Zomato Controversial Advertisement: ವಿವಾದ ಹುಟ್ಟುಹಾಕಿದ್ದ ‘ಮಹಾಕಾಲ್’ ಜಾಹೀರಾತು ಹಿಂಪಡೆದ ಝೊಮೊಟೊ
ಬಾಲಿವುಡ್ ನಟ ಹೃತಿಕ್ ರೋಷನ್ ಅವರು ನಟಿಸಿದ್ದ ಝೊಮೊಟೊ ಆಹಾರ ವಿತರಣಾ ವೇದಿಕೆಯ 'ಮಹಾಕಾಲ್' ಜಾಹೀರಾತಿಗೆ ಭಾರೀ ಟೀಕಿ ವ್ಯಕ್ತವಾಗುತ್ತಿದ್ದಂತೆ, ವೇದಿಕೆಯು ಜಾಹೀರಾತನ್ನು ಸ್ಥಗಿತಗೊಳಿಸಿ ಜನರ ಭಾವನೆಯನ್ನು ನೋಯಿಸಿದ್ದಕ್ಕಾಗಿ ಕ್ಷಮೆಯಾಚಿಸಿದೆ.
ಬಾಲಿವುಡ್ ನಟ ಹೃತಿಕ್ ರೋಷನ್ ಅವರು ನಟಿಸಿದ್ದ ಝೊಮೊಟೊ ಆಹಾರ ವಿತರಣಾ ವೇದಿಕೆಯ ‘ಮಹಾಕಾಲ್’ ಜಾಹೀರಾತಿಗೆ ಭಾರೀ ಟೀಕಿ ವ್ಯಕ್ತವಾಗುತ್ತಿದ್ದಂತೆ, ವೇದಿಕೆಯು ಜಾಹೀರಾತನ್ನು ಸ್ಥಗಿತಗೊಳಿಸಿ ಜನರ ಭಾವನೆಯನ್ನು ನೋಯಿಸಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಅರ್ಚಕರು ಮತ್ತು ಭಕ್ತರು ನಟ ಹೃತಿಕ್ ಅವರು ನಟಿಸಿದ್ದ ‘ಮಹಾಕಾಲ್’ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ, ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಝೊಮೊಟೊ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಜಾಹೀರಾತಿನಲ್ಲಿ, ಹೃತಿಕ್ ರೋಷನ್ ಅವರು ಉಜ್ಜಯಿನಿಯಲ್ಲಿ “ಥಾಲಿ” ಸೇವನೆ ಮಾಡಬೇಕು ಎಂದು ಭಾವಿಸುತ್ತಾರೆ. ಇದಕ್ಕಾಗಿ ಅವರು ಮಹಾಕಾಲ್ನಿಂದ ಆರ್ಡರ್ ಮಾಡುತ್ತಾರೆ. ಈ ಜಾಹೀರಾತನ್ನು ಗಮನಿಸಿದ ಮಹಾಕಾಲ್ ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಉಜ್ಜಯಿನಿಯಲ್ಲಿರುವ ಮಹಾಕಾಲ್ ಶಿವನ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
“ಮಹಾಕಲ್ ದೇವಸ್ಥಾನವು ಯಾವುದೇ ಥಾಲಿಯನ್ನು ನೀಡುವುದಿಲ್ಲ. ಈ ಜಾಹೀರಾತಿಗಾಗಿ ಜೊಮಾಟೋ ಮತ್ತು ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು. ಕಂಪೆನಿಯು ತನ್ನ ಜಾಹೀರಾತಿನಲ್ಲಿ ಮಹಾಕಾಲ್ ದೇವಾಲಯದ ಬಗ್ಗೆ ತಪ್ಪು ಪ್ರಚಾರವನ್ನು ಮಾಡಿದೆ. ಕಂಪನಿಯು ಅಂತಹ ಜಾಹೀರಾತುಗಳನ್ನು ನೀಡುವ ಮೊದಲು ಯೋಚಿಸಬೇಕು” ಎಂದು ಮಹಾಕಾಲ್ ದೇವಾಯಲದ ಅರ್ಚಕ ಮಹೇಶ್ ಶರ್ಮಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ವಿವಾದವನ್ನು ಪರಿಶೀಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಜಾಹೀರಾತಿಗೆ ಟೀಕೆ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಝೊಮೊಟೊ, ಜನರ ಭಾವನೆಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿದೆ. “ವೀಡಿಯೊವು ಪ್ಯಾನ್ ಇಂಡಿಯಾ ಅಭಿಯಾನದ ಭಾಗವಾಗಿದೆ, ಇದಕ್ಕಾಗಿ ನಾವು ಪ್ರತಿ ನಗರದಲ್ಲಿನ ಜನಪ್ರಿಯತೆಯ ಆಧಾರದ ಮೇಲೆ ಉನ್ನತ ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಅವುಗಳ ಉನ್ನತ ಭಕ್ಷ್ಯಗಳನ್ನು ಗುರುತಿಸಿದ್ದೇವೆ. ಉಜ್ಜಯಿನಿಯಲ್ಲಿ ಪ್ರಚಾರಕ್ಕಾಗಿ ಆಯ್ಕೆಮಾಡಿದ ರೆಸ್ಟೋರೆಂಟ್‌ಗಳಲ್ಲಿ ಮಹಾಕಾಲ್ ರೆಸ್ಟೋರೆಂಟ್ (ಮಹಾಕಾಲ್ ಎಂದು ಸರಳೀಕರಿಸಲಾಗಿದೆ) ಒಂದಾಗಿದೆ. ಈ ಜಾಹೀರಾತು ಪೂಜ್ಯ ಮಹಾಕಾಳೇಶ್ವರ ದೇವಸ್ಥಾನದ್ದಲ್ಲ. ಮಹಾಕಾಲ್ ರೆಸ್ಟೋರೆಂಟ್ ಉಜ್ಜಯಿನಿಯಲ್ಲಿ ನಮ್ಮ ಉನ್ನತ ಪ್ರಮಾಣದ ರೆಸ್ಟೋರೆಂಟ್ ಪಾಲುದಾರರಲ್ಲಿ ಒಂದಾಗಿದೆ. ನಾವು ಅವರ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇವೆ. ಉಜ್ಜಯಿನಿಯ ಜನರು ಮತ್ತು ಪ್ರಶ್ನೆಯಲ್ಲಿರುವ ಜಾಹೀರಾತು ಇನ್ನು ಮುಂದೆ ಚಾಲ್ತಿಯಲ್ಲಿರುವುದಿಲ್ಲ. ಯಾರ ನಂಬಿಕೆ ಮತ್ತು ಭಾವನೆಗಳನ್ನು ಎಂದಿಗೂ ನೋಯಿಸಬಾರದು ಎಂಬ ಉದ್ದೇಶಕ್ಕಾಗಿ ನಾವು ನಮ್ಮ ಪ್ರಾಮಾಣಿಕ ಕ್ಷಮೆಯನ್ನು ಯಾಚಿಸುತ್ತಿದ್ದೇವೆ”ಎಂದು ಟ್ವಿಟರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ