ಹಾಸನ: ಕೋರ್ಟ್ನಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯ ಬರ್ಬರ ಕೊಲೆ
2021ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಣ್ಣಯ್ಯ ವಿರುದ್ಧ ಹಾಸನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಿ ವಿರುದ್ಧ ಜಯಪ್ಪ ಎಂಬುವರು ಸಾಕ್ಷಿ ಹೇಳಲು ಮುಂದಾಗಿದ್ದರು. ತನ್ನ ವಿರುದ್ಧ ಸಾಕ್ಷಿ ಹೇಳಲು ಬಂದಿದ್ದ ಜಯಪ್ಪ ಅವರನ್ನು ಆರೋಪಿ ಅಣ್ಣಯ್ಯ ಕೊಲೆ ಮಾಡಿದ್ದಾನೆ.
ಹಾಸನ, ಫೆಬ್ರವರಿ 07: ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಅರಸೀಕೆರೆ (Arsikere) ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ತೂಬಿನಕೆರೆ ಬೋವಿ ಕಾಲೋನಿ ನಿವಾಸಿ ಜಯಪ್ಪ (34) ಕೊಲೆಯಾದ ವ್ಯಕ್ತಿ. ಇದೆ ತಾಲೂಕಿನ ಕಾಳೆನಹಳ್ಳಿ ಹಟ್ಟಿಯ ಅಣ್ಣಯ್ಯ (24) ಕೊಲೆ ಮಾಡಿದ ಆರೋಪಿ. ಅಷ್ಟಕ್ಕೂ ಈ ಕೊಲೆ ನಡೆದಿದ್ದಾರು ಏಕೆ? ಇಲ್ಲಿದೆ ಓದಿ…
2021ರಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿದ ಪ್ರಕರಣದಲ್ಲಿ ಅಣ್ಣಯ್ಯ ಜೈಲು ಸೇರಿದ್ದನು. 2022ರ ಜುಲೈನಲ್ಲಿ ಅಣ್ಣಯ್ಯ ಬೇಲ್ ಮೇಲೆ ಹೊರಗಡೆ ಬಂದಿದ್ದಾನೆ. ಈ ಪ್ರಕರಣಕ್ಕೆ ಜಯಪ್ಪ ಪ್ರಮುಖ ಸಾಕ್ಷಿಯಾಗಿದ್ದರು. ಒಂದು ವೇಳೆ ಜಯಪ್ಪ ಸಾಕ್ಷಿ ಹೇಳಿದರೆ ಕಠಿಣ ಶಿಕ್ಷೆಯಾಗುವ ಭೀತಿಯಲ್ಲಿ ಅಣ್ಣಯ್ಯ ಇದ್ದನು. ಹೀಗಾಗಿ ರಾಜಿಯಾಗುವಂತೆ ಆರೋಪಿ ಅಣ್ಣಯ್ಯ ಜಯಪ್ಪನ ಹಿಂದೆ ಬಿದ್ದಿದ್ದನು. ಜಯಪ್ಪ ಜನವರಿ 31 ರಂದು ಹಾಸನ ನ್ಯಾಯಾಲಯದಲ್ಲಿ ಅಣ್ಣಯ್ಯನ ವಿರುದ್ಧ ಸಾಕ್ಷಿ ಹೇಳಿ ಮರಳಿ ಹೋಗುತ್ತಿದ್ದರು. ಈ ವೇಳೆ ಅಣ್ಣಯ್ಯ ಜಯಪ್ಪನನ್ನು ಕರೆದೊಯ್ದು ಎಣ್ಣೆ ಕುಡಿಸಿದ್ದನು. ಕಂಠಪೂರ್ತಿ ಕುಡಿಸಿ ತನಗೆ ಅನುಕೂಲ ಆಗುವಂತೆ ಸಹಾಯ ಮಾಡು ಎಂದು ಮನವಿ ಮಾಡಿದ್ದನು.
ಇದನ್ನೂ ಓದಿ: ಸಾಲ ತೀರಿಸಲು ಹಣ ನೀಡದಿದ್ದಕ್ಕೆ ಪತ್ನಿಯನ್ನ ಕೊಲೆ ಮಾಡಿದ ಪತಿ
ತನ್ನ ಬೇಡಿಕೆಗೆ ಒಪ್ಪದಿದ್ದಾಗ ಅಣ್ಣಯ್ಯ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಜಯಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಎಷ್ಟು ಹೊತ್ತಾದರು ಪುತ್ರ ಮನೆಗೆ ಬಾರದಿದ್ದಕ್ಕೆ ಜಯಪ್ಪನ ತಾಯಿ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪುತ್ರ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಫೆಬ್ರವರಿ 2 ರಂದು ಹಾಸನ ಹೊರವಲಯದ ಬುಸ್ತೇನಹಳ್ಳಿ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಜಯಪ್ಪನ ಮೃತ ದೇಹ ಪತ್ತೆಯಾಗಿತ್ತು. ಪೊಲೀಸರು ಕೊಲೆ ಪ್ರಕರಣದ ತನಿಖೆ ನಡೆಸಿದಾಗ ಹತ್ಯೆ ರಹಸ್ಯ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿ ಅಣ್ಣಯ್ಯನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಮೇಲ್ಚಾವಣಿ ಕುಸಿದು ವೃದ್ಧ ಸಾವು, ಮೂವರಿಗೆ ಗಾಯ
ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿ ಮೇಲ್ಚಾವಣಿ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಬೆಲ್ಲದ ಸಿದ್ದಪ್ಪ (60) ಮೃತ ದುರ್ದೈವಿ. ಕೀರ್ತಿ, ಲಕ್ಷ್ಮೀ, ಮುತ್ತುರಾಜ್ ಮೂವರು ಮಕ್ಕಳಿಗೆ ಗಾಯಗಳಾಗಿವೆ. ಮನೆ ಮಂದಿ ಊಟ ಮಾಡುವ ವೇಳೆ ಮಣ್ಣಿನ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದಿದೆ. ಮಣ್ಣಿನಲ್ಲಿ ಸಿಲುಕಿದ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಗಾಯಗೊಂಡ ಮೂರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ