Kalaburagi News: ಚಾಕುವಿನಿಂದ ಇರಿದು ಸಹೋದರನ ಹತ್ಯೆ; ಕೊಲೆ ಆದ್ರೂ ಅಪಘಾತವೆಂದು ಬಿಂಬಿಸಿದ್ದ ಕುಟುಂಬ
ಅವರಿಬ್ಬರು ಸಹೋದರರು, ಇಬ್ಬರು ಚೆನ್ನಾಗಿಯೇ ಇದ್ದರು. ಇಬ್ಬರ ನಡುವೆ ಯಾವುದೇ ವೈಷ್ಯಮ ಇರಲಿಲ್ಲ. ಆದ್ರೆ, ನಿನ್ನೆ(ಜೂ.2) ಸಂಜೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಅದೇ ಸಿಟ್ಟಿನಲ್ಲಿ ಅಣ್ಣ, ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆದ್ರೆ, ಇಡೀ ಕುಟುಂಬದವರು, ಕೊಲೆಯಾಗಿಲ್ಲ, ಅಪಘಾತದಲ್ಲಿ ಮೃತಪಟ್ಟಿದ್ದಾನೆ ಅಂತ ಪೊಲೀಸರ ಮುಂದೆ ಕಥೆ ಹೇಳಿದ್ದರು. ತನಿಖೆ ಬಳಿಕ ಸತ್ಯಾಂಶ ಹೊರಬಿದ್ದಿದೆ. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು, ಅಣ್ಣನನ್ನು ಬಂಧಿಸಿದ್ದಾರೆ.
ಕಲಬುರಗಿ: ಚಾಕುವಿನಿಂದ ಇರಿದು ಯುವಕನೋರ್ವನ ಬರ್ಬರ ಕೊಲೆ ಮಾಡಲಾಗಿತ್ತು. ಕೊಲೆಯ ಸುದ್ದಿ ಕೇಳಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಬೇಕಿತ್ತು. ಆದ್ರೆ, ಅಲ್ಲಿ ಸಾವಿನ ನೋವು ಇದ್ದರು ಕೂಡ ಯಾರು ತಮ್ಮ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಿದ್ದರಿರಲಿಲ್ಲ. ಕೊಲೆಯಾಗಿದೆ ಅನ್ನೋದನ್ನು ಕೂಡ ಯಾರು ಹೇಳಲು ಒಪ್ಪಲಿಲ್ಲ. ಬದಲಾಗಿ ಅಪಘಾತವಾಗಿದೆ ಎಂದು ಹೇಳುತ್ತಿದ್ದರು. ಇತ್ತ ತಂದೆ ತನಗೆ ಮಗನ ಸಾವು ಹೇಗೆ ಅಂತ ಗೊತ್ತಿಲ್ಲ ಅಂತ ಹೇಳಿದ್ರೆ, ಅನೇಕರು ಕೊಲೆಯಲ್ಲ, ಅಪಘಾತ ಅಂತಲೇ ಹೇಳುತ್ತಿದ್ದರು. ಆ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಕೊಡಲು ಎಲ್ಲರು ಯತ್ನಿಸುತ್ತಿದ್ದರು. ಸ್ವತ ಪೊಲೀಸರಿಗೆ ಇದು ಶಾಕ್ ಉಂಟು ಮಾಡಿತ್ತು. ಯಾಕಂದ್ರೆ, ಕೊಲೆಯಾದ ವ್ಯಕ್ತಿಯ ಬೆನ್ನಿಗೆ ಚಾಕುವಿನಿಂದ ಇರಿದಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೂ ಕುಟುಂಬದವರು ಕೊಲೆಯಲ್ಲ, ಬದಲಾಗಿ ಬೈಕ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳುತ್ತಿರುವುದು ಹತ್ತಾರು ಅನುಮಾನ ಉಂಟು ಮಾಡಿತ್ತು. ಬಳಿಕ ಈ ಕುರಿತು ತನಿಖೆ ನಡೆಸಿದಾಗ ಸತ್ಯ ಬಟಾಬಯಲಾಗಿದೆ.
ಕಲಬುರಗಿ ತಾಲೂಕಿನ ಪಾಳಾ ಗ್ರಾಮದ 26 ವರ್ಷದ ಕಲ್ಲಪ್ಪ ಅನ್ನೋ ವ್ಯಕ್ತಿ ಜೂ.2ರ ರಾತ್ರಿ ಕೊಲೆಯಾಗಿದ್ದಾನೆ. ಗ್ರಾಮದಲ್ಲಿಯೇ ಪಶುಸಂಗೋಪನಾ ಇಲಾಖೆಯಲ್ಲಿ ಕಂಪೌಡರ್ ಆಗಿದ್ದ ಕಲ್ಪಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ್ದು ಬೇರಾರು ಅಲ್ಲ, ಒಡಹುಟ್ಟಿದ ಸಹೋದರನೇ ಕಲ್ಲಪ್ಪನನ್ನು ಕೊಲೆ ಮಾಡಿದ್ದ. ಹೌದು ನಿನ್ನೆ(ಮೇ.2) ರಾತ್ರಿ 8 ಗಂಟೆ ಸಮಯದಲ್ಲಿ ಕಲ್ಲಪ್ಪನನ್ನು ಹಿರಿಯ ಸಹೋದರ ಭೀಮು ಅನ್ನೋನು ಕೊಲೆ ಮಾಡಿದ್ದಾನೆ. ಭೀಮುಗೆ ಯಾವುದೋ ಕೆಲಸಕ್ಕೆ ಹಣ ಬೇಕಾಗಿತ್ತಂತೆ. ಹೀಗಾಗಿ ಸಹೋದರನಿಗೆ ಹಣ ಕೊಡುವಂತೆ ಕೇಳಿದ್ದಾನೆ. ಹೆತ್ತವರ ಜೊತೆ ಕೂಡ ಕಿರಿಕಿರಿ ಮಾಡಿಕೊಂಡಿದ್ದಾನೆ. ಆದ್ರೆ, ಸಹೋದರ ಕಲ್ಲಪ್ಪ ಹಣ ಕೊಡದೇ ಇದ್ದಾಗ, ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ
ಕಲ್ಲಪ್ಪ ತಾನೇ ಬೈಕ್ ಹತ್ತಿಕೊಂಡು ಆಸ್ಪತ್ರೆಗೆ ಹೋಗಲು ಮುಂದಾಗಿದ್ದಾನೆ. ಆದ್ರೆ, ಅದು ಸಾಧ್ಯವಾಗದೇ ಇದ್ದಾಗ ಬೈಕ್ ಮೇಲಿಂದ ಬಿದ್ದಿದ್ದಾನೆ. ನಂತರ ಕುಟುಂಬದವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಕಲ್ಲಪ್ಪ ಮೃತಪಟ್ಟಿದ್ದಾನೆ. ಕೊಲೆ ಮಾಡಿದ್ದು ಸಹೋದರನೆ ಆಗಿದ್ದರಿಂದ, ಒಬ್ಬ ಮಗ ಬಾರದ ಲೋಕಕ್ಕೆ ಹೋದ್ರೆ, ಇನ್ನೊಬ್ಬ ಮಗ ಜೈಲು ಪಾಲಾಗಬೇಕಾಗುತ್ತೆ ಅಂತ ತಿಳಿದ ಹೆತ್ತವರು ಮತ್ತು ಕುಟುಂಬದವರು, ಕೊಲೆ ಆಗಿಲ್ಲವೆಂದು ಹೇಳಲು ಆರಂಭಿಸಿದ್ದರು. ಆಸ್ಪತ್ರೆಯಲ್ಲಿ ಕೂಡ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ ಅಂತ ಹೇಳಿದ್ದರು. ಪೊಲೀಸರಿಗೆ ಕೂಡಾ ಇದೇ ಕಥೆ ಹೇಳಿದ್ದರು. ಆದ್ರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ತಮ್ಮನನ್ನು ಕೊಲೆ ಮಾಡಿದ್ದ ಸಹೋದರ ಭೀಮುನನ್ನು ಬಂಧಿಸಿರೋ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಸಹೋದರನ ಕೊಲೆ ಮಾಡಿದ್ದ ಪಾಪಿ, ನಂತರ ಕೊಲೆಯೇ ಆಗಿಲ್ಲ ಅಂತ ಸೀನ್ ಕ್ರಿಯೇಟ್ ಮಾಡಿ ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದ. ತಪ್ಪಿಗೆ ಪ್ರಾಯಶ್ಚಿತ ಪಡೋದು ಬಿಟ್ಟು, ತಪ್ಪೇ ಮಾಡಿಲ್ಲವೆಂದು ಹೇಳಿ, ಇದೀಗ ಕಂಬಿ ಹಿಂದೆ ಹೋಗಿದ್ದಾನೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ