ಬೆಂಗಳೂರು, ಮೇ 5: ಅತ್ಯಾಚಾರ ಆರೋಪ ಮತ್ತು ಅಶ್ಲೀಲ ವಿಡಿಯೋ ರೆಕಾರ್ಡಿಂಗ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಹಾಗೂ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಇಂಟರ್ಪೋಲ್ನಲ್ಲಿ ಬ್ಲೂ ಕಾರ್ನರ್ ನೋಟೀಸ್ (Interpol blue corner notice) ಜಾರಿ ಮಾಡುವ ಸಾಧ್ಯತೆ ಇದೆ. ಪ್ರಜ್ವಲ್ ವಿರುದ್ಧ ನೀಲಿ ಬಣ್ಣದ ನೋಟೀಸ್ ಸಲ್ಲಿಸಲು ಸಿಬಿಐ ನಿರ್ಧರಿಸಿರುವುದು ಗೊತ್ತಾಗಿದೆ. ಎಂಪಿಯಾಗಿರುವ ಪ್ರಜ್ವಲ್ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಸೌಲಭ್ಯ ಬಳಸಿ ಜರ್ಮನಿಗೆ ಹೋಗಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೃಶ್ಯಗಳಿರುವ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 28ರಂದು ಈ ಪೆನ್ ಡ್ರೈವ್ನಲ್ಲಿರುವ ಅನೇಕ ವಿಡಿಯೋಗಳು ಸಾರ್ವಜನಿಕರಿಗೆ ಲೀಕ್ ಆಗಿದೆ. ಎಸ್ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟೀಸ್ ಕೊಟ್ಟಿದೆ. ಆದರೆ, ಜರ್ಮನಿಯಿಂದ ಪ್ರಜ್ವಲ್ ಇನ್ನೂ ಕೂಡ ಬಂದಿಲ್ಲ. ಈ ಕಾರಣಕ್ಕೆ ಇಂಟರ್ಪೋಲ್ನಲ್ಲಿ ಆತನ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಕೊಡಲಾಗಿದೆ.
ಇಂಟರ್ಪೋಲ್ ಎಂಬುದು ಪೊಲೀಸರ ಅಂತಾರಾಷ್ಟ್ರೀಯ ಸಹಕಾರದ ಒಂದು ವ್ಯವಸ್ಥೆ. ಒಂದು ದೇಶದಲ್ಲಿ ಅಪರಾಧ ಎಸಗಿ ಬೇರೆ ದೇಶಕ್ಕೆ ಹೋದ ಕ್ರಿಮಿನಲ್ಗಳನ್ನು ಪತ್ತೆ ಮಾಡಲು, ಹೆಚ್ಚಿನ ಮಾಹಿತಿ ಪಡೆಯಲು ಇದು ಸಹಕಾರಿಯಾಗುತ್ತದೆ. ಇಂಟರ್ಪೋಲ್ನಲ್ಲಿ ಏಳು ರೀತಿಯ ನೋಟೀಸ್ಗಳಿರುತ್ತವೆ. ಅದರಲ್ಲಿ ಬ್ಲೂ ಕಾರ್ನರ್ ನೋಟೀಸ್ ಒಂದು.
ಬ್ಲೂ ಕಾರ್ನರ್ ನೋಟೀಸ್ ಎಂದರೆ ಒಂದು ದೇಶದಲ್ಲಿ ಅಪರಾಧ ಎಸಗಿ ಇನ್ನೊಂದು ದೇಶಕ್ಕೆ ಹೋಗಿರುವ ವ್ಯಕ್ತಿಯ ಬಗ್ಗೆ ಪ್ರಮುಖ ಮಾಹಿತಿ ಪಡೆಯಲು ನೆರವು ಕೋರುವುದಕ್ಕೆ ಬ್ಲೂ ಕಾರ್ನರ್ ನೋಟೀಸ್ ಎನ್ನುತ್ತಾರೆ. ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದರೆ, ಜರ್ಮನಿಯಲ್ಲಿರುವ ಪೊಲೀಸರು ಪ್ರಜ್ವಲ್ ಇರುವ ಸ್ಥಳವನ್ನು ಪತ್ತೆ ಮಾಡಿ, ಆತನ ಚಟುವಟಿಕೆ ಏನಿವೆ ಎಂಬ ಮಾಹಿತಿಯನ್ನು ಭಾರತೀಯ ಪೊಲೀಸ್ ಅಥವಾ ಸಿಬಿಐಗೆ ನೀಡುತ್ತಾರೆ.
ಇದನ್ನೂ ಓದಿ: ಅತ್ಯಾಚಾರ ಆರೋಪ, ಕಿಡ್ನ್ಯಾಪ್ ಕೇಸ್: ಹೆಚ್ಡಿ ರೇವಣ್ಣ ಮುಂದಿರುವ ಹಾದಿಗಳೇನು?
ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ