ಕೇರಳ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ; ಅಪರಾಧಿಗೆ ಮರಣದಂಡನೆ

Aluva Child rape case: ಕಳೆದ ವಾರ ಕೊಚ್ಚಿಯ ಪೋಕ್ಸೊ ನ್ಯಾಯಾಲಯವು ಆರೋಪಿ ಅಶ್ವಕ್ ಆಲಂ (28) ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ IPC ಸೆಕ್ಷನ್ 302, 376A ಮತ್ತು 297 ಮತ್ತು POCSO ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು.

ಕೇರಳ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ; ಅಪರಾಧಿಗೆ ಮರಣದಂಡನೆ
ಅಶ್ವಕ್ ಆಲಂ
Follow us
ರಶ್ಮಿ ಕಲ್ಲಕಟ್ಟ
|

Updated on: Nov 14, 2023 | 3:02 PM

ಆಲುವಾ ನವೆಂಬರ್14:   ಜುಲೈ ತಿಂಗಳಲ್ಲಿ ಕೇರಳದ (Kerala) ಎರ್ನಾಕುಲಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದಲ್ಲಿ (Aluva  rape murder case) ತಪ್ಪಿತಸ್ಥನಾಗಿರುವ ಬಿಹಾರದ ವ್ಯಕ್ತಿಯೊಬ್ಬನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ವಿಶೇಷ ನ್ಯಾಯಾಲಯವು ಇಂದು (ಮಂಗಳವಾರ) ಮರಣದಂಡನೆ ವಿಧಿಸಿದೆ.  ಜುಲೈ 28 ರಂದು ಆಲುವಾದಲ್ಲಿ ನಡೆದ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಕಳೆದ ವಾರ ಕೊಚ್ಚಿಯ ಪೋಕ್ಸೊ ನ್ಯಾಯಾಲಯವು ಆರೋಪಿ ಅಶ್ವಕ್ ಆಲಂ (28) ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ IPC ಸೆಕ್ಷನ್ 302, 376A ಮತ್ತು 297 ಮತ್ತು POCSO ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು.

ಘಟನೆ ನಡೆದು ಕೇವಲ 110 ದಿನಗಳ ನಂತರ ಪ್ರಕರಣದ ತೀರ್ಪು ಬಂದಿದೆ.30 ದಿನಗಳಲ್ಲಿ ತನಿಖೆ ಪೂರ್ಣಗೊಂಡಿದ್ದುಮುಂದಿನ 60 ದಿನಗಳಲ್ಲಿ ವಿಚಾರಣೆಯನ್ನು ಮಾಡಲಾಗಿತ್ತು.

ವಲಸೆ ಕಾರ್ಮಿಕ ಅಶ್ವಕ್ ಆಲಂಗೆ ವಿಶೇಷ POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶ ಕೆ ಸೋಮನ್ ಅತೀ ಕಠಿಣ ಶಿಕ್ಷೆ  ನೀಡಿದ್ದಾರೆ. ದೇಶಾದ್ಯಂತ ಮಕ್ಕಳ ದಿನಾಚರಣೆಯಂದೇ ಆತನಿಗೆ ಶಿಕ್ಷೆಯನ್ನು ಘೋಷಿಸಲಾಗಿದೆ. POCSO ಕಾಯಿದೆಯ 11 ನೇ ವಾರ್ಷಿಕೋತ್ಸವವೂ ಇದೇ ದಿನ.

ನವೆಂಬರ್ 4 ರಂದು ಆಲಂಗೆ ಶಿಕ್ಷೆ ವಿಧಿಸಿದಾಗ ಸಂತ್ರಸ್ತೆಯ ಪೋಷಕರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣವು ಅಪರೂಪದಲ್ಲಿ ಅಪರೂಪ ವರ್ಗಕ್ಕೆ ಸೇರುತ್ತದೆ ಮತ್ತು ಆದ್ದರಿಂದ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ಚಾರ್ಜ್ ಶೀಟ್‌ನಲ್ಲಿ ಎಲ್ಲಾ 16 ಅಪರಾಧಗಳಲ್ಲಿ ಆಲಂ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿತ್ತು.

16ರಲ್ಲಿ ಐದು ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ಈ ಹಿಂದೆ ಹೇಳಿತ್ತು.

ಬಿಹಾರದ ವಲಸೆ ಕಾರ್ಮಿಕರ ಪುತ್ರಿಯಾಗಿದ್ದ ಬಾಲಕಿಯನ್ನು ಆಕೆಯ ಕುಟುಂಬದ ಬಾಡಿಗೆ ಮನೆಯಿಂದ ಅಪಹರಿಸಿದ್ದ ಆಲಂ ಆಕೆಯ ಮೇಲೆ ಅತ್ಯಾಚಾರವೆಸಗಿದ ನಂತರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಗೋಣಿಚೀಲದಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚಿದ್ದರು. ಆಲಂ ಈ ಹಿಂದೆಯೂ ಇತರ ಪೋಕ್ಸೊ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಕೇರಳ ಪೊಲೀಸರು ಹೇಳಿದ್ದಾರೆ.

ಮಕ್ಕಳ ದಿನಾಚರಣೆಯಂದು (ನವೆಂಬರ್ 14) ಬಂದಿರುವ ತೀರ್ಪು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಎಲ್ಲರಿಗೂ ಎಚ್ಚರಿಕೆ ನೀಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ಸರ್ಕಾರದ ಸಚಿವಾಲಯಕ್ಕೆ ಬಾಂಬ್​​​ ಬೆದರಿಕೆ

ಆ ಮಗುವಿನ ಮೇಲೆ ಪೈಶಾಚಿಕ ಕೃತ್ಯವೆಸಗಲಾಗಿದೆ. ದೂರು ನೀಡಿದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರವು ಬಾಲಕಿಯ ಕುಟುಂಬಕ್ಕೆ ಎಲ್ಲಾ ರಕ್ಷಣೆ ಮತ್ತು ನೆರವನ್ನು ಖಾತ್ರಿಪಡಿಸಿದೆ ಈ ರೀತಿಯ ದೌರ್ಜನ್ಯವನ್ನು ನಾಗರಿಕ ಸಮಾಜವು ಸಹಿಸುವುದಿಲ್ಲ. ಈ ರೀತಿಯ ಅಪರಾಧ ಎಸಗುವವರನ್ನು ಪ್ರತ್ಯೇಕಿಸಲು ಸಮಾಜ ಸಿದ್ಧವಾಗಬೇಕು ಎಂದು ಪಿಣರಾಯಿ ಹೇಳಿದ್ದಾರೆ.

ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ ಆರ್ ಅಜಿತ್ ಕುಮಾರ್ ಮಾತನಾಡಿ, ಅಪರಾಧಿ ದೆಹಲಿ ಮತ್ತು ಬಿಹಾರದಲ್ಲಿ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.ಹಾಗಾಗಿ ಆತ ಸಾಮಾನ್ಯ ಅಪರಾಧಿ ಎಂಬುದನ್ನು ತೋರಿಸುತ್ತದೆ. ಅಂತಹ ವ್ಯಕ್ತಿಗಳು ಅಪರಾಧಗಳಲ್ಲಿ ತೊಡಗಿಸಿಕೊಂಡಾಗ, ಅವರ ಚಲನವಲನದ ಮೇಲೆ ನಿಗಾ ಇಡಲು ನಮಗೆ ಒಂದು ವ್ಯವಸ್ಥೆ ಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ