e-shram: ಈ ನಿಯಮಗಳ ಪಾಲಿಸದಿದ್ದಲ್ಲಿ ಇ-ಶ್ರಮ್ ನೋಂದಣಿಯೇ ರದ್ದಾಗಬಹುದು
ಇಲ್ಲಿರುವ ನಿಯಮಾವಳಿಗಳ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದಲ್ಲಿ ಇ- ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ರದ್ದಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಬೇಕು.
ಇ- ಶ್ರಮ್ (e-shram) ಎಂಬುದು ಅಸಂಘಟಿತ ವಲಯವನ್ನು ಸಂಘಟಿತಗೊಳಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ತೆಗೆದುಕೊಂಡ ಉಪಕ್ರಮ. ಈಚೆಗೆ ಈ ಪ್ಲಾಟ್ಫಾರ್ಮ್ ಘೋಷಣೆ ಮಾಡಿರುವಂತೆ, 16ರಿಂದ 56 ವರ್ಷದ 20 ಕೋಟಿಯಷ್ಟು ವಿವಿಧ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಆಗಿದ್ದಾರೆ. 2021ರಲ್ಲಿ ಆರಂಭವಾದ ಈ ಉಪಕ್ರಮವು ಇ-ಶ್ರಮ್ನಲ್ಲಿ ಡೇಟಾ ಹಾಗೂ ಗುರುತು ಸಂಗ್ರಹಿಸುತ್ತದೆ. ಇದರ ಮೂಲಕ ಸರ್ಕಾರವು ವಿವಿಧ ವಲಯಗಳಿಗೆ ಅನುಕೂಲ ಆಗುವಂತೆ ಯೋಜನೆ, ನಿರ್ಮಾಣ, ವಿವಿಧ ಬೆನಿಫಿಟ್ಗಳ ವಿತರಣೆ ಮಾಡುತ್ತದೆ. ಇ-ಶ್ರಮ್ ಕಾರ್ಡ್ಗೆ ನೋಂದಣಿಯನ್ನು ಪೋರ್ಟಲ್ನಲ್ಲೇ ಮಾಡಲಾಗುತ್ತದೆ. ಯಶಸ್ವಿಯಾಗಿ ಕಾರ್ಡ್ ಸೃಷ್ಟಿಸುವುದಕ್ಕೆ ವಿವಿಧ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಯಾರು ವಿಶ್ವಾಸಾರ್ಹವಾದ ಮಾಹಿತಿಯನ್ನು ಭರ್ತಿ ಮಾಡುತ್ತಾರೋ ಅವರಿಗೆ ಮಾತ್ರ ಕಾರ್ಡ್ಗಳನ್ನು ವಿತರಿಸಲಾಗುತ್ತದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಈ ಬಗ್ಗೆ ತನಿಖೆ ಆಗಬಹುದು. ಈ ಕಾರ್ಡ್ ಯೂನಿವರ್ಸಲ್ ಅಕೌಂಟ್ ನಂಬರ್ ಹೊಂದಿರುತ್ತದೆ ಮತ್ತು ಪ್ರತಿನಿಧಿಸುತ್ತದೆ. ಇದು ಶಾಶ್ವತವಾದ ದಾಖಲೆಯಾಗಿದ್ದು, ಜೀವಮಾನವಿಡೀ ಸಿಂಧುವಾಗಿರುತ್ತದೆ.
ಆದರೆ, ಕೆಲವು ಸಮಸ್ಯೆಗಳನ್ನು ಮಾಡಿಕೊಂಡರೆ ನೋಂದಣಿಯೇ ರದ್ದು ಅಥವಾ ತಿರಸ್ಕೃತವಾಗಬಹುದು. ನೋಂದಣಿ ಪ್ರಕ್ರಿಯೆಯಲ್ಲಿ ಆ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಿಮ್ಮ ವೃತ್ತಿಯು ರಾಷ್ಟ್ರೀಯ ಉದ್ಯೋಗ ವರ್ಗೀಕರಣದಲ್ಲಿ ಪಟ್ಟಿಯಾಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಏಕೆಂದರೆ ಯಾವ ಉದ್ಯೋಗ ಮಾಡುತ್ತಿದ್ದಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ಇದರಲ್ಲಿ ಕೃಷಿ, ಮನೆ ಮತ್ತು ಕುಟುಂಬ, ಬಟ್ಟೆ, ನಿರ್ಮಾಣ, ಉತ್ಪಾದನೆ ಮುಂತಾದವು ಒಳಗೊಳ್ಳುತ್ತವೆ. ನೋಂದಣಿ ರದ್ದಾಗಲು ಮತ್ತೊಂದು ಕಾರಣ ಏನೆಂದರೆ, ವಿಶ್ವಾಸಕ್ಕೆ ಅರ್ಹ ಅಲ್ಲದ ಮಾಹಿತಿಯೊಂದಿಗೆ ಅರ್ಜಿಯನ್ನು ತುಂಬುವುದು. ಉದ್ಯೋಗ, ವಾರ್ಷಿಕ ಆದಾಯ, ಬ್ಯಾಂಕ್ ಮಾಹಿತಿ ಇವೆಲ್ಲವನ್ನೂ ಸರಿಯಾಗಿ ಭರ್ತಿ ಮಾಡಬೇಕು. ಈ ಮೂಲಕ ಬೇರೆಯವರ ಕ್ರೆಡೆನ್ಷಿಯಲ್ ಬಳಸಿ ಫೋರ್ಜರಿ ಮಾಡುವುದನ್ನು ತಪ್ಪಿಸಬಹುದು. ಅಂದಹಾಗೆ ರದ್ದು ಮಾತ್ರ ಅಲ್ಲ, ಈ ರೀತಿ ಮಾಡುವುದರಿಂದ ವಂಚನೆಯ ಪ್ರಕರಣ ಕೂಡ ದಾಖಲಿಸಬಹುದು.
ರಾಷ್ಟ್ರೀಯ ಇ-ಶ್ರಮ್ ಪೋರ್ಟಲ್ ಅನ್ನು ಆರಂಭಿಸಿರುವುದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ. ದೇಶದ ಅಸಂಘಟಿತ ಕಾರ್ಮಿಕರ ಡೇಟಾಬೇಸ್ ನಿರ್ಮಿಸುವ ಉದ್ದೇಶದಿಂದ ಆರಂಭಿಸಿದೆ. ಅಸಂಘಟಿತ ಕಾರ್ಮಿಕರು ಯಾರು ಎಂಬ ಬಗ್ಗೆ ಕೂಡ ಸಚಿವಾಲಯವು ಸ್ಪಷ್ಟಪಡಿಸಿದೆ. ಅದರ ಪ್ರಕಾರ, ಯಾವ ಕಾರ್ಮಿಕರು ಮನೆಯ ಮೇಲೆ ಆಧಾರಪಟ್ಟಿದ್ದು, ಸ್ವ-ಉದ್ಯೋಗಿಗಳಾಗಿ ಅಥವಾ ಕೂಲಿ ಆಧಾರದಲ್ಲಿ ಕೆಲಸ ಮಾಡುತ್ತಾರೋ ಅಂಥವರನ್ನು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ. ಇದಕ್ಕಿಂತ ಹೆಚ್ಚಾಗಿ, ಯಾವುದೇ ವ್ಯಕ್ತಿ ಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೌಕರರ ರಾಜ್ಯ ವಿಮಾ ನಿಗಮ (ESIC), ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರಾಗಿ ಇರುವುದಿಲ್ಲವೋ ಅಂಥವರನ್ನೂ ಅಸಂಘಟಿತ ಕಾರ್ಮಿಕರು ಎನ್ನಲಾಗುತ್ತದೆ.
ಇದನ್ನೂ ಓದಿ: ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗಾಗಿ ಇ-ಶ್ರಮ್ ಪೋರ್ಟಲ್: ಸರ್ಕಾರಿ ಯೋಜನೆಗಳನ್ನು ಒದಗಿಸಲು ಮಹತ್ವದ ಕ್ರಮ