ಗೋವಾದ ಕಡಲಕಿನಾರೆ ಬಳಿ ಬ್ರಿಟಿಷ್ ಮಹಿಳೆಯ ಅತ್ಯಾಚಾರ; ಪ್ರಕರಣ ದಾಖಲು
ಅಂತರಾಷ್ಟ್ರೀಯ ಪ್ರವಾಸಿಗರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಬಳಿ ಅಕ್ರಮವಾಗಿ ಮಸಾಜ್ ಸೇವೆಗಳನ್ನು ನೀಡುವ ಗುಂಪಿನವನಾಗಿದ್ದಾನೆ ಆರೋಪಿ ಡಿಸೋಜಾ.
ಪಣಜಿ: ಗೋವಾದ (Goa) ಅರಂಬೋಲ್ ಬೀಚ್ (Arambol beach) ಬಳಿ ಬ್ರಿಟನ್ನ ಮಹಿಳೆಯೊಬ್ಬರಿಗೆ ಮಸಾಜ್ ಮಾಡುವ ನೆಪದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಆಕೆಯ ಪುರುಷ ಸಂಗಾತಿಯ ಎದುರೇ ಅತ್ಯಾಚಾರವೆಸಗಿದ್ದಾರೆ (Rape) ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿಯನ್ನು ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜಾ (32) ಎಂದು ಗುರುತಿಸಲಾಗಿದೆ. ಅಂತರಾಷ್ಟ್ರೀಯ ಪ್ರವಾಸಿಗರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಬಳಿ ಅಕ್ರಮವಾಗಿ ಮಸಾಜ್ ಸೇವೆಗಳನ್ನು ನೀಡುವ ಗುಂಪಿನವನಾಗಿದ್ದಾನೆ ಆರೋಪಿ ಡಿಸೋಜಾ. ಈತ ಈ ಹಿಂದೆ ಶಾಲಾ ಲೈಬ್ರರಿಯನ್ ಆಗಿಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪೆರ್ನೆಂ ಪೊಲೀಸರು ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ. ಮಧ್ಯ ವಯಸ್ಕರಾದ ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ದೂರುದಾಖಲಿಸಿದ್ದಾರೆ. ಗೋವಾ ಬೀಚ್ ಬಳಿಯ ಸ್ವೀಟ್ ವಾಟರ್ ಲೇಕ್ ಬಳಿ ಇದ್ದಾಗ ಮಸಾಜ್ ನೀಡುತ್ತೇನೆ ಎಂದು ಹೇಳಿ ಆರೋಪಿ ತನ್ನ ಸಂಗಾತಿಯ ಮುಂದೆಯೇ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಜೂನ್ 2ರಂದು ಈ ಘಟನೆ ನಡೆದಿದ್ದು ಮಹಿಳೆ ಯುಕೆಯಲ್ಲಿರುವ ತನ್ನ ಕುಟುಂಬ ಮತ್ತು ಭಾರತದಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ ಸೋಮವಾರ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಗಂಟೆಯೊಳಗೆ ವಿಕ್ರಮ್ ನಾಯಕ್ ನೇತೃತ್ವದ ಪೆರ್ನಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
“ನಾವು ಅವರ ಹಿಂದಿನ ದಾಖಲೆಗಳನ್ನು ಪಡೆಯಲು ಸಂಬಂಧಿಸಿದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. ಪ್ರಸ್ತುತ ಅವರು ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿಲ್ಲ” ಎಂದು ಅಧಿಕಾರಿ ಹೇಳಿದರು.
ಸೋಮವಾರ ರಾತ್ರಿ ಆರೋಪಿ ಮತ್ತು ಸಂತ್ರಸ್ತೆಯನ್ನು ಪಣಜಿ ಸಮೀಪದ ಮಾಪುಸಾ ಪಟ್ಟಣದ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು.ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 7 June 22