುಹಿಸಿದರೆ, ಮೂಲ ದರದಲ್ಲಿ ರೂ. 115 ಶುಲ್ಕವಾಗುತ್ತದೆ. ಜಿಎಸ್‌ಟಿ ಸೇರಿಸಿದ ಬಳಿಕ ಮೊತ್ತ ಸುಮಾರು ರೂ. 135.70 ಆಗಬಹುದು.
ಮೊದಲ 1,000 ಸೇವಾ ಸಂದೇಶ ಉಚಿತ
ವ್ಯವಹಾರಗಳಿಗೆ ಸಂಪೂರ್ಣವಾಗಿ ಮೊದಲ ಸಂದೇಶದಿಂದಲೇ ಶುಲ್ಕ ವಿಧಿಸಲಾಗುವುದಿಲ್ಲ. ಪ್ರತಿ ವ್ಯವಹಾರ ದೂರವಾಣಿ ಸಂಖ್ಯೆಗೆ ಪ್ರತಿ ತಿಂಗಳು ಮೊದಲ 1,000 ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿದೆ. 1,000 ಸಂದೇಶಗಳ ಮಿತಿ ದಾಟಿದ ನಂತರದ ಸೇವಾ ಸಂದೇಶಗಳಿಗೆ ಅನ್ವಯಿಸುವ ದರದಂತೆ ಶುಲ್ಕ ವಿಧಿಸಲಾಗುತ್ತದೆ.
Apple Pay India: ಭಾರತಕ್ಕೆ ಬಂತು ಆ್ಯಪಲ್ ಪೇ; ಐಫೋನ್‌ನಲ್ಲೇ ಕಾರ್ಡ್ ಬಳಸಿ ಪಾವತಿ ಮಾಡಿ!
ಆರ್ಡರ್, ವಿತರಣಾ ಮಾಹಿತಿ ಕಳುಹಿಸಿದರೂ ಶುಲ್ಕ
ಹೊಸ ನಿಯಮದ ಪ್ರಮುಖ ಬದಲಾವಣೆಗಳಲ್ಲಿ ಇದೂ ಒಂದು. ಗ್ರಾಹಕರು ವಾಟ್ಸ್‌ಆ್ಯಪ್‌ನಲ್ಲಿ ಸಂಸ್ಥೆಯನ್ನು ಸಂಪರ್ಕಿಸಿದ 24 ಗಂಟೆಗಳ ಅವಧಿಯಲ್ಲೂ ಆರ್ಡರ್ ದೃಢೀಕರಣ, ವಿತರಣಾ ಮಾಹಿತಿ ಸೇರಿದಂತೆ ಬಳಕೆ ಮಾಹಿತಿ ಸಂದೇಶಗಳು ಇನ್ನು ಮುಂದೆ ಶುಲ್ಕಕ್ಕೆ ಒಳಪಡುತ್ತವೆ. ಈ ಸಂದೇಶಗಳಿಗೆ ಈ ಹಿಂದೆ 24 ಗಂಟೆಗಳ ಅವಧಿಯಲ್ಲಿ ಶುಲ್ಕವಿರಲಿಲ್ಲ.
ಒಟಿಪಿ ಸಂದೇಶಕ್ಕೂ ದರವಿದೆ
ಗ್ರಾಹಕರಿಗೆ ಕಳುಹಿಸುವ ದೃಢೀಕರಣ ಸಂದೇಶಗಳಿಗೂ ಪ್ರತ್ಯೇಕ ದರವಿದೆ. ಉದಾಹರಣೆಗೆ, ಲಾಗಿನ್ ಕೋಡ್ ಅಥವಾ ಒಟಿಪಿಯಂತಹ ಸಂದೇಶಗಳಿಗೆ ಭಾರತದಲ್ಲಿ ಪ್ರತಿ ಸಂದೇಶಕ್ಕೆ ರೂ. 0.115 ಮೂಲ ದರವಿದೆ. ಜಿಎಸ್‌ಟಿ ಸೇರಿಸಿದರೆ ಇದು ಸುಮಾರು 14 ಪೈಸೆಯಾಗುತ್ತದೆ.
ಇನ್ನು ಗ್ರಾಹಕರಿಗೆ ರಿಯಾಯಿತಿ, ಮಾರಾಟದ ಕೊಡುಗೆ ಅಥವಾ ಜಾಹೀರಾತಿನಂತಹ ಪ್ರಚಾರ ಸಂದೇಶಗಳಿಗೆ ಹೆಚ್ಚಿನ ದರವಿದೆ. ಇಂತಹ ಸಂದೇಶಗಳಿಗೆ ಪ್ರತಿ ತಲುಪಿದ ಸಂದೇಶಕ್ಕೆ ರೂ. 0.8631 ಮೂಲ ದರ ನಿಗದಿಯಾಗಿದ್ದು, ಜಿಎಸ್‌ಟಿ ಸೇರಿಸಿದರೆ ಸುಮಾರು ರೂ. 1.02 ಆಗುತ್ತದೆ.
ಈ ಬದಲಾವಣೆ ಸಾಮಾನ್ಯ ವಾಟ್ಸ್‌ಆ್ಯಪ್ ಆ್ಯಪ್‌ಗೆ ಮಾತ್ರವಲ್ಲ, ಸಣ್ಣ ವ್ಯಾಪಾರಿಗಳು ಬಳಸುವ ಪ್ರತ್ಯೇಕ ವಾಟ್ಸ್‌ಆ್ಯಪ್ ಬಿಸಿನೆಸ್ ಆ್ಯಪ್‌ಗೂ ಅನ್ವಯಿಸುವುದಿಲ್ಲ. ಮುಖ್ಯವಾಗಿ ದೊಡ್ಡ ಪ್ರಮಾಣದ ಗ್ರಾಹಕ ಸಂವಹನ ಮತ್ತು ಸ್ವಯಂಚಾಲಿತ ಸಂದೇಶಗಳಿಗಾಗಿ ಬಳಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ಗೆ ಇದು ಅನ್ವಯಿಸುತ್ತದೆ.
ವ್ಯವಹಾರ ನಡೆಸುವವರು ಏನು ಮಾಡಬೇಕು?
ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ಸಂಸ್ಥೆಗಳು ಸೆಪ್ಟೆಂಬರ್ 30ರೊಳಗೆ ಪಾವತಿ ವಿಧಾನವನ್ನು ತಮ್ಮ ಖಾತೆಯಲ್ಲಿ ಸೇರಿಸಬೇಕಾಗಿದೆ. ಪಾವತಿ ವಿಧಾನವನ್ನು ಹೊಂದಿಸದಿದ್ದರೆ ಅಕ್ಟೋಬರ್ 1ರಿಂದ ಶುಲ್ಕ ವಿಧಿಸಬೇಕಾದ ಸೇವಾ ಸಂದೇಶಗಳ ವಿತರಣೆ ನಿಲ್ಲಿಸಬಹುದು ಎಂದು ಮೆಟಾ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Wed, 30 September 26




