ಅನ್ಯಕೋಮಿನ ಯುವತಿಗೆ ಹಲ್ಲೆ ಪ್ರಕರಣ; ಆರೋಪಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದ ಯುವತಿ
ಯುವಕನಮೊಬ್ಬ ರೋಷಾವೇಶದಿಂದ ಯುವತಿಗೆ ಚಪ್ಪಲಿಯಿಂದ ಥಳಿಸುವ ದೃಶ್ಯಗಳು ಸಿಸಿ ಕೆಮೆರಾ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಘಟನೆ ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿತ್ತು. ಈ ಪ್ರಕರಣ ಹಲ್ಲೆಗೊಳಗಾದ ಯುವತಿ ಹಾಗೂ ಆಕೆಯ ಕುಟುಂಬಸ್ಥರು ವಿಜಯಪುರ ಗ್ರಾಮೀಣ ಠಾಣೆಗೆ ಆಗಮಿಸಿದ್ದಾರೆ. ಇದೇ ವೇಳೆ ಮಾತನಾಡಿದ ಯುವತಿ, ನನಗೆ ಆರೋಪಿ ಶ್ರೀಶೈಲ್ ಮಸಳಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ.
ವಿಜಯಪುರ, ಫೆ.13: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಅನ್ಯಕೋಮಿನ ಯುವತಿಗೆ ಯುವಕ ಶ್ರೀಶೈಲ್ ಮಸಳಿ ಚಪ್ಪಲಿಯಿಂದ ಹಲ್ಲೆ (Assault) ಮಾಡಿದ್ದ ಪ್ರಕರಣ ಸಂಬಂಧ ಹಲ್ಲೆಗೊಳಗಾದ ಯುವತಿ ಮತ್ತು ಆಕೆಯ ಕುಟುಂಬಸ್ಥರು ವಿಜಯಪುರ (Vijayapura) ಗ್ರಾಮೀಣ ಠಾಣೆಗೆ ಆಗಮಿಸಿದ್ದಾರೆ. ಹಲ್ಲೆ ಮಾಡಿದ ಶ್ರೀಶೈಲ್ ಮಸಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆ ಆವರಣದಲ್ಲಿ ಯುವತಿ ಆಗ್ರಹಿಸಿದ್ದಾಳೆ.
ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ, ನನಗೆ ಶ್ರೀಶೈಲ್ ಮಸಳಿ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ. ನಿನ್ನೆ ನಾನು ನಮ್ಮೂರಿನಿಂದ ನಾಗಠಾಣ ಗ್ರಾಮಕ್ಕೆ ಬಂದು ಕಂಪ್ಯೂಟರ್ ಸೆಂಟರ್ನಲ್ಲಿ ಕೆಲಸಕ್ಕೆ ಬಂದಿದ್ದೆ. ಬಸ್ ನಿಲ್ದಾಣದ ಬಳಿ ನನಗೆ ಆತ ಚುಡಾಯಿಸಿದ್ದ. ಈ ವೇಳೆ ಆತನಿಗೆ ಎಚ್ಚರಿಕೆ ನೀಡಿ ಕೆಲಸಕ್ಕೆ ಹೋಗಿದ್ದೆ ಎಂದಳು.
ಇದನ್ನೂ ಓದಿ; ಅನ್ಯಕೋಮಿನ ಯುವತಿಗೆ ಚಪ್ಪಲಿಯಿಂದ ಥಳಿಸಿದ ನಾಗಠಾಣಾ ಯುವಕ, ಪರಾರಿ
ಅಲ್ಲದೆ, ನಾನು ಕೆಲಸ ಮಾಡುತ್ತಿದ್ದ ಕಚೇರಿಗೆ ಬಂದು ಹೊರಗೆಳೆದು ಚಪ್ಪಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲವು ದಿನಗಳಿಂದ ನನಗೆ ಚುಡಾಯಿಸುತ್ತಿದ್ದ, ಆದರೂ ನಾನು ಮನೆಯಲ್ಲಿ ಈ ವಿಚಾರ ತಿಳಿಸಿದಿಲ್ಲ. ನಿನ್ನೆ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಳು.
ನನ್ನ ಮಗಳಿಗೆ ಆಗಿರುವ ಅನ್ಯಾಯ ಬೇರೆ ಮಕ್ಕಳಿಗೆ ಆಗಬಾರದು ಎಂದು ಯುವತಿ ತಾಯಿ ರೇಷ್ಮಾ ಮನವಿ ಮಾಡಿದ್ದಾರೆ. ಕೆಲಸಕ್ಕೆ ಬಂದ ಯುವತಿ ಮೇಲೆ ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ. ಹಲ್ಲೆ ಮಾಡಿದ ಶ್ರೀಶೈಲ್ ಮಸಳಿ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಏನಿದು ಪ್ರಕರಣ?
ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದಲ್ಲಿ ಆರೋಪಿ ಶ್ರೀಶೈಲ ಅನ್ಯಕೋಮಿನ ಯುವತಿಗೆ ಕೆಲ ದಿನಗಳಿಂದ ಚುಡಾಯಿಸುತ್ತಿದ್ದ. ನಿನ್ನೆ ಯುವತಿ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ತೆರಳುವಾಗ ಮತ್ತೆ ಮತ್ತೆ ಚುಡಾಯಿಸಿದ್ದಾನೆ. ಆಗ ಅನ್ಯ ಕೋಮಿನ ಯುವತಿಯು ಯುವಕನಿಗೆ ಚಪ್ಪಲಿ ತೋರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಶ್ರೀಶೈಲ ಕಂಪ್ಯೂಟರ್ ತರಬೇತಿ ಕೇಂದ್ರದ ಒಳ ಹೋಗಿ ಯುವತಿಯನ್ನು ಹೊರ ತಂದು ಚಪ್ಪಲಿಯಿಂದ ಥಳಿಸಿದ್ದನು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ