Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಮಾದರಿಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಕಿಡ್ನಾಪ್

ಇದು ಡಿ ಗ್ಯಾಂಗ್​ನಿಂದ ನಡೆದ ರೇಣುಕಾಸ್ವಾಮಿ ಮಾದರಿಯಲ್ಲೇ ನಡೆದ ಕಿಡ್ನಾಪ್. ವ್ಯಕ್ತಿಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಅಪಹರಣ ಮಾಡಿ ಕರೆದೊಯ್ದ ಖದೀಮರು, ಬೆತ್ತಲೆಗೊಳಿಸಿ ಕ್ರಿಕೆಟ್ ಬ್ಯಾಟ್​ನಿಂದ ಹಲ್ಲೆ ಮಾಡಿದರು. ಅಷ್ಟೇ ಅಲ್ಲ, ಅದನ್ನ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡರು. ಜೊತೆಗೆ ಆತನ ಪ್ರಾಣಕ್ಕೆ 50 ಲಕ್ಷ ಬಾಜಿ ಕಟ್ಟಿದರು. ಕೊನೆಗೆ 5 ಲಕ್ಷ ಕೈ ಸೇರ್ತಿದ್ದಂತೆ ಆತನನ್ನ ಬಿಟ್ಟು ಕಳುಹಿಸಿದರು. ಹಾಗಾದ್ರೆ ಈ ಕಿಡ್ನಾಪ್ ಕಹಾನಿಯ ಅಸಲಿಯತ್ತೇನು? ಸ್ನೇಹಿತನೇ ಹೆಣೆದ ಬಲೆ ಎಂಥಾದ್ದು? ಈ ಸ್ಟೋರಿ ಓದಿ.

ರೇಣುಕಾಸ್ವಾಮಿ ಮಾದರಿಯಲ್ಲೇ  ಬೆಂಗಳೂರಿನಲ್ಲಿ ಮತ್ತೊಂದು ಕಿಡ್ನಾಪ್
ರೇಣುಕಾಸ್ವಾಮಿ ಮಾದರಿಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಕಿಡ್ನಾಪ್
Follow us
ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 10:08 PM

ಬೆಂಗಳೂರು, ಸೆ.05: ಕಳೆದ ಆಗಸ್ಟ್ 17 ರ ಮಧ್ಯಾಹ್ನ 12 ಗಂಟೆಯ ಸುಮಾರು ಶ್ರೀರಾಂಪುರ(Srirampura)ದ ಮೊಹಮ್ಮದ್ ಮೂಸಾ ಎಂಬಾತನ ಮನೆ ಬಳಿ ಆಗಮಿಸಿದ್ದ ನವೀನ್ ಎಂಬಾತ, ‘ನಾನು ನಿಮ್ಮ ಪಕ್ಕದ ಮನೆಯವನಾದ ಸುರೇಶ್​ನ ಪರಿಚಯಸ್ಥ, ಅವರೇ ನಿಮ್ಮನ್ನ ಭೇಟಿ ಮಾಡಲು ಹೇಳಿದ್ದರು ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನಿಮ್ಮಿಂದ ನಮ್ಮ ಮನೆಯ ರಿನೋವೇಶನ್ ಆಗಬೇಕು ಎಂದು ತಾನು ತಂದಿದ್ದ ಸ್ವಿಫ್ಟ್ ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾನೆ.

ಬೆತ್ತಲೆಗೊಳಿಸಿ ಕ್ರಿಕೆಟ್ ಬ್ಯಾಟ್​ನಿಂದ ಮನಬಂದಂತೆ ಥಳಿಸಿ ಮೊಬೈಲ್​ನಲ್ಲಿ ಚಿತ್ರೀಕರಣ

ಕಾರಿನಲ್ಲಿ ಕೂರಿಸಿಕೊಂಡು ಅಂದ್ರಹಳ್ಳಿಯ ನಿವೇಶನವನ್ನು ನೋಡಲು ಹೊರಟಿದ್ದಾರೆ‌‌‌‌. ಕಾರಿನಲ್ಲಿ ಅದಾಗಲೇ ಮೂರು ಜನ ಇದ್ದು, ಹೋಗುವ ದಾರಿ ಮಧ್ಯೆ ಸುಂಕದಕಟ್ಟೆಯ ಹತ್ತಿರ ಇನ್ನೂ ಇಬ್ಬರು ಹತ್ತಿಕೊಂಡಿದ್ದಾರೆ. ಸ್ವಲ್ಪ ದೂರು ಹೋಗ್ತಿದ್ದಂತೆ ಮೂಸನ ಮೊಬೈಲ್ ಹಾಗೂ ಕನ್ನಡಕ ಕಿತ್ತುಕೊಂಡ ಖದೀಮರು, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನಂತರ ಚಿಕ್ಕ ಬಾಣಾವರ ಕಡೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಬಳಿಕ ಅಲ್ಲಿಂದ ಬಿಡದಿಗೆ ಕರೆದುಕೊಂಡು ಹೋಗ್ತಿದ್ದಂತೆ ದಾರಿಯಲ್ಲಿ ಮತ್ತೆ ಇನ್ನಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಬಂದವರೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೈಮೇಲಿನ ಎಲ್ಲಾ ಬಟ್ಟೆಗಳನ್ನು ಬಿಚ್ಚಿಸಿ, ಬೆತ್ತಲೆಗೊಳಿಸಿ ಕ್ರಿಕೆಟ್ ಬ್ಯಾಟ್​ನಿಂದ ಮನಬಂದಂತೆ ಥಳಿಸಿ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಜೂನ್ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ಏನೇನಾಯ್ತು? ಹಲ್ಲೆ ಮಾಡಿದ್ದು ಯಾರ್ಯಾರು? ಇಂಚಿಂಚೂ ವಿವರ

ಬಳಿಕ ಜೇಬಿನಲ್ಲಿದ್ದ 1500 ರೂಗಳನ್ನು ತೆಗೆದುಕೊಂಡು ಅದೇ ಹಣದಲ್ಲೇ ಎಣ್ಣೆ ತರಿಸಿಕೊಂಡು ಕುಡಿದು, ಮತ್ತೆ ಥಳಿಸಿದ್ದಾರೆ. ನಂತರ ನಿನ್ನನ್ನು ಕೊಲೆ ಮಾಡಲು ಹೇಳಿ ಕಳುಹಿಸಿದ್ದಾರೆ ಎಂದು ಆತನಿಗೆ ಹೇಳಿ, ಪಿರ್ಯಾದುದಾರರ ಮೊಬೈಲ್​ನಿಂದ 5000 ರೂಗಳನ್ನು ಕಳಿಸಿಕೊಂಡು ಅದರಲ್ಲಿ ಮತ್ತೆ 2,800 ರೂಪಾಯಿಯ ಮದ್ಯವನ್ನು ತರಿಸಿಕೊಂಡು ಕುಡಿದಿದ್ದಾರೆ. ಬಳಿಕ ಮೂಸಾಗೆ 50 ಲಕ್ಷ ರೂ.ಗಳನ್ನು ಕೊಡಬೇಕು, ಇಲ್ಲದಿದ್ದರೆ ಕೊಲೆ ಮಾಡೋದಾಗಿ ಬೆದರಿಸಿದ್ದಾರೆ. ಆಗ ಮೂಸ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಕೊನೆಗೆ ಐದು ಲಕ್ಷಕ್ಕೆ ಡೀಲ್ ಕುದುರಿಸಿ, ಕುಟುಂಬಸ್ಥರು ಹಣ ತಲುಪಿಸ್ತಿದ್ದಂತೆ. ಅಂಚೆಪಾಳ್ಯ ಬಳಿ ಮೂಸನನ್ನ ಬಿಟ್ಟು ಪರಾರಿ ಆಗಿದ್ದಾರೆ. ಘಟನೆ ಬಳಿಕ ಮೂಸ ಶ್ರೀರಾಂಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ.

ಕಿಡ್ನಾಪ್ ಮಾಡಿಸಿದ್ದೇ ಗೆಳೆಯ

ಮೊಹಮ್ಮದ್ ಮೂಸ ಹಾಗೂ ರೆಹಮಾನ್ 10 ವರ್ಷದ ಗೆಳೆಯರು. ಮೂಸಾ, ಮನೆಗಳನ್ನ ರಿನೋವೇಷನ್ ಮಾಡುವ ಕಾಂಟ್ರಾಕ್ಟರ್ ಅಗಿ ಕೆಲಸ ಮಾಡ್ತಿದ್ದ. ಹೀಗಿರುವಾಗ ಮೂಸಾ, ‘ರೆಹಮಾನ್ ಮನೆ ರಿನೋವೇಶನ್ ಮಾಡಿದ್ದ. ರಿನೋವೇಶನ್​ಗೆ ಸುಮಾರು‌ 27 ಲಕ್ಷ ಹಣ ಖರ್ಚಾಗಿತ್ತು. ರಿನೋವೇಷನ್ ಮಾಡಿದ ಹಣ ಕೊಡದೆ ಸತಾಯಿಸುತ್ತಿದ್ದರಿಂದ ಅದೇ ಮನೆಯನ್ನ 95 ಲಕ್ಷಕ್ಕೆ ಮೂಸ ತೆಗೆದುಕೊಂಡಿದ್ದ. ಬಳಿಕ ಮನೆ ಮಾರಿದರೂ ಹಣಕಾಸಿನ ಸಮಸ್ಯೆಯಿಂದ ಪುನಃ ಮೂಸಾನ ಬಳಿ ರೆಹಮಾನ್ ಒಂದೂವರೆ ಲಕ್ಷ ಸಾಲ ಮಾಡಿದ್ದ. ಆ ಹಣ ಕೂಡ ಕೊಡಲು ರೆಹಮಾನ್ ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ರೆಹಮಾನ್, ‘ಅರುಣ್, ಪ್ರತಾಪ್, ಅಕ್ರಂ, ಅಖಿಲೇಶ್, ಅನ್ಸರ್, ನವೀನ್, ರೆಹಮಾನ್, ಸೈಯದ್ ಬಕಾಸ್​ ಎಂಬುವವರಿಗೆ ಸುಪಾರಿ ನೀಡಿ ಕಿಡ್ನಾಪ್ ಮಾಡಿಸಿದ್ದ. ಇದೀಗ ಎಲ್ಲರೂ ಪೊಲೀಸ್​ ಅತಿಥಿಗಳಾಗಿದ್ದಾರೆ. ಅದೇನೆ ಹೇಳಿ ಸಾಲ‌ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ ಎನ್ನುವ ಮಾತಿದೆ. ಆದ್ರೆ, ಇಲ್ಲಿ ಸಾಲ ಕೊಟ್ಟ ಗೆಳೆಯನನ್ನೇ ಕಿಡ್ನಾಪ್ ಮಾಡಿ ಕೊಲ್ಲುವ ಹಂತಕ್ಕೆ ಹೋಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ