AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಬರ ‘ರೈಡ್​’ ಸಿನಿಮಾಗೆ ಸಾಥ್​ ನೀಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ

‘ರೈಡ್​’ ಸಿನಿಮಾದಲ್ಲಿ ವೆಂಕಿ, ತನ್ವಿ, ನೀರಜ್​ ಕುಮಾರ್​ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆ ಶೂಟಿಂಗ್​ ಮಾಡಲಾಗಿದೆ. ಈ ಸಿನಿಮಾದ ಹಾಡು ಮತ್ತು ಟ್ರೇಲರ್​ ಬಿಡುಗಡೆ ಸಮಾರಂಭಕ್ಕೆ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು.

ಹೊಸಬರ ‘ರೈಡ್​’ ಸಿನಿಮಾಗೆ ಸಾಥ್​ ನೀಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ
‘ರೈಡ್​’ ಸಿನಿಮಾ ಸುದ್ದಿಗೋಷ್ಠಿ
ಮದನ್​ ಕುಮಾರ್​
|

Updated on: Sep 05, 2024 | 10:48 PM

Share

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಸ್ಟಾರ್​ ನಟರ ಜೊತೆ ಸಿನಿಮಾ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅದೇ ರೀತಿ ಹೊಸ ಪ್ರತಿಭೆಗಳನ್ನೂ ಅವರು ಬೆನ್ನು ತಟ್ಟುತ್ತಾರೆ. ಇತ್ತೀಚೆಗೆ ಅವರು ‘ರೈಡ್​’ ಸಿನಿಮಾದ ಹಾಡು ಮತ್ತು ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಸಾಂಗ್​ ಮತ್ತು ಟ್ರೇಲರ್​ ರಿಲೀಸ್​ ಬಳಿಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಅವರ ಜೊತೆ ‘ಕೆರಬೇಟೆ’ ಗೌರಿಶಂಕರ್​, ತಿಮ್ಮೇಗೌಡ, ವೇಣು, ಚೇತನ್​ ಮುಂತಾದವರು ಕೂಡ ಸಿನಿಮಾ ತಂಡಕ್ಕೆ ವಿಶ್​ ಮಾಡಿದರು.

‘ಶ್ರೀವರಸಿದ್ದಿ ವಿನಾಯಕ ಪ್ರೊಡಕ್ಷನ್’ ಮೂಲಕ ರಾಮಕೃಷ್ಣ ರಾಮೋಹಳ್ಳಿ ಅವರು ‘ರೈಡ್​’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದು ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ. ಈ ಸಿನಿಮಾದ ಮೂಲಕ ತಮ್ಮ ಮಗ ವೆಂಕಿಯನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಹೊಸ ನಟಿ ತನ್ವಿ‌ ಅವರು ‘ರೈಡ್’ ಸಿನಿಮಾಗೆ ನಾಯಕಿ ಆಗಿದ್ದಾರೆ. ಯೂಟ್ಯೂಬರ್ ಆಗಿ ಗುರುತಿಸಿಕೊಂಡ ನೀರಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

‘ರೈಡ್​’ ಸಿನಿಮಾ ತಂಡ

‘ರೈಡ್​’ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಬಳಿಕ ಚಿತ್ರತಂಡದವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶನ ಭಾನುತೇಜ ಅವರಿಗೆ ಇದು ಮೊದಲ ಸಿನಿಮಾ. ‘ಈವರೆಗೂ ಕೆಲವು ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆ. ಇದೊಂದು ಥ್ರಿಲ್ಲರ್ ಕಥೆ ಇರುವ ಚಿತ್ರ. ಕೌಟುಂಬಿಕ ಪ್ರೇಕ್ಷಕರು ನೋಡಬಹುದಾದ ಸಿನಿಮಾ. ಮನೆಯಲ್ಲಿ ಹಿರಿಯರನ್ನು ಮದುವೆಗೆ ಒಪ್ಪಿಸಿದ ಯುವಪ್ರೇಮಿಗಳು ಜಾಲಿ ರೈಡ್​ಗೆ ಹೋದಾಗ ಹಲವು ಟ್ವಿಸ್ಟ್​ಗಳು ಎದುರಾಗುತ್ತವೆ. ಅದೇ ಈ ಸಿನಿಮಾ ಕಥೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಹಿಟ್​ ಆಗೋದು, ಬಿಡೋದು ಯಾವಾಗ? ವಿವರಿಸಿದ ಉಮಾಪತಿ ಗೌಡ

ಬೆಂಗಳೂರು, ಚಿಕ್ಕಮಗಳೂರು ಮುಂತಾದೆಡೆ ‘ರೈಡ್​’ ಸಿನಿಮಾಗೆ ಶೂಟಿಂಗ್​ ಮಾಡಲಾಗಿದೆ. ‘ನಾನು ಮೂಲತಃ ಸಿವಿಲ್ ಎಂಜಿನಿಯರ್. ನಟನಾಗಬೇಕು ಎಂಬುದು ನನ್ನ ಕನಸು. ಆ ಕನಸಿಗೆ ನಮ್ಮ ತಂದೆ ರಾಮಕೃಷ್ಣ ರಾಮೋಹಳ್ಳಿ ಅವರು ಆಸರೆಯಾದರು. ಈ ಸಿನಿಮಾದಲ್ಲಿ ನಾನು ಯುವಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರ ಪರಿಚಯ ಮಾಡಿಕೊಂಡಿದ್ದಾರೆ ನಟ ವೆಂಕಿ. ನಟಿ ತನ್ವಿ ಅವರು ಮೊದಲ ಸಿನಿಮಾದ ಖುಷಿಯಲ್ಲಿದ್ದಾರೆ. ಈ ಸಿನಿಮಾಗೆ ಸೆಂದಿಲ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.