ಜೂನ್ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ಏನೇನಾಯ್ತು? ಹಲ್ಲೆ ಮಾಡಿದ್ದು ಯಾರ್ಯಾರು? ಇಂಚಿಂಚೂ ವಿವರ

ಜೂನ್ 09 ರಂದು ರೇಣುಕಾ ಸ್ವಾಮಿಯನ್ನು ದರ್ಶನ್ ಅವರ ಗ್ಯಾಂಗ್ ಅಪಹರಣ ಮಾಡಿದಾಗಿನಿಂದ ಜೂನ್ 11 ದರ್ಶನ್​ ಬಂಧನ ಆಗುವವರೆಗೆ ಏನೇನು ನಡೆಯಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಅಂದು ಪಟ್ಟಣಗೆರೆ ಶೆಡ್​ನಲ್ಲಿ ಯಾರ್ಯಾರು ಹಲ್ಲೆ ಮಾಡಿದರು? ಹಲ್ಲೆಗೆ ಬಳಸಿದ್ದೇನು? ಕೊಲೆಯ ಬಳಿಕ ಹಾಕಲಾಗಿದ್ದ ಮಾಸ್ಟರ್ ಪ್ಲ್ಯಾನ್ ಎಂಥಹುದು? ಎಲ್ಲವೂ ಇಲ್ಲಿದೆ.

ಜೂನ್ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ಏನೇನಾಯ್ತು? ಹಲ್ಲೆ ಮಾಡಿದ್ದು ಯಾರ್ಯಾರು? ಇಂಚಿಂಚೂ ವಿವರ
Follow us
|

Updated on: Sep 05, 2024 | 7:15 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು ಪ್ರಕರಣದ ಬಗೆಗಿನ ಹಲವು ಮಹತ್ವದ ವಿಷಯಗಳು ಬಹಿರಂಗಗೊಂಡಿವೆ. ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆದಿದ್ದು ಹೇಗೆ? ಹಲ್ಲೆ ಮಾಡಿದ್ದು ಯಾರ್ಯಾರು? ರೇಣುಕಾ ಸ್ವಾಮಿ ಕೊಲೆ ನಡೆದಾಗ ಪವಿತ್ರಾ ಗೌಡ ಸ್ಥಳದಲ್ಲಿದ್ದರಾ? ಕೊಲೆಯಲ್ಲಿ ದರ್ಶನ್ ಪಾತ್ರವೆಷ್ಟು? ಪವಿತ್ರಾ ಪಾತ್ರವೆಷ್ಟು? ರೇಣುಕಾ ಸ್ವಾಮಿ ಮೇಲೆ ಯಾರ್ಯಾರು ಹಲ್ಲೆ ಮಾಡಿದರು? ಹಲ್ಲೆಗೆ ಬಳಸಿದ ಆಯುಧಗಳು ಯಾವುವು? ಪಟ್ಟಣಗೆರೆ ಶೆಡ್​ನಲ್ಲಿ ಜೂನ್ 9 ರಂದು ಏನೇನು ನಡೆಯಿತು? ಪೂರ್ಣ ಮಾಹಿತಿ ಇಲ್ಲಿದೆ…

ಅಪಹರಣ ಮಾಡಿದ್ದು ಹೇಗೆ?

ರೇಣುಕಾ ಸ್ವಾಮಿ, ಇನ್​ಸ್ಟಾಗ್ರಾಂನಲ್ಲಿ ಪವಿತ್ರಾಗೆ (ಎ1) ಅಶ್ಲೀಲ ಸಂದೇಶ ಕಳಿಸಿದ್ದ. ಅದನ್ನು ಪವಿತ್ರಾ, ಸಹಾಯಕ ಪವನ್​ಗೆ (ಎ3) ತಿಳಿಸಿದ್ದಳು. ರೇಣುಕಾ ಸ್ವಾಮಿ, ಪವಿತ್ರಾ ನಂಬರ್ ಕೇಳಿದ್ದಾಗ, ಪವಿತ್ರಾ ಪವನ್ ನಂಬರ್ ಕೊಟ್ಟಿದ್ದರು. ಪವನ್, ಪವಿತ್ರಾಳಂತೆ ರೇಣುಕಾ ಸ್ವಾಮಿ ಬಳಿ ಮಾತನಾಡಿ ಆತನ ಮನೆ ವಿಳಾಸ, ಕೆಲಸದ ವಿಳಾಸ ತಿಳಿದುಕೊಂಡು, ಅದನ್ನು ವಿನಯ್ (ಎ10), ನಂದೀಶ್ (ಎ5) ಗೆ ಮಾಹಿತಿ ನೀಡಿದ್ದ ಪವನ್, ಬಳಿಕ ಚಿತ್ರದುರ್ಗದ ದರ್ಶನ್ ಅಭಿಮಾನಿ ರಾಘವೇಂದ್ರ (ಎ4)ಗೆ ಹೇಳಿ ಅಪಹರಿಸಲು ಆದೇಶಿಸಿದರು. ಆಗ ರಾಘವೇಂದ್ರ ಗೆಳೆಯರಾದ ಜಗದೀಶ (ಎ6) ಅನು (ಎ7) ಬೈಕ್​ನಲ್ಲಿ ಹೋಗುತ್ತಿದ್ದ ರೇಣುಕಾ ಸ್ವಾಮಿಯನ್ನು ಫಾಲೋ ಮಾಡಿ ಜೆ.ಸಿ.ಸರ್ಕಲ್‌ನ ಬಾಲಾಜಿ ಬಾರ್ ಬಳಿ 10 ಗಂಟೆಗೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಕ್ಯಾಬ್​ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಮಾರ್ಗಮಧ್ಯೆ ತುಮಕೂರಿನಲ್ಲಿ ರೇಣುಕಾ ಸ್ವಾಮಿ ಹಣದಲ್ಲಿ ಎಲ್ಲ ಆರೋಪಿಗಳು ಮದ್ಯ ಸಹ ಸೇವಿಸಿದ್ದಾರೆ. ಕಾರು ಓಡಿಸಿದ್ದು ಎ8 ಆರೋಪಿ ರವಿಶಂಕರ್.

ಶೆಡ್​ ಬಳಿ ಬಂದ ಬಳಿಕ ಏನಾಯ್ತು?

ಮಧ್ಯಾಹ್ನ 1:30 ರವೇಳೆಗೆ ಬೆಂಗಳೂರಿಗೆ ಬಂದ ಬಳಿಕ ರಾಘವೇಂದ್ರ, ಪವನ್​ಗೆ ಮಾಹಿತಿ ನೀಡಿದ. ಪವನ್ ಶೆಡ್​ನ ವಿಳಾಸ ಕಳಿಸಿ ಅಲ್ಲಿಗೆ ಬರುವಂತೆ ಹೇಳಿದ. ರೇಣುಕಾ ಸ್ವಾಮಿಯ ಕರೆತಂದಿರುವ ಬಗ್ಗೆ ಪವನ್, ವಿನಯ್​ಗೆ ಕರೆ ಮಾಡಿ ಮಾಹಿತಿ ಕೊಟ್ಟ, ಸ್ಟೋನಿ ಬ್ರೂಕ್​ನಲ್ಲಿ ಪಾರ್ಟಿ ಮಾಡುತ್ತಿದ್ದ ದರ್ಶನ್, ಮತ್ತೊಬ್ಬ ಆರೋಪಿ ನಾಗರಾಜು, ಪ್ರದೋಶ್​ಗೂ ಮಾಹಿತಿ ತಲುಪಿತು. ಕಾರನ್ನು ಶೆಡ್ ಒಳಗೆ ಬಿಡುವಂತೆ ವಿನಯ್ ಹೇಳಿದ.

ಶೆಡ್ ಒಳಗೆ ಏನಾಯ್ತು?

ಒಳಗೆ ಹೋದ ಬಳಿಕ ಪವನ್, ನಂದೀಶ್, ಧನರಾಜ್ ಸಹ ಶೆಡ್​ಗೆ ಹೋದರು. ಪವನ್, ನಂದೀಶ್, ಧನರಾಜ್ ರೇಣುಕಾ ಸ್ವಾಮಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದರು. ಮರದಿಂದ ಮಾಡಿದ ಲಾಠಿ ತರಿಸಿ ಮನಸೋಇಚ್ಛೆ ಹೊಡೆದರು. ಲಾರಿಗೆ ತಲೆ ಹೊಡೆಸಿ ಹಲ್ಲೆ ಮಾಡಿದರು. ಎತ್ತಿ ಕುಕ್ಕಿ ಕಾಲಿನಿಂದ ಒದ್ದರು. ಧನರಾಜ್, ರೇಣುಕಾಸ್ವಾಮಿಯ ಎದೆ, ಕೈ ಮತ್ತು ಕಾಲಿಗೆ ಶಾಕ್ ನೀಡಿದ. ಬಳಿಕ ಸ್ಟೋನಿ ಬ್ರೂಕ್​ನಲ್ಲಿದ್ದ ವಿನಯ್​ಗೆ ರೇಣುಕಾ ಸ್ವಾಮಿ ಲಾರಿ ಪಕ್ಕ ಬಿದ್ದಿರುವ ಚಿತ್ರವನ್ನು ಕಳಿಸಲಾಯ್ತು. ಆ ವೇಳೆಗೆ ದರ್ಶನ್, ಸ್ಟೋನಿ ಬ್ರೂಕ್​ನಲ್ಲಿ ಚಿಕ್ಕಣ್ಣ, ಯಶಸ್ ಸೂರ್ಯ, ಆರೋಪಿ ನಾಗರಾಜ್ ಜೊತೆ ಊಟ ಮಾಡುತ್ತಿದ್ದರು.

ಶೆಡ್​ಗೆ ದರ್ಶನ್ ಎಂಟ್ರಿ

ಒಂದು ಸುತ್ತಿನ ಹಲ್ಲೆ, ಕರೆಂಟ್ ಶಾಕ್ ಬಳಿಕ ದರ್ಶನ್​ಗೆ ರೇಣುಕಾ ಸ್ವಾಮಿ ಫೊಟೊ ತೋರಿಸಲಾಗುತ್ತದೆ. ಆಗ ದರ್ಶನ್, ಪವಿತ್ರಾಗೆ ವಿಡಿಯೋ ಕಾಲ್ ಮಾಡುತ್ತಾರೆ. ನಿನಗೆ ಹಿಂಸೆ ಕೊಟ್ಟವನನ್ನು ಶೆಡ್​ನಲ್ಲಿ ಕೂಡಿ ಹಾಕಿದ್ದೇವೆ. ನಾನೇ ಅಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಹೋಗ್ತೀನಿ ಎಂದು ಹೇಳಿ, ವಿನಯ್ ಹಾಗೂ ಪ್ರದೋಶ್ ಜೊತೆ ಪವಿತ್ರಾ ಮನೆಗೆ ಹೋಗಿ ಆವರನ್ನು ಸ್ಕಾರ್ಪಿಯೋ ಕಾರಿನಲ್ಲಿ ಕರೆದುಕೊಂಡು ಶೆಡ್​ಗೆ ಹೋಗುತ್ತಾರೆ. ಅಷ್ಟರಲ್ಲೇ ಪವಿತ್ರಾ, ತನ್ನ ಸ್ನೇಹಿತೆಗೆ ಕರೆ ಮಾಡಿ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿರುವ ವಿಷಯ ಹೇಳಿ, ಆತನನ್ನು ತಾನೇ ಹೋಗಿ ಹೊಡೆಯುವುದಾಗಿ ಹೇಳಿರುತ್ತಾರೆ.

ಮನಸೋ ಇಚ್ಛೆ ಹಲ್ಲೆ

4:45 ರ ಸುಮಾರಿಗೆ ದರ್ಶನ್, ಪವಿತ್ರಾ, ವಿನಯ್, ಪ್ರದೋಶ್, ನಾಗರಾಜ್ ಅವರುಗಳು ಶೆಡ್​ಗೆ ಬರುತ್ತಾರೆ. ಬರುತ್ತಿದ್ದಂತೆ ಎಲ್ಲರೂ ಒಂದು ಸುತ್ತು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ‘ನನ್ನ ಹೆಂಡತಿಗೆ ಮೆಸೇಜ್ ಕಳಿಸ್ತೀಯ’ ಎಂದು ದರ್ಶನ್ ಮರದ ಕೊಂಬೆಯಿಂದ ಹಲ್ಲೆ ಮಾಡುತ್ತಾರೆ, ನೈಲಾನ್ ಹಗ್ಗದಿಂದ ಬೀಸಿ ಹೊಡೆಯುತ್ತಾರೆ. ಬಳಿಕ ಪವಿತ್ರಾ ಗೌಡ, ಚಪ್ಪಲಿಯಿಂದ ರೇಣುಕಾ ಸ್ವಾಮಿ ಮುಖಕ್ಕೆ ಮನಸೋಇಚ್ಛೆ ಭಾರಿಸುತ್ತಾರೆ. ಆಗ ರೇಣುಕಾ ಸ್ವಾಮಿ ಪವಿತ್ರಾ, ಕಾಲು ಹಿಡಿದುಕೊಂಡು ಕ್ಷಮೆ ಕೇಳುತ್ತಾನೆ. ಬಳಿಕ ದರ್ಶನ್ ಸಹ ಅದೇ ಚಪ್ಪಲಿ ತೆಗೆದುಕೊಂಡು ರೇಣುಕಾ ಸ್ವಾಮಿಯ ಮುಖಕ್ಕೆ ಹೊಡೆಯುತ್ತಾನೆ. ಬಳಿಕ ಪವನ್​ಗೆ ಹೇಳಿ ರೇಣುಕಾ ಸ್ವಾಮಿ ಶರ್ಟ್​, ಪ್ಯಾಂಟ್ ಬಿಚ್ಚಿಸಿ, ಮರ್ಮಾಂಗಕ್ಕೆ ಒದೆಯುತ್ತಾರೆ. ಪವಿತ್ರಾ ಗೌಡ, ಮುಗಿಸಿಬಿಡಿ ಇವನನ್ನು ಬದುಕಿರಬಾರದು ಎಂದು ಅರಚಾಡುತ್ತಾರೆ. ನನಗೇ ರೇಟ್ ಎಷ್ಟು ಅಂತಾ ಕೇಳ್ತೀಯ? ಎಂದು ಕೆಟ್ಟದಾಗಿ ಬೈದು ಚಪ್ಪಲಿಯಲ್ಲಿ ಸತತವಾಗಿ ಹೊಡೆಯುತ್ತಾರೆ.

ಶೆಡ್​ನಿಂದ ಹೊರಟ ಪವಿತ್ರಾ

ಬಳಿಕ ಪವಿತ್ರಾ ಗೌಡ ಅನ್ನು ದರ್ಶನ್ ಮನೆಗೆ ಕಳಿಸುತ್ತಾರೆ. ಎ12 ಆರೋಪಿ ಲಕ್ಷ್ಮಣ, ಪವಿತ್ರಾ ಅನ್ನು ಮನೆಗೆ ವ್ರ್ಯಾಂಗ್ಲರ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾನೆ. ಆ ಬಳಿಕ ದರ್ಶನ್, ರೇಣುಕಾ ಸ್ವಾಮಿಯ ಮೊಬೈಲ್ ಅನ್ನು ತೆಗೆಯುವಂತೆ ಹೇಳುತ್ತಾರೆ. ಪ್ರದೋಶ್, ರೇಣುಕಾ ಸ್ವಾಮಿಯ ಮೊಬೈಲ್ ತೆಗೆದು ಪವಿತ್ರಾಗೆ ಕಳಿಸಿದ ಸಂದೇಶಗಳನ್ನು ಓದುತ್ತಿದ್ದಂತೆ ದರ್ಶನ್​ ಕೋಪಗೊಂಡು ಮನಸೋ ಇಚ್ಛೆ ಹಲ್ಲೆ ಮಾಡಲು ಆರಂಭಿಸುತ್ತಾನೆ. ಜೊತೆಗೆ ಉಳಿದ ಆರೋಪಿಗಳು ಸಹ ಸೇರಿಕೊಂಡು ಎಲ್ಲರೂ ಸೇರಿ ಸಿಕ್ಕ-ಸಿಕ್ಕ ಕಡೆ ಹೊಡೆಯುತ್ತಾರೆ. ಈ ಸಮಯದಲ್ಲಿ ಬಿದ್ದ ಸತತ ಪೆಟ್ಟುಗಳಿಂದ ಎದೆಯ ಮೂಳೆ ಮುರಿದು ಶ್ವಾಸಕೋಶಕ್ಕೆ ಸೇರಿ ರೇಣುಕಾ ಸ್ವಾಮಿ ನಿತ್ರಾಣನಾಗುತ್ತಾನೆ.

ಇದನ್ನೂ ಓದಿ:ಪತ್ನಿ ಕೊಟ್ಟ ಬ್ಯಾಗ್ ಹಿಡಿದು ಸೈಲೆಂಟ್ ಆಗಿ ಸೆಲ್​ಗೆ ಹೋದ ದರ್ಶನ್; ಹೀಗಿದೆ ದಾಸನ ಸ್ಥಿತಿ

ನಿಧನ ಹೊಂದಿರುವುದು ತಿಳಿದು…

ನಿತ್ರಾಣನಾಗಿದ್ದ ರೇಣುಕಾ ಸ್ವಾಮಿಯನ್ನು ಸೆಕ್ಯುರಿಟಿ ರೂಂನಲ್ಲಿ ಇಡಲಾಗುತ್ತದೆ. ಆದರೆ ಆತನ ಹೃದಯ ನಿಂತಿರುವುದು ಗೊತ್ತಾಗಿ ರೇಣುಕಾ ಸ್ವಾಮಿ ಸತ್ತಿರುವುದು ಖಾತ್ರಿಯಾಗುತ್ತದೆ. ಕೂಡಲೇ ದರ್ಶನ್ ಅನ್ನು ವಿನಯ್ ಮನೆಗೆ ಬಿಡುತ್ತಾನೆ. ಬಳಿಕ ಕೊಲೆ ಮುಚ್ಚಿ ಹಾಕುವ ಯೋಜನೆ ಸಿದ್ಧವಾಗುತ್ತದೆ. ರಾಘವೇಂದ್ರ ಬಿಟ್ಟು ಇನ್ಯಾರೂ ಸಹ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವುದಿಲ್ಲ. ಈ ವಿಷಯವನ್ನು ಪ್ರದೊಶ್, ದರ್ಶನ್​ಗೆ ತಿಳಿಸುತ್ತಾನೆ. ಹೇಗಾದರೂ ಮಾಡಿ ಯಾರನ್ನಾದರೂ ಒಪ್ಪಿಸುವಂತೆ ದರ್ಶನ್ ಹೇಳಿದ್ದಲ್ಲದೆ, ತನ್ನ ಹಾಗೂ ಪವಿತ್ರಾ ಹೆಸರು ಹೊರಬರದಂತೆ ನೋಡಿಕೊಳ್ಳುವಂತೆ ಹೇಳುತ್ತಾರೆ.

ಶವ ವಿಲೇವಾರಿ ಹೇಗೆ

ಬಳಿಕ ರಾಘವೇಂದ್ರ, ಎ15 ಕಾರ್ತಿಕ್, ಎ16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್ ಅವರುಗಳಿಗೆ ಕರೆ ಮಾಡಿ ಕೊಲೆ ಒಪ್ಪಿಕೊಳ್ಳುವಂತೆ ಮನವೊಲಿಸುತ್ತಾನೆ ಅಲ್ಲದೆ ತಲಾ ಐದು ಲಕ್ಷ ರೂಪಾಯಿ ಹಣ ಕೊಡುವುದಾಗಿಯೂ ಹೇಳಿ ಶೆಡ್​ಗೆ ಕರೆಸಿಕೊಳ್ಳುತ್ತಾನೆ. ಪ್ರದೋಶ್, ನಾಗರಾಜ್, ಧನರಾಜ್ ದರ್ಶನ್ ಮನೆ ಬಳಿ ಹೋಗಿ 30 ಲಕ್ಷ ಹಣ ಪಡೆದು ಬರುತ್ತಾರೆ. ಅಷ್ಟರಲ್ಲಿ ವಿನಯ್ ಹೋಗಿ ಶವ ಎಲ್ಲಿ ಎಸೆಯಬೇಕು ಎಂಬುದನ್ನು ನೋಡಿಕೊಂಡು ಬಂದಿರುತ್ತಾನೆ. ಬಳಿಕ ದೀಪಕ್ (ಎ13), ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಅವರುಗಳು ಬಿಳಿ ಬಣ್ಣದ ಸ್ಕಾರ್ಪಿಯೋನಲ್ಲಿ ಶವ ಹಾಕಿಕೊಂಡು ಸುಮನಳ್ಳಿ ಮೋರಿ ಬಳಿ ಹೋಗುತ್ತಾರೆ. ವಿನಯ್ ಅವರನ್ನು ಹಿಂಬಾಲಿಸುತ್ತಾನೆ. ಸುಮನಳ್ಳಿ ಮೋರಿಗೆ ಶವ ಎಸೆಯುತ್ತಾರೆ. ರಾಘವೇಂದ್ರ, ರೇಣುಕಾ ಸ್ವಾಮಿ ಮೈಮೇಲಿದ್ದ ಚಿನ್ನ ಎತ್ತಿಟ್ಟುಕೊಂಡಿರುತ್ತಾನೆ ಜೊತೆಗೆ ರೇಣುಕಾ ಸ್ವಾಮಿಯ ಮೊಬೈಲ್ ಅನ್ನು ಮೋರಿಗೆ ಎಸೆಯುತ್ತಾನೆ.

ಪೊಲೀಸರಿಗೆ ಶರಣು

ಜೂನ್ 09 ಅಂದರೆ ಕೊಲೆ ನಡೆದ ದಿನ ಭಾನುವಾರವಾದ್ದರಿಂದ ಅದೇ ದಿನ ಶರಣಾಗುವುದು ಬೇಡವೆಂದು ಸೋಮವಾರ ಶರಣಾಗುವಂತೆ ಸೂಚಿಸಿ ಶರಣಾಗಲು ಒಪ್ಪಿಕೊಂಡಿದ್ದ ನಾಲ್ವರನ್ನು ಎನ್‌ಆರ್‌ಐ ರೆಸಿಡೆನ್ಸಿ ಹೋಟೆಲ್ ನಲ್ಲಿಡುತ್ತಾರೆ. ಅಂದು ಅವರು ಅಲ್ಲಿ ಕುಡಿದು ಪಾರ್ಟಿ ಮಾಡುತ್ತಾರೆ. ಅದೇ ದಿನ ಪ್ರದೋಶ್ ಸ್ಟೋನಿ ಬ್ರೂಕ್​ನ ಸಿಸಿಟಿವಿ ದೃಶ್ಯಗಳು ಹಾಗೂ ದರ್ಶನ್ ಮನೆಯ ಸಿಸಿಟಿವಿ ದೃಶ್ಯಗಳನ್ನು ಅಳಿಸಿ ಹಾಕುತ್ತಾರೆ. ಜೂನ್ 10 ರಂದು ರೇಣುಕಾ ಸ್ವಾಮಿ ಶವ ಪೊಲೀಸರಿಗೆ ಸಿಗುತ್ತದೆ. ಅದೇ ದಿನ 2:30ಕ್ಕೆ ನಾಲ್ವರು ಹೋಗಿ ಪೊಲೀಸರಿಗೆ ಶರಣಾಗುತ್ತಾರೆ. ಆದರೆ ವಿನಯ್​ಗೆ ಶರಣಾದವರು ನಿಜ ಹೇಳಿಬಿಟ್ಟಿರಬಹುದು ಎಂಬ ಅನುಮಾನ ಬಂದು ಪವನ್, ನಂದೀಶ್, ವಿನಯ್, ಪ್ರದೋಶ್, ನಾಗರಾಜ್, ಧನರಾಜ್ ಅವರುಗಳು ಎರಡು ಕಾರುಗಳಲ್ಲಿ ಮೈಸೂರಿಗೆ ಹೋಗಿ ದರ್ಶನ್​ ಜೊತೆ ಮಾತನಾಡುತ್ತಾರೆ. ಆಗ ದರ್ಶನ್, ಯಾವುದೇ ಕಾರಣಕ್ಕೂ ನನ್ನ ಹಾಗೂ ಪವಿತ್ರಾ ಹೆಸರು ಬರಬಾರದೆಂದು ಹೇಳಿ, ಪವನ್ ಹಾಗೂ ನಂದೀಶ್ ಅನ್ನು ಶರಣಾಗಿಸುವ ಐಡಿಯಾ ಕೊಡುತ್ತಾರೆ. ಆದರೆ ಅಷ್ಟರಲ್ಲಾಗಲೆ ಶರಣಾಗಿದ್ದ ಆರೋಪಿಗಳು ನಿಜಾಂಶ ಬಾಯಿ ಬಿಟ್ಟಿರುತ್ತಾರೆ.

ಯಾರ್ಯಾರ ಬಂಧನ ಎಲ್ಲೆಲ್ಲಿ?

ಆ ಬಳಿಕ ಪೊಲೀಸರು ಜೂನ್ 11 ರಂದು ದರ್ಶನ್ ಅನ್ನು ಮೈಸೂರಿನಲ್ಲಿ, ಪವಿತ್ರಾ, ವಿನಯ್, ದೀಪಕ್, ಪ್ರದೋಶ್, ಲಕ್ಷ್ಮಣ ಅವರುಗಳನ್ನು ಬೆಂಗಳೂರಿನಲ್ಲಿ, ಪವನ್ ಅನ್ನು ರಾಮನಗರದಲ್ಲಿ, ನಂದೀಶ್ ಮಂಡ್ಯದ ಚಾಮಲಾಪುರದಲ್ಲಿ, ನಾಗರಾಜನನ್ನು ಮೈಸೂರಿನ ರಾಮಕೃಷ್ಣಾನಗರದಲ್ಲಿ, ಚಿತ್ರದುರ್ಗದಲ್ಲಿ ಕೆಲವರನ್ನು, ಧನರಾಜ್ ಜೂನ್ 15 ರಂದು ಬಂಧಿಸಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ