WTO: ಅಮೆರಿಕ, ಯೂರೋಪ್​ನಲ್ಲಿ ಕೃಷಿಗೆ ಸಬ್ಸಿಡಿ ನೀಡಬಹುದು, ಭಾರತದಲ್ಲಿ ನೀಡಬಾರದು ಎಂದರೆ ಹೇಗೆ?; ಡಬ್ಲ್ಯುಟಿಒ ಸಭೆಯಲ್ಲಿ ಪಟ್ಟುಬಿಡದ ಭಾರತ

|

Updated on: Mar 03, 2024 | 11:37 AM

India Unwavering Stand In WTO meeing: ವಿಶ್ವ ವ್ಯಾಪಾರ ಸಂಸ್ಥೆಯ ಅಬುಧಾಬಿ ಸಭೆಯಲ್ಲಿ ಹೆಚ್ಚಿನ ಅಂಶಗಳಿಗೆ ಒಮ್ಮತ ಸಿಗದೇ ಹಾಗೇ ಉಳಿದು ಹೋಗಿವೆ. ಬಡತನ ನಿವಾರಣೆಗೆಂದು ಭಾರತ ತನ್ನ ರೈತರಿಗೆ ನೀಡುತ್ತಿರುವ ಸಬ್ಸಿಡಿಯನ್ನು ಸಿರಿವಂತ ದೇಶಗಳು ವಿರೋಧಿಸುತ್ತಿವೆ. ಆ ದೇಶಗಳು ಸಬ್ಸಿಡಿ ಕೊಡಬಹುದು, ತಾವು ಕೊಡಬಾರದು ಎಂದರೆ ಹೇಗೆ ಎಂಬುದು ಭಾರತೀಯರ ಪ್ರಶ್ನೆಯಾಗಿದೆ.

WTO: ಅಮೆರಿಕ, ಯೂರೋಪ್​ನಲ್ಲಿ ಕೃಷಿಗೆ ಸಬ್ಸಿಡಿ ನೀಡಬಹುದು, ಭಾರತದಲ್ಲಿ ನೀಡಬಾರದು ಎಂದರೆ ಹೇಗೆ?; ಡಬ್ಲ್ಯುಟಿಒ ಸಭೆಯಲ್ಲಿ ಪಟ್ಟುಬಿಡದ ಭಾರತ
ಡಬ್ಲ್ಯುಟಿಒ
Follow us on

ಅಬುಧಾಬಿ, ಮಾರ್ಚ್ 3: ಮೊನ್ನೆ ಮುಕ್ತಾಯಗೊಂಡ ಡಬ್ಲ್ಯುಟಿಒ ಸಭೆ (WTO Ministerial Meeting) ಯಾವುದೇ ಮಹತ್ವದ ಅಂಶಗಳು ವ್ಯಕ್ತವಾಗಿಲ್ಲ. ಒಟ್ಟಾರೆ ನಾ ಬಿಡೆ, ನೀ ಕೊಡೆ ಎನ್ನುವಂತಹ ಸ್ಥಿತಿಯೊಂದಿಗೆ ಡಬ್ಲ್ಯುಟಿಒ ಸಭೆ ಮುಗಿದಿದೆ. ಭಾರತ ತನ್ನ ಸಾಫ್ಟ್ ಪವರ್​ನ ಒಂದು ತುಣಕನ್ನು ಈ ಸಭೆಯಲ್ಲಿ ತೋರಿದೆ. ಸಿರಿವಂತ ದೇಶಗಳಿಗೆ ಉಪಯೋಗವಾಗುವ ಒಪ್ಪಂದಗಳು ಅಥವಾ ಅಂಶಗಳಿಗೆ ಭಾರತ ಒಪ್ಪಿಲ್ಲ. ಈ ಡಬ್ಲ್ಯುಟಿಒ ಸಚಿವರ ಸಭೆಯಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಕೃಷಿ ಮತ್ತು ಮೀನುಗಾರಿಕೆ ವಿಚಾರಗಳಲ್ಲಿ ಸಭೆಯಲ್ಲಿ ಯಾವ ಸ್ಪಷ್ಟ ನಿರ್ಧಾರ ಬಂದಿಲ್ಲ. ಸಿರಿವಂತ ದೇಶಗಳ ಪಟ್ಟಿಗೆ ಭಾರತ ಬಗ್ಗಲಿಲ್ಲ ಎನ್ನುವುದು ಗಮನಾರ್ಹ. ಅದೇ ವೇಳೆ, ಇ-ಕಾಮರ್ಸ್​ಗೆ ಹಾಕಲಾಗುವ ಆಮದು ಸುಂಕದಲ್ಲಿ ವಿನಾಯಿತಿ ನೀಡಲಾಗುವ ಕ್ರಮವನ್ನು ಇನ್ನೂ ಎರಡು ವರ್ಷಗಳಿಗೆ ವಿಸ್ತರಿಸಬೇಕೆನ್ನುವ ಅಂಶಕ್ಕೆ ಭಾರತ ಸೇರಿದಂತೆ ಇತರ ದೇಶಗಳು ಒಪ್ಪಿಕೊಳ್ಳಬಹುದು ಎನ್ನಲಾಗಿದೆ.

ಅಮೆರಿಕ, ಯೂರೋಪ್ ದೇಶಗಳು ಸಬ್ಸಿಡಿ ನೀಡಬಹುದು; ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವಾ?

ಐದು ದಿನಗಳ ಕಾಲ ನಡೆದ ಡಬ್ಲ್ಯುಟಿಒ ಸಚಿವರ ಸಭೆಯಲ್ಲಿ ವಿವಿಧ ಅಂಶಗಳಲ್ಲಿ ಭಾರತದ ನಿಲುವು ಗಟ್ಟಿಯಾಗಿತ್ತು. ಕೃಷಿ ಕ್ಷೇತ್ರದಲ್ಲಿ ಭಾರತ ನೀಡುವ ಸಬ್ಸಿಡಿ ಮತ್ತು ಎಂಎಸ್​ಪಿ ಯೋಜನೆಗಳ ಬಗ್ಗೆ ಬೇರೆ ಕೆಲ ದೇಶಗಳು ತಕರಾಜು ವ್ಯಕ್ತಪಡಿಸಿದವು. ಥಾಯ್ಲೆಂಡ್ ಪ್ರತಿನಿಧಿ ತೀರಾ ವ್ಯಂಗ್ಯವಾಗಿ ಮಾತನಾಡಿದ್ದು, ಅದಕ್ಕೆ ಕೆಲ ಶ್ರೀಮಂತ ದೇಶಗಳು ಬೆಂಬಲ ವ್ಯಕ್ತಪಡಿಸಿದ ರೀತಿ ಇವೆಲ್ಲವೂ ಭಾರತವನ್ನು ಕೆರಳಿಸಿತು. ಭಾರತ ಪ್ರತಿಭಟಿಸಿತು. ಅದರ ಪರಿಣಾಮವಾಗಿ ಥಾಯ್ಲೆಂಡ್ ಸರ್ಕಾರ ತನ್ನ ಪ್ರತಿನಿಧಿಯನ್ನೇ ಬದಲಿಸಿತು.

ಇದನ್ನೂ ಓದಿ: ಭಾರತದ ಆಕ್ಷೇಪದ ಬಳಿಕ ಥಾಯ್ಲೆಂಡ್ ಪ್ರತಿನಿಧಿ ಡಬ್ಲ್ಯುಟಿಒದಿಂದ ಹೊರಕ್ಕೆ; ಆಕೆ ಭಾರತದ ಬಗ್ಗೆ ಆಡಿದ ಮಾತುಗಳಿವು…

ಭಾರತದ ಎಂಎಸ್​ಪಿ ಯೋಜನೆ ರೈತರ ಒಳಿತಿಗೆ ಮಾಡಿದ್ದಲ್ಲ, ಬದಲಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ತೋರಲು ಮಾಡಲಾಗಿದೆ ಎಂಬುದು ಥಾಯ್ಲೆಂಡ್ ಪ್ರತಿನಿಧಿ ಮಾಡಿದ ಆರೋಪದ ಸಾರಾಂಶ. ಥಾಯ್ಲೆಂಡ್ ಮಾತ್ರವಲ್ಲ ಹಲವು ಮುಂದುವರಿದ ದೇಶಗಳ ಧೋರಣೆಗಳೂ ಇದೇ ರೀತಿ ಇದ್ದವು.

ಯೂರೋಪ್ ಮತ್ತು ಅಮೆರಿಕದಲ್ಲಿ ದಿನಕ್ಕೆ 8,200 ಕೋಟಿ ರೂಗೂ ಹೆಚ್ಚು ಮೊತ್ತದ ಕೃಷಿ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಆದರೆ ಭಾರತಕ್ಕೆ ಈ ದೇಶಗಳು ಬುದ್ಧಿ ಹೇಳಲು ಹೊರಟಿವೆ ಎಂದು ಜಿಂದಾಲ್ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಅಫೇರ್ಸ್​ನಲ್ಲಿ ಪ್ರೊಫೆಸರ್ ಆಗಿರುವ ಮೋಹನ್ ಕುಮಾರ್ ಹೇಳುತ್ತಾರೆ.

ಉರುಗ್ವೆ ಸಭೆಯಲ್ಲಿ ಮೂರ್ಖತನ

1986ರಲ್ಲಿ ಉರುಗ್ವೆಯಲ್ಲಿ ನಡೆದ ಡಬ್ಲ್ಯುಟಿಒ ಸಭೆಯಲ್ಲಿ, ಒಂದು ಕೃಷಿ ಉತ್ಪನ್ನಕ್ಕೆ ನೀಡಲಾಗುವ ಸಬ್ಸಿಡಿ ಹಣವು, ಆ ಉತ್ಪನ್ನದ ಮೌಲ್ಯದ ಶೇ. 10ರಷ್ಟನ್ನು ಮೀರಬಾರದು ಎನ್ನುವ ಅಂಶ ಇತ್ತು. ಭಾರತ ಆಗ ಅದಕ್ಕೆ ಒಪ್ಪಿದ್ದು ಪ್ರಮಾದವಾಯಿತು. ಮತ್ತೆ ಅಂತಹ ತಪ್ಪುಗಳು ಆಗದಂತೆ ಭಾರತ ಎಚ್ಚರ ವಹಿಸುತ್ತಿದೆ ಎಂದು ಪ್ರೊಫೆಸರ್ ಶನಿವಾರ ನಡೆದ ವಿಚಾರ ಸಂಕಿರಣವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ

ಪರಿಣಿತಿ ಕೊರತೆ?

ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಐಟಿ ಮತ್ತು ಐಟಿ ಸರ್ವಿಸ್ ಹೊರತುಪಡಿಸಿದರೆ ಭಾರತದ ಸ್ಥಾನ ಬಹಳ ದುರ್ಬಲವಾಗಿದೆ. ಹೀಗಾಗಿ, ಡಬ್ಲ್ಯುಟಿಒ ಸಭೆಗಳಲ್ಲಿ ಭಾರತ ರಕ್ಷಣಾತ್ಮಕ ಧೋರಣೆ ತಳೆಯುತ್ತದೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ವ್ಯಾಪಾರ ಪರಿಣಿತಿ ಕಡಿಮೆ. ಈ ವಿಚಾರದಲ್ಲಿ ಭಾರತದ ಅಧಿಕಾರಿಗಳಿಗೆ ತರಬೇತಿ ಕೊಡುವ ಅವಶ್ಯಕತೆ ಇದೆ ಎಂದು ಚೀನಾಗೆ ಮಾಜಿ ರಾಯಭಾರಿಯಾಗಿದ್ದ ಗೌತಮ್ ಬಂಬವಾಲೆ ಹೇಳಿದ್ದಾರೆ. ಶ್ರೀಲಂಕಾದ ಸಂಶೋಧನಾ ಕ್ಷೇತ್ರದಲ್ಲಿರುವ ಅಸಂಕಾ ವಿಜೆಸಿಂಘೆ ಕೂಡ ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ