ನವದೆಹಲಿ: ಭಾರತದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಐಫೋನ್ ತಯಾರಕ ವಿಸ್ಟ್ರಾನ್ (Wistron) 2024ರೊಳಗೆ ಭಾರತದಿಂದ ಕಾಲ್ತೆಗೆಯಲಿದೆ. ಕೋಲಾರದಲ್ಲಿ ಐಫೋನ್ಗಳನ್ನು ತಯಾರಿಸುತ್ತಿದ್ದ ವಿಸ್ಟ್ರಾನ್ನ ಘಟಕವನ್ನು ಟಾಟಾ (Tata Electronics) ಖರೀದಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಸ್ಟ್ರಾನ್ ತನ್ನ ಐಫೋನ್ ಉತ್ಪಾದನೆಯನ್ನು ನಿಲ್ಲಿಸಸಲಿದೆ. ಭಾರತದಲ್ಲಿ ವಿಸ್ಟ್ರಾನ್ ಹೊಂದಿರುವ ಒಟ್ಟೂ ವ್ಯವಹಾರದಲ್ಲಿ ಕೋಲಾರದ ವಿಸ್ಟ್ರಾನ್ ಘಟಕ ಪ್ರಮುಖವಾದುದು. ಈ ಘಟಕದಲ್ಲಿ ಐಫೋನ್ 12 ಮತ್ತು ಐಫೋನ್ 14 ಮೊಬೈಲ್ಗಳನ್ನು ಅಸೆಂಬಲ್ ಮಾಡಲಾಗುತ್ತಿದೆ. ಈ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ವಿಸ್ಟ್ರಾನ್ ಭಾರತದಲ್ಲಿ ಐಫೋನ್ ತಯಾರಿಕೆಯಿಂದ ಹಿಂದಕ್ಕೆ ಸರಿಯಲಿದೆ. ವರದಿಗಳ ಪ್ರಕಾರ ಆ್ಯಪಲ್ ಉತ್ಪನ್ನಗಳ ದುರಸ್ತಿ ಮತ್ತು ಮೈಂಟೆನೆನ್ಸ್ ಸರ್ವಿಸ್ ಅನ್ನು ಮಾತ್ರ ಭಾರತದಲ್ಲಿ ವಿಸ್ಟ್ರಾನ್ ಮುಂದುವರಿಸಿಕೊಂಡು ಹೋಗಲಿದೆ. ಉಳಿದ ಎಲ್ಲಾ ಕಾರ್ಯಾಚರಣೆಯನ್ನು ವಿಸ್ಟ್ರಾನ್ ನಿಲ್ಲಿಸಲಿದೆ.
ಮುಂದಿನ ವರ್ಷದೊಳಗೆ ತನ್ನ ಭಾರತೀಯ ಘಟಕವನ್ನು ವಿಸರ್ಜಿಸುವಂತೆ ವಿಸ್ಟ್ರಾನ್ ಸಂಸ್ಥೆ ಭಾರತದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಹಾಗು ರಿಜಿಸ್ಟ್ರಾರ್ ಆಫ್ ಕಂಪನೀಸ್ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಬಹುದು ಎಂಬಂತಹ ವರದಿಗಳಿವೆ. ಕೆಲ ವರ್ಷಗಳ ಹಿಂದೆ ವಿಸ್ಟ್ರಾನ್ ಸಂಸ್ಥೆ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಯೋಜನೆ ಹಾಕಿಕೊಂಡಿತ್ತು. ಈಗ ಭಾರತದಲ್ಲಿ ಆ್ಯಪಲ್ ಉತ್ಪನ್ನಗಳಿಗೆ ಸರ್ವಿಸ್ ಮಾಡುವ ಕೆಲಸ ಬಿಟ್ಟು ಉಳಿದ ತನ್ನ ಎಲ್ಲಾ ಕಾರ್ಯಾಚರಣೆ ಹಾಗೂ ಯೋಜನೆಗಳನ್ನು ವಿಸ್ಟ್ರಾನ್ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಇದನ್ನೂ ಓದಿ: Mudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?
ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ಆ್ಯಪಲ್ನ ಮೂರು ಪ್ರಮುಖ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ವಿಸ್ಟ್ರಾನ್, ಪೆಗಾಟ್ರಾನ್ ಮತ್ತು ಫಾಕ್ಸ್ಕಾನ್ ಕಂಪನಿಗಳು ಅ್ಯಪಲ್ನ ಐಫೋನ್, ಐಪಾಡ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತವೆ. ಈ ಮೂರು ಕಂಪನಿಗಳು ತೈವಾನ್ನ ದೇಶದವೇ. ಆ್ಯಪಲ್ನ ಉತ್ಪನ್ನಗಳನ್ನು ಅತಿಹೆಚ್ಚು ತಯಾರಿಸುವುದು ಫಾಕ್ಸ್ಕಾನ್ ಸಂಸ್ಥೆಯೇ. ಚೀನಾದಲ್ಲಿ ಈ ಮೂರು ಕಂಪನಿಗಳ ಹೆಚ್ಚಿನ ಕಾರ್ಯಾಚರಣೆ ಇದೆ. 2020ರಲ್ಲೇ ವಿಸ್ಟ್ರಾನ್ ಕಂಪನಿ ಭಾರತದಿಂದ ತನ್ನ ವ್ಯವಹಾರಗಳನ್ನು ಕೈಬಿಡುವ ಇರಾದೆ ವ್ಯಕ್ತಪಡಿಸಿತ್ತು. ಅದರಂತೆ ಟಾಟಾ ಎಲೆಕ್ಟ್ರಾನಿಕ್ಸ್ ಜೊತೆ ಡೀಲ್ ಆಯಿತು.
ಕೋಲಾರದಲ್ಲಿರುವ ವಿಸ್ಟ್ರಾನ್ ಘಟಕ 44 ಎಕರೆ ಪ್ರದೇಶದಲ್ಲಿದೆ. ಇಲ್ಲಿ ಎಂಟು ಅಸೆಂಬ್ಲಿ ಲೈನ್ಗಳು ಇದ್ದು, ಐಫೋನ್ 12 ಮತ್ತು ಐಫೋನ್ 14 ಮೊಬೈಲ್ಗಳು ಅಸೆಂಬಲ್ ಆಗುತ್ತವೆ. 12,000 ಉದ್ಯೋಗಿಗಳು ಇರುವ ಬೃಹತ್ ಘಟಕ ಇದು. ಈ ಘಟಕದಲ್ಲಿ 2020ರಲ್ಲಿ ಕಾರ್ಮಿಕರ ಮುಷ್ಕರ ಕಾರಣಕ್ಕೆ ವಿಸ್ಟ್ರಾನ್ ಹೆಚ್ಚು ಸುದ್ದಿಯಲ್ಲಿತ್ತು.
ಇದನ್ನೂ ಓದಿ: Inspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್
ಆ್ಯಪಲ್ ಕಂಪನಿ ಉತ್ಪನ್ನಗಳ ತಯಾರಿಕೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಗುತ್ತಿಗೆ ಪಡೆದಿದೆ. ಹೊಸೂರಿನಲ್ಲಿ ಅದರ ಘಟಕ ಇದೆ. ವಿಸ್ಟ್ರಾನ್ ಘಟಕವನ್ನು ಖರೀದಿಸಿರುವ ಟಾಟಾ ಎಲೆಕ್ಟ್ರಾನಿಕ್ಸ್, ಅಲ್ಲಿ ಐಫೋನ್ 15 ಅನ್ನು ಅಸೆಂಬಲ್ ಮಾಡಬಹುದು ಎನ್ನಲಾಗಿದೆ. 12,000 ದಷ್ಟಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮೇಲ್ಮಟ್ಟದಲ್ಲಿರುವ ನಾಲ್ಕೈದು ಅಧಿಕಾರಿಗಳನ್ನು ತೆಗೆಯಲಾಗುತ್ತಿದ್ದು, ಟಾಟಾ ಎಲೆಕ್ಟ್ರಾನಿಕ್ಸ್ ಆಡಳಿತಕ್ಕೆ ಅನುಕೂಲವಾಗುವಂತಹ ಬೇಕಾದ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಮೂಲಗಳ ಪ್ರಕಾರ ವಿಸ್ಟ್ರಾನ್ನ ಘಟಕದಲ್ಲಿ 2,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು. ಮಧ್ಯಮ ಹಂತದ 400 ಮಂದಿ ಉದ್ಯೋಗಿಗಳೂ ಹೊರಹೋಗಬಹುದು ಎಂಬ ಸುದ್ದಿ ಇದೆ.
ಆ್ಯಪಲ್ ಸಂಸ್ಥೆ ತನ್ನ ಶೇ. 25ರಷ್ಟು ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವ ಗುರಿ ಇಟ್ಟುಕೊಂಡಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಗುತ್ತಿಗೆ ಸಿಗಬಹುದು. ಹೊಸೂರಿನಲ್ಲಿರುವ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಐಫೋನ್ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಕೋಲಾರದ ಘಟಕದಲ್ಲಿ ಐಫೋನ್ 15 ತಯಾರಿಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿರುವ ಪೆಗಾಟ್ರಾನ್ನ ಘಟಕವನ್ನೂ ಖರೀದಿಸಲು ಟಾಟಾ ಎಲೆಕ್ಟ್ರಾನಿಕ್ಸ್ ಯೋಜಿಸುತ್ತಿರುವ ಸುದ್ದಿಯೂ ಇದೆ.