Amitabh Kant: ಭಾರತ ಶೇ. 9-10 ಅಲ್ಲ, 11% ವೇಗದಲ್ಲಿ ಬೆಳೆಯಬಲ್ಲುದು: ನೀತಿ ಆಯೋಗ್ ಮಾಜಿ ಸಿಇಒ ಅಮಿತಾಭ್ ಕಾಂತ್

What India Thinks Today: ಮುಂದಿನ ದಿನಗಳಲ್ಲಿ ಭಾರತವು ಶೇ 9 ಅಥವಾ 10 ರ ದರದಲ್ಲಿ ಅಲ್ಲ, ಶೇಕಡಾ 11 ರ ದರದಲ್ಲಿ ಬೆಳೆಯಬಲ್ಲುದು ಎಂದು NITI ಆಯೋಗ್‌ನ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಟಿವಿ9 ನೆಟ್‌ವರ್ಕ್‌ನ ಗ್ಲೋಬಲ್ ಸಮ್ಮಿಟ್ ವಾಟ್ ಇಂಡಿಯಾ ಟುಡೇ ಥಿಂಕ್ಸ್‌ನ ಎರಡನೇ ಆವೃತ್ತಿಯಲ್ಲಿ ಜಿ20 ಶೆರ್ಪಾ ಅಮಿತಾಬ್ ಕಾಂತ್ ಪಾಲ್ಗೊಂಡು ಮಾತನಾಡಿದ್ದಾರೆ.

Amitabh Kant: ಭಾರತ ಶೇ. 9-10 ಅಲ್ಲ, 11% ವೇಗದಲ್ಲಿ ಬೆಳೆಯಬಲ್ಲುದು: ನೀತಿ ಆಯೋಗ್ ಮಾಜಿ ಸಿಇಒ ಅಮಿತಾಭ್ ಕಾಂತ್
ಅಮಿತಾಭ್ ಕಾಂತ್
Follow us
|

Updated on: Feb 26, 2024 | 11:44 AM

ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಶೇ. 9 ಅಥವಾ 10ರಷ್ಟು ಮಾತ್ರವಲ್ಲ, ಶೇ. 11ರಷ್ಟು ಆಗುವ ಸಾಮರ್ಥ್ಯ ಇದೆ ಎಂದು ನೀತಿ ಆಯೋಗ್​ನ ಮಾಜಿ ಸಿಇಒ ಮತ್ತು ಜಿ20 ಸಭೆಯ ಮಾಜಿ ಶೆರ್ಪಾ ಅಮಿತಾಭ್ ಕಾಂತ್ (Amitabh Kant) ಅಭಿಪ್ರಾಯಪಟ್ಟಿದ್ದಾರೆ. ಟಿವಿ0 ನೆಟ್ವರ್ಕ್ ನಿನ್ನೆ ಭಾನುವಾರ ಆಯೋಜಿಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆಯಲ್ಲಿ (What India Thinks Today Global Summit 2024) ಮಾತನಾಡುತ್ತಿದ್ದ ಅವರು, ಭಾರತದ ರಾಜ್ಯಗಳ ನಡುವಿನ ಪೈಪೋಟಿ ದೇಶದ ಆರ್ಥಿಕತೆ ಬೆಳವಣಿಗೆಯ ವೇಗ ಹೆಚ್ಚಿಸುತ್ತದೆ ಎಂದಿದ್ದಾರೆ. ದೇಶದ ಆರ್ಥಿಕತೆ ವೃದ್ಧಿ ಕಾಣಬೇಕಾದರೆ ಎಲ್ಲಾ ರಾಜ್ಯಗಳೂ ಬೆಳೆಯಬೇಕು. ಭಾರತದಲ್ಲಿ ಅಭಿವೃದ್ಧಿಗಾಗಿ ರಾಜ್ಯಗಳ ಮಧ್ಯೆ ಪೈಪೋಟಿ ನಡೆದಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮಾನದಂಡಗಳಲ್ಲಿ ರಾಜ್ಯಗಳ ಶ್ರೇಯಾಂಕ ಹೆಚ್ಚುತ್ತಿದೆ ಎಂಬುದನ್ನು ಅಮಿತಾಭ್ ಕಾಂತ್ ಎತ್ತಿ ತೋರಿಸಿದ್ದಾರೆ.

ನಾವು ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಶ್ರೇಯಾಂಕ ಆರಂಭಿಸಿದಾಗ ಮೊದಲ ವರ್ಷದಲ್ಲಿ ಗುಜರಾತ್ ಅಗ್ರಸ್ಥಾನ ಪಡೆಯಿತು. ಮುಂದಿನ ವರ್ಷ ಆಂಧ್ರಪ್ರದೇಶ ಗುಜರಾತ್ ಅನ್ನು ಹಿಂದಿಕ್ಕಿತು ಮತ್ತು ಅದರ ನಂತರದ ವರ್ಷ ತೆಲಂಗಾಣ ಇವೆರಡನ್ನೂ ಹಿಂದಿಕ್ಕಿತು. ಜಾರ್ಖಂಡ್ ಮತ್ತು ಛತ್ತೀಸ್‌ಗಢ ಹಾಗೂ ಪೂರ್ವ ಭಾಗದ ಖನಿಜ ಸಮೃದ್ಧ ರಾಜ್ಯಗಳು ನಾಲ್ಕನೇ ಐದನೇ ಸ್ಥಾನಕ್ಕೆ ಬರಲು ಪ್ರಾರಂಭಿಸಿದವು. ಕೆಲ ಕಾನೂನುಗಳನ್ನು ತೆಗೆದು ಪ್ರಗತಿಯ ಹಾದಿಗೆ ಈ ರಾಜ್ಯಗಳು ತೆರೆದುಕೊಂಡಿವೆ. ಈ ರೀತಿ ರಾಜ್ಯಗಳ ಪೈಪೋಟಿ ಮುಂದುವರಿದಿದರೆ ಭಾರತ ಶೇ. 9, 10 ಅಲ್ಲ, ಶೇ. 11ರ ದರದಲ್ಲಿ ಆರ್ಥಿಕ ವೃದ್ಧಿ ಕಾಣಬಲ್ಲುದು ಎಂದು ನೀತಿ ಆಯೋಗ್​ನ ಮಾಜಿ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಸುಭದ್ರ ಕಾನೂನು ಸುವ್ಯವಸ್ಥೆಯಿಂದ ಆರ್ಥಿಕ ವೃದ್ಧಿಗೆ ಅನುಕೂಲ: ಅಭಯ್ ಭೂತಡ

ಎರಡೂವರೆ ಕೋಟಿ ಜನರು ಬಡತನದಿಂದ ಮೇಲಕ್ಕೆ

ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ಎರಡೂವರೆ ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ವಿಶ್ವದಲ್ಲಿ ಬೇರೆಲ್ಲೂ ಇಷ್ಟು ಕಡಿಮೆ ಅವಧಿಯಲ್ಲಿ ಬಡತನ ನಿವಾರಣೆ ಆಗಿದ್ದಿಲ್ಲ ಎಂದು ಅಮಿತಾಭ್ ಕಾಂತ್ ತಿಳಿಸಿದ್ದಾರೆ.

ಅಮಿತಾಭ್ ಕಾಂತ್ ಮಾತನಾಡುತ್ತಿರುವ ಯೂಟ್ಯೂಬ್ ವಿಡಿಯೋ

2047 ರಲ್ಲಿ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ

2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. 2047ರೊಳಗೆ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕಾದರೆ, 2035 ರ ವೇಳೆಗೆ ನಾವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕು. ನಾವು ಮುಂದಿನ ಮೂರು ದಶಕಗಳವರೆಗೆ 9 ಅಥವಾ 10 ರಷ್ಟು ದರದಲ್ಲಿ ಬೆಳೆಯಬೇಕು ಎಂದು ಅಮಿತಾಭ್ ಕಾಂತ್ ಹೇಳಿದರು.

ಇದೀಗ ಭಾರತದ ಅತಿದೊಡ್ಡ ಶಕ್ತಿ ಎಂದರೆ ಅದರ ಯುವ ಜನಸಂಖ್ಯೆ. ಅವರ ಸರಾಸರಿ ವಯಸ್ಸು 28 ವರ್ಷ. 2047 ರ ಹೊತ್ತಿಗೆ, ಭಾರತದ ಸರಾಸರಿ ವಯಸ್ಸು 35 ವರ್ಷ ಇರುತ್ತದೆ. ಈ ಜನಸಂಖ್ಯಾ ಶಕ್ತಿ ಭಾರತದ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಅಪಾಯಕಾರಿಯಲ್ಲ: ಸಮಿಕ್ ರಾಯ್

ಭಾರತವು ಜಾಗತಿಕ ಬ್ರಾಂಡ್ ಮಾಡಬೇಕಾಗಿದೆ

ಭಾರತವು ಯುರೋಪಿನ 24 ದೇಶಗಳಿಗಿಂತ ದೊಡ್ಡದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಮಾಡಿರುವ ಬದಲಾವಣೆಗಳ ಬಗ್ಗೆ ಹೆಮ್ಮೆ ಪಡುವ ಅವಕಾಶ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಭಾರತದ ಈ ಹೆಮ್ಮೆಯನ್ನು ತೋರಿಸುತ್ತಾರೆ, ಅದರ ಪ್ರಯೋಜನವು ಅಲ್ಲಿ ವಾಸಿಸುವ ಭಾರತೀಯರಲ್ಲಿ ಹೆಮ್ಮೆಯ ರೂಪದಲ್ಲಿ ಗೋಚರಿಸುತ್ತದೆ ಎಂದು ಅಮಿತಾಭ್ ಕಾಂತ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮದಲ್ಲಿ ಹೇಳಿಕೊಂಡರು.

ನಾವು ಕಳೆದ 9.5 ವರ್ಷಗಳಲ್ಲಿ 80,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ರಸ್ತೆಗಳನ್ನು ನಿರ್ಮಿಸಿದ್ದೇವೆ, ಇದು ಭೂಮಿಯನ್ನು ಮೂರು ಬಾರಿ ಸುತ್ತುವುದಕ್ಕಿಂತ ಹೆಚ್ಚು. ನಾವು ಕುಡಿಯುವ ನೀರಿನ ಸಂಪರ್ಕ ನೀಡಿರುವ ಜನರ ಸಂಖ್ಯೆ ಬ್ರೆಜಿಲ್‌ನ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚು ಎಂದರು.

ಹಣ ಪಾವತಿ ಮಾಡುವುದು, ವಿಮೆ ಖರೀದಿಸುವುದು, ಷೇರುಗಳಲ್ಲಿ ಹೂಡಿಕೆ ಮಾಡುವುದು ಮತ್ತು ಸಂಪತ್ತು ಸೃಷ್ಟಿಯಂತಹ ಸೌಲಭ್ಯಗಳು ಭಾರತದಲ್ಲಿ 1 ನಿಮಿಷದಲ್ಲಿ ಮೊಬೈಲ್‌ನಲ್ಲಿ ಲಭ್ಯವಿದೆ. ಇಂಥದ್ದು ವಿಶ್ವದಲ್ಲಿ ಬೇರಾವ ದೇಶದಲ್ಲೂ ಸಾಧ್ಯವಾಗಿಲ್ಲ ಎಂದು ಆರ್ಥಿಕ ತಜ್ಞರೂ ಆಗಿರುವ ಅಮಿತಾಭ್ ತಿಳಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ